ರಾಯಚೂರು: ಕಳೆದ 10 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡಬೇಕು, ಹೊರತು ಸುಳ್ಳು ಆಶ್ವಾಸನೆಗಳಿಗಲ್ಲ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದ ಯರಮರಸ್‌ನಲ್ಲಿ ಶುಕ್ರವಾರ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದರು. ಕ್ಷೇತ್ರದ ಜನರು ತೋರಿಸುತ್ತಿರುವ ಪ್ರೀತಿಗೆ ನಾನು ಸದಾ ಋಣಿಯಾಗಿದ್ದು, ಮತ್ತೊಂದು ಬಾರಿ ಜನರ ಸೇವೆ ಸಲ್ಲಿಸಲು ಆಶೀರ್ವಾದ ಮಾಡಬೇಕು.
ಜಿಲ್ಲೆಗೆ ವಿಮಾನ ನಿಲ್ದಾಣ, ಟೆಕ್ಸ್‌ಟೈಲ್ ಪಾರ್ಕ್, ಐಐಐಟಿ ನೀಡಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕಿದೆ. ನಾನು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದು, ಜನರು ಆಶೀರ್ವಾದ ಮಾಡಿದರೆ ಕ್ಷೇತ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಬಡಾವಣೆ ಅಭಿವೃದ್ಧಿಗೆ ಅನುದಾನ ಭರವಸೆ
ನಂತರ ಯಕ್ಲಾಸಪುರ ಬಡಾವಣೆಯಲ್ಲಿ ಮತಯಾಚನೆ ಮಾಡಿದರು. ಬಡಾವಣೆಯಲ್ಲಿನ ಸ್ಲಂ ನಿವಾಸಿಗಳಿಗೆ ಸೂರು ಒದಗಿಸುವ ಕೆಲಸ ಮಾಡುವೆ. ಗ್ರಾಮದ ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ. ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಅವಕಾಶ ನೀಡಿದರೆ ಬಡಾವಣೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಾಜ್ಯಕ್ಕೆ ಬರಲಿದ್ದಾನೆ ಪಿಎಂ ಮಿತ್ರ: ಪ್ರಧಾನಿ ಮೋದಿ ಘೋಷಣೆ; ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ
ಬಡಾವಣೆಗೆ ಆಗಮಿಸಿದ ಡಾ.ಶಿವರಾಜ ಪಾಟೀಲ್‌ರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ತೀನ್ ಕಂದೀಲ್‌ನಲ್ಲಿನ ಹಣ್ಣು ಮಾರಾಟಗಾರರ ಸಂಘದ ಪದಾಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಡಾ.ಶಿವರಾಜ ಪಾಟೀಲ್ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದರು.