More

    ಜಾನುವಾರು ಅಕ್ರಮ ಸಾಗಣೆಗೆ ತಡೆಗೆ ತಂಡ ರಚನೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸೂಚನೆ

    ರಾಯಚೂರು: ಪ್ರಾಣಿ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಹಾಗೂ ಜಾನುವಾರುಗಳ ಅಕ್ರಮ ಸಾಗಣೆ ತಡೆ ಕಾನೂನು ಪರಿಪಾಲನೆ ನಿರಂತರ ತನಿಖೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸೂಚಿಸಿದರು.

    ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಾಣಿ ಹತ್ಯೆ ತಡೆ ಕಾಯ್ದೆ ಮೇಲುಸ್ತುವಾರಿ ಸಭೆಯಲ್ಲಿ ಮಾತನಾಡಿದರು. ಕಂದಾಯ ನಿರೀಕ್ಷಕರು, ಪಿಡಿಒ, ಎಎಸ್‌ಐ, ಎಪಿಎಂಸಿ ಅಧಿಕಾರಿಗಳು ದನದ ಸಂತೆ ನಡೆಯುವ ಸ್ಥಳದಲ್ಲಿದ್ದು ಅಕ್ರಮ ಸಾಗಣೆ ಮೇಲೆ ನಿಗಾ ವಹಿಸಬೇಕು ಎಂದರು.

    ಪೂರಕ ದಾಖಲೆಗಳಿಲ್ಲದೆ ಜಾನುವಾರುಗಳ ಸಾಗಣೆ ಮಾಡುವವರ ವಿರುದ್ಧ ಕೇಸ್ ದಾಖಲಿಸಬೇಕು. ಜಿಲ್ಲೆಯಲ್ಲಿನ 14 ಚೆಕ್‌ಪೋಸ್ಟ್‌ಗಳಲ್ಲಿದ್ದು, ಪೆಟ್ರೋಲಿಂಗ್ ಮಾಡುವ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜನರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಬಿ.ನಿಖಿಲ್ ಹೇಳಿದರು.

    ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶ ಮಾತನಾಡಿ, ಸಿಂಧನೂರು, ರಾಯಚೂರು ನಗರಸಭೆ ಹಾಗೂ ಐದು ಪಟ್ಟಣ ಪಂಚಾಯಿತಿ, ಪುರಸಭೆಗಳು ಬಕ್ರೀದ್ ಹಬ್ಬದ ನಿಮಿತ್ತ ತ್ಯಾಜ್ಯ ವಿಲೇವಾರಿ ಮಾಡಲು ಆದ್ಯತೆ ನೀಡಬೇಕು. ಸಿಬ್ಬಂದಿಯನ್ನು ನಿಯುಕ್ತಿಗೊಳಿಸಿ ಮಾಂಸ ತ್ಯಾಜ್ಯವನ್ನು ತೆರವುಗೊಳಿಸಬೇಕು. ಜಾನುವಾರುಗಳ ಅಕ್ರಮ ಸಾಗಣೆಯನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು. ಸಾಗಣೆ ಕಂಡು ಬಂದಲ್ಲಿ ಅಂತವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಣ್ಣ, ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ನೈರ್ಮಲ್ಯ ನಿರೀಕ್ಷಕ ಮಲ್ಲಿಕಾರ್ಜುನ ಹಾಗೂ ವಿವಿಧ ಇಲಾಖೆ ಆಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts