More

    ತುಂತುರು ಮಳೆ, ಸಂಕಷ್ಟಕ್ಕೆ ಸಿಲುಕಿದ ರೈತ, ಕಡಲೆ, ಜೋಳಕ್ಕೆ ಹೆಚ್ಚಿನ ಹಾನಿ, ತೊಗರಿ, ಭತ್ತ ರಾಶಿಗೆ ಅಡ್ಡಿ

    ರಾಯಚೂರು: ಉತ್ತಮ ಮಳೆಯಾಗಿ ಫಸಲು ಚೆನ್ನಾಗಿ ಬರುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಈ ಹಿಂದೆ ಅತಿವೃಷ್ಟಿ, ಪ್ರವಾಹದಿಂದ ನಷ್ಟ ಅನುಭವಿಸಿದ್ದರು. ಈಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಪುನಃ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

    ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಕಡಲೆ, ಬಿಳಿ ಜೋಳ, ತೊಗರಿ ಮತ್ತು ಹತ್ತಿ ಬೆಳೆ ಹಾನಿಗೊಳಗಾಗುವ ಭೀತಿ ಎದುರಾಗಿದೆ. ಅದರಲ್ಲೂ ತೊಗರಿ ಮತ್ತು ಭತ್ತ ಕಟಾವು ನಡೆಯುತ್ತಿದ್ದು, ಮಳೆಗೆ ಕಟಾವು ಮಾಡಲಾದ ಭತ್ತ ಮತ್ತು ತೊಗರಿ ನೆನೆದು ಕಪ್ಪಾಗಿ ಉತ್ತಮ ಬೆಲೆ ಸಿಗದಂತಾಗಲಿದೆ.

    ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 80,917 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 98,514 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 1.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ನಾಟಿ ಮಾಡಲಾಗಿದೆ. ಬಹುತೇಕ ಭತ್ತ ಕಟಾವು ಮುಗಿದಿದ್ದು, ತಡವಾಗಿ ನಾಟಿ ಮಾಡಿದವರು ಕಟಾವು ಮಾಡಬೇಕಾಗಿದೆ.

    ತೊಗರಿ ಕಟಾವು ಕೂಡಾ ಮುಗಿಯುತ್ತಾ ಬಂದಿದ್ದು, ರಾಶಿ ಮಾಡುವಾಗ ಬೆಳೆ ನೀರಿಗೆ ನೆನೆದು ಹಾಳಾಗುವಂತಾಗಿದೆ. ತುಂತುರು ಮಳೆಗೆ ಹತ್ತಿ ನಾಶವಾಗುವ ಆತಂಕ ಎದುರಾಗಿದೆ. ಹತ್ತಿ ಬಿಡಿಸಲು ಕೂಡಾ ಸಾಧ್ಯವಾಗದಂತಾಗಲಿದೆ. ಇದರಿಂದ ಹತ್ತಿ ಬೆಳೆದ ರೈತರು ನಷ್ಟಕ್ಕೆ ಗುರಿಯಾಗುವ ಸಾಧ್ಯತೆಯಿದೆ.

    ಮಳೆಗೆ ಕಡಲೆಯ ಹೂವು ಉದುರಿ ಬೆಳೆ ಕೈಗೆ ಬಾರದಂತಾಗಲಿದ್ದು, ಕೀಟಗಳ ಹಾವಳಿ ಹೆಚ್ಚಾಗುವ ಆತಂಕ ಮೂಡಿದೆ. ಜೋಳ ತೆನೆ ಬಿಟ್ಟಿದ್ದು, ಮಳೆಯಿಂದಾಗಿ ಕಾಳು ಕಪ್ಪಾಗಿ ಉತ್ತಮ ಬೆಲೆ ದೊರೆಯದೆ ರೈತರು ನಷ್ಟಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ತುಂತುರು ಮಳೆ ಸಂಕಷ್ಟವನ್ನು ತಂದೊಂಡಿದ್ದು, ಹತ್ತಿ ಮತ್ತು ಕಡಲೆ ಬಿತ್ತನೆ ಮಾಡಿದ ರೈತರು ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣ ಮರೆಯಾದರೆ ಸಾಕು ಎಂದು ರೈತರು ಕಾದು ಕುಳಿತುಕೊಳ್ಳುವಂತಾಗಿದೆ.

    ತುಂತುರು ಮಳೆ, ಸಂಕಷ್ಟಕ್ಕೆ ಸಿಲುಕಿದ ರೈತ, ಕಡಲೆ, ಜೋಳಕ್ಕೆ ಹೆಚ್ಚಿನ ಹಾನಿ, ತೊಗರಿ, ಭತ್ತ ರಾಶಿಗೆ ಅಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts