More

    ಚುನಾವಣಾ ಆಯೋಗದ ಹೆಸರಿಗೆ ಬೇರೆಯೇ ಅರ್ಥ ಕಲ್ಪಿಸಿದ ರಾಹುಲ್ ಗಾಂಧಿ !

    ನವದೆಹಲಿ : ಎಲೆಕ್ಷನ್ ಕಮಿಷನ್ ಆಫ್ ಇಂಡಿಯ ಅರ್ಥಾತ್ ಭಾರತೀಯ ಚುನಾವಣಾ ಆಯೋಗ ದೇಶದಲ್ಲಿ ವ್ಯವಸ್ಥಿತ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊಂದಿದೆ. ಈಗ ನಾಲ್ಕು ರಾಜ್ಯಗಳಲ್ಲಿ ಮತ್ತು ಪುದುಚೆರಿಯಲ್ಲಿ ನಡೆಯುತ್ತಿರುವ ಚುನಾವಣೆಯ ಸಂದರ್ಭದಲ್ಲೂ ಈ ಹಿರಿದಾದ ಕರ್ತವ್ಯವನ್ನು ನಿಭಾಯಿಸುತ್ತಿದೆ. ಈ ಕಾರ್ಯ ಮಾಡುವಾಗ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ತಮ್ಮ ಎದುರಾಳಿಗಳಿಗೆ ಸಹಾಯ ಮಾಡುವ ರೀತಿ ಆಯೋಗ ನಡೆದುಕೊಳ್ಳುತ್ತಿದೆ ಎಂಬ ಗುಮಾನಿ ವ್ಯಕ್ತಪಡಿಸುವುದು, ಆರೋಪ ಮಾಡುವುದು ನಡೆಯುತ್ತಲೇ ಇರುತ್ತದೆ.

    ಇದೇ ರೀತಿಯ ಅಸಮಾಧಾನವನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಕಾರ್ಯದ ಬಗ್ಗೆ ತೋರುತ್ತಿದೆ. ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ಪರ ಪಕ್ಷಪಾತೀಯ ಮನೋಭಾವ ತಾಳಿದೆ ಎಂದು ಆರೋಪಿಸುತ್ತಾ ಇದೆ. ಆದರೆ ಈ ಆಕ್ಷೇಪಗಳನ್ನು ಬೇರೆಯೇ ಮಟ್ಟಕ್ಕೆ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಕೊಂಡೊಯ್ದಿದ್ದಾರೆ. ಏಪ್ರಿಲ್ 3 ರಂದು ಟ್ವಿಟರ್​ನಲ್ಲಿ ಎಲೆಕ್ಷನ್ “ಕಮಿಷನ್” ಎಂದು ಟ್ವೀಟ್ ಮಾಡಿದ್ದಾರೆ! ಕಮಿಷನ್ ಎಂಬ ಪದವನ್ನು ಹೈಲೈಟ್ ಮಾಡಿ ಚಿಹ್ನೆಗಳನ್ನು ಹಾಕಿರುವ ಗಾಂಧಿ, ಆಯೋಗದ ಹೆಸರನ್ನು ಬೇರೆ ರೀತಿಯಲ್ಲಿ ಅರ್ಥೈಸಿ ಗಂಭೀರ ಆರೋಪ ಹೊರಿಸಿದ್ದಾರೆ.

     

    ರಾಹುಲ್​ರ ಈ ಟ್ವೀಟ್ ಬಗ್ಗೆ ನೆಟ್ಟಿಗರ ನಡುವೆ ಮತ್ತು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಕೆಲವರು ಕಾಂಗ್ರೆಸ್ ಪರ, ಕೆಲವರು ಬಿಜೆಪಿ ಪರ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಸಂವಿಧಾನಾತ್ಮಕವಾದ ಉನ್ನತ ಸಂಸ್ಥೆಯೊಂದರ ಬಗ್ಗೆ ಈ ರೀತಿ ಸಾರಾಸಗಟಾದ ಆರೋಪ ಹೊರಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿ ಮೂಡಿಬಂದಿದೆ.

    ಇದನ್ನೂ ಓದಿ: ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

    ಅಷ್ಕಕ್ಕೂ ರಾಹುಲ್​ರ ಈ ಕೋಪಕ್ಕೆ ಕಾರಣ ಏನು ಗೊತ್ತೆ ? ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂಗಳನ್ನು ಸಾಗಿಸುತ್ತಿದ್ದ ಪ್ರಸಂಗ ಮತ್ತು ಬಿಜೆಪಿಯ ಹಿಮಂತ ಸರ್ಮ ಮೇಲಿನ ಕ್ಯಾಂಪೇನ್ ಬ್ಯಾನ್​ ಬಗ್ಗೆ ಆಯೋಗ ತೆಗೆದುಕೊಂಡ ಕ್ರಮಗಳು. ಇವಿಎಂ ಪ್ರಕರಣದಲ್ಲಿ ಆಯೋಗವು ಈಗಾಗಲೇ ರತಬರಿ ಕ್ಷೇತ್ರದ ಸಂಬಂಧಿತ ಮತಗಟ್ಟೆಯಲ್ಲಿ ಮರುಮತದಾನ ಆದೇಶಿಸಿ, ನಾಲ್ಕು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಕಾಂಗ್ರೆಸ್ ಜೊತೆ ಕೈಗೂಡಿಸಿರುವ ಬಿಪಿಎಫ್ ಪಕ್ಷದ ಹಗ್ರಾಮ ಮೊಹಿಲರಿ ಅವರಿಗೆ ಬಹಿರಂಗವಾಗಿ ಧಮ್​ಕಿ ನೀಡಿದ ಬಿಜೆಪಿ ನಾಯಕ ಹಿಮಂತ ಸರ್ಮ ಅವರ ಮೇಲೆ ಆಯೋಗ 48 ಗಂಟೆಗಳ ಕ್ಯಾಂಪೇನ್ ಬ್ಯಾನ್​ಅನ್ನು ವಿಧಿಸಿ, ನಂತರ 24 ಗಂಟೆಗೆ ಕಡಿತಗೊಳಿಸಿದೆ.

    ಈ ಮುನ್ನವೂ ಗಾಂಧಿ ಆಯೋಗದ ವಿರುದ್ಧ ವಾಕ್​ಪ್ರಹಾರ ನಡೆಸಿದ್ದರು. ಹಿಂದಿಯಲ್ಲಿ ಬರೆದ ಟ್ವೀಟ್​ ಒಂದರಲ್ಲಿ “ಚುನಾವಣಾ ಆಯೋಗದ ಕಾರು ಕೆಟ್ಟಿದೆ, ಬಿಜೆಪಿಯ ಉದ್ದೇಶಗಳು ಕೆಟ್ಟಿವೆ, ಪ್ರಜಾಪ್ರಭುತ್ವದ ಪರಿಸ್ಥಿತಿ ಕೆಟ್ಟಿದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದರು. (ಏಜೆನ್ಸೀಸ್)

    ಐಸಿಸ್ ಸೇರಲು ಹೊರಟಿದ್ದ ಅಮೆರಿಕನ್ ದಂಪತಿ ! ಮಾರ್ಗದಲ್ಲೇ ಬಂಧನ

    ಹಠಾತ್ತನೇ ಭಾಷಣ ನಿಲ್ಲಿಸಿದ ಮೋದಿ! ವೈದ್ಯರ ತಂಡವನ್ನು ಕರೆದಿದ್ದೇಕೆ ?

    “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts