More

    ರಾಹುಲ್ ಕಾರ್ಯಕ್ರಮಕ್ಕೆ ಕಡೆಗಣನೆ; ಚಿತ್ರದುರ್ಗದಲ್ಲಿ ಪಕ್ಷದ ಕಚೇರಿ ಬೀಗ ತೆರೆಯಲು ಅಡ್ಡಿ

    ಚಿತ್ರದುರ್ಗ: ಮುರುಘಾ ಮಠದಲ್ಲಿ ನಿಗದಿಯಾಗಿದ್ದ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ತೆರಳಲು ಅವಕಾಶ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ದಾವಣಗೆರೆಯಲ್ಲಿ ಬುಧವಾರ ನಡೆದ ಸಿದ್ದರಾಮೋತ್ಸವಕ್ಕೆಂದು ಬಂದಿದ್ದ ರಾಹುಲ್ ಗಾಂಧಿ ಅವರು ಇಲ್ಲಿನ ಮುರುಘಾ ಮಠಕ್ಕೆ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಪಾಸ್ ನೀಡದೆ ಕಡೆಗಣಿಸಲಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರ ಹಾಕಿದರು.

    ರಾಹುಲ್ ಕಾರ್ಯಕ್ರಮದ ಪಾಸ್ ವಿತರಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಸಿಟ್ಟಿಗೆದ್ದ ಕಾರ್ಯಕರ್ತರು ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಬೀಗ ತೆರೆಯಲು ಅಡ್ಡಿಪಡಿಸಿದರು. ಈ ವೇಳೆ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

    ಕಚೇರಿ ಬಾಗಿಲು ತೆಗೆಯಲು ಅವಕಾಶ ಕೊಡುವುದಿಲ್ಲವೆಂದು ಪಟ್ಟು ಹಿಡಿದರಲ್ಲದೆ, ಪಕ್ಷದಲ್ಲಿ ದುಡಿದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಏರು ದನಿಯಲ್ಲೇ ಪ್ರಶ್ನಿಸಿದರು.

    ತಾಜ್‌ಪೀರ್, ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ ಮತ್ತಿತರರು, ಪ್ರತಿಭಟನಾನಿರತ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕಚೇರಿ ಒಳಗೆ ಕುಳಿತು ಚರ್ಚಿಸೋಣವೆಂದು ಮನವೊಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡ ದೂರವಾಣಿ ಮುಖೇನ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಅಹವಾಲು ಆಲಿಸಿದರು.

    ಕುಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಎಸ್‌ಟಿ ಸೆಲ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ವಿವಿಧ ಘಟಕಗಳ ಪ್ರಮುಖರಾದ ಅಂಜಿನಪ್ಪ, ಅಶೋಕ್ ನಾಯ್ಡು, ಮುದಸೀರ್, ಎನ್.ಡಿ.ಕುಮಾರ್, ಪ್ರಕಾಶ ನಾಯ್ಕ, ಅಬ್ದುಲ್ಲಾ, ವಾಸಿಂ, ಮೊಹಮದ್ ಆಜಂ ಮತ್ತಿತರ ಕಾರ್ಯಕರ್ತರು ಇದ್ದರು.

    ರಾಹುಲ್‌ಗಾಂಧಿ ಅವರ ಕಾರ್ಯಕ್ರಮ ತರಾತುರಿಯಲ್ಲಿ ಫಿಕ್ಸ್ ಆಗಿದ್ದರಿಂದಾಗಿ ಪಾಸ್ ವಿತರಣೆಯಲ್ಲಿ ಗೊಂದಲವಾಗಿದೆ. ಮಳೆ ಬಂದಿದ್ದರಿಂದ ಯೋಜಿಸಿದ್ದ ರೀತಿಯಲ್ಲಿ ಕೆಲವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಲಾಗಿದೆ. ಗೊಂದಲ ಬಗೆಹರಿದಿದೆ.
    ಎಂ.ಕೆ. ತಾಜ್‌ಪೀರ್, ಜಿಲ್ಲಾ ಕಾಂಗ್ರೆಸ್ ಅಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts