More

    ಕೂಡಲಸಂಗಮಕ್ಕೆ ಇಂದು ರಾಹುಲ್ ಗಾಂಧಿ ಆಗಮನ

    ಕೂಡಲಸಂಗಮ: ಬಸವ ಧರ್ಮ ಪೀಠ, ಬಸವ ಉತ್ಸವ ಸಮಿತಿ ಇಲ್ಲಿಯ ಸಭಾ ಭವನದಲ್ಲಿ ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಏ. 23 ರಂದು ಕೂಡಲ ಸಂಗಮಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

    ಕೂಡಲಸಂಗಮ ಯಾತ್ರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಯವರು ಬಸವಣ್ಣನವರ ಐಕ್ಯ ಸ್ಥಳ, ಸಂಗಮನಾಥ ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ. ಇದು ಸಂಪೂರ್ಣ ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಪಕ್ಷದ ಆಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು. ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ಇಲಕಲ್ಲ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮತ್ಯುಂಜಯ ಸ್ವಾಮೀಜಿ ಸೇರಿದಂತೆ 20ಕ್ಕೂ ಅಧಿಕ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸುವರು. ಸ್ವ ಇಚ್ಛೆಯಿಂದ ರಾಜಕೀಯ ಮುಖಂಡರು ಪಾಲ್ಗೊಳ್ಳಬಹುದು ಎಂದು ಹೇಳಿದರು.

    ಸಮಾರಂಭದಲ್ಲಿ ರಾಹುಲ್ ಗಾಂಧಿ ಬಸವ ತತ್ವ ಅಳವಡಿಸಿಕೊಂಡ ಕುರಿತು ಮಾತನಾಡುವರು ಎಂದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಮಹಾಂತೇಶ ಪಾಟೀಲ, ನಾಗರಾಜ ಹದ್ಲಿ, ಎಐಸಿಸಿ ಕಾರ್ಯದರ್ಶಿ ಚೇತನ ಚವ್ಹಾನ ಮುಂತಾದವರು ಇದ್ದರು.

    ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿಯವರನ್ನು ಭೇಟಿಯಾಗಿ ಕಾರ್ಯಕ್ರಮದ ಕುರಿತು ಚರ್ಚಿಸಿದರು, ನಂತರ ಬಸವ ಮ್ಯೂಸಿಯಂಗೆ ಭೇಟಿ ನೀಡಿದರು.

    ರಾಹುಲ್ ಗಾಂಧಿಯವರು ಬೆಳಗ್ಗೆ 7:20ಕ್ಕೆ ದೆಹಲಿಯಿಂದ ವಿಮಾನದ ಮೂಲಕ 9:30ಕ್ಕೆ ಹೈದ್ರಾಬಾದ್‌ಗೆ ಬರುವರು, ಹೈದ್ರಾಬಾದ್‌ನಿಂದ 10ಕ್ಕೆ ವಿಮಾನದ ಮೂಲಕ ಹೊರಟು 10:30ಕ್ಕೆ ಹುಬ್ಬಳ್ಳಿಗೆ ಬರುವರು. 10:50ಕ್ಕೆ ಹುಬ್ಬಳಿಯಿಂದ ಕೂಡಲಸಂಗಮಕ್ಕೆ ಹೆಲಿಕಾಪ್ಟರ್ ಮೂಲಕ 11:50ಕ್ಕೆ ಆಗಮಿಸುವರು. ಬಸವಣ್ಣ ಐಕ್ಯಮಂಟಪ, ಸಂಗಮನಾಥನ ದರ್ಶನ ಪಡೆದು 12:15 ರಿಂದ 1:30ರ ವರೆಗೆ ಸಭಾ ಭವನದಲ್ಲಿ ನಡೆಯುವ ಬಸವ ಜಯಂತಿ ಸಮಾರಂಭದಲ್ಲಿ ಪಾಲ್ಗೊಳುವರು. ನಂತರ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿ, ಎರಡು ಗಂಟೆ ಯಾತ್ರಿ ನಿವಾಸಲ್ಲಿ ತಂಗುವರು. 5 ಗಂಟೆಗೆ ಕೂಡಲಸಂಗಮ ದಿಂದ ವಿಜಯಪುರಕ್ಕೆ ಹೆಲಿಕಾಪ್ಟರ್ ಮೂಲಕ ಹಿಂದಿರುಗಲಿದ್ದಾರೆ. ಕೂಡಲಸಂಗಮ ಅಭಿವದ್ಧಿ ಮಂಡಳಿ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿದ್ದರು. ಅಧಿಕ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಂಡಿದೆ.

    ಬಸವಣ್ಣನ ಬಗ್ಗೆ ಅಪಾರ ಗೌರವ: ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಬಗ್ಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಅಪಾರ ಗೌರವ, ಆಸಕ್ತಿ ಹೊಂದಿದ್ದು, ಇದೇ ಕಾರಣಕ್ಕಾಗಿ ಬಸವ ಜಯಂತಿ ಸಂದರ್ಭದಲ್ಲಿ ಏ.23ಕ್ಕೆ ಕೂಡಲಸಂಗಮಕ್ಕೆ ಭೇಟಿ ಕೊಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ಬಸವಣ್ಣನವರು ಸಮಾನತೆ ತತ್ವವನ್ನು ಸಾರಿದರು. ಜಾತಿರಹಿತ ಸುಂದರ ಸಮಾಜ ನಿರ್ಮಾಣದ ಕನಸು ಕಂಡು ಸಮಾಜದಲ್ಲಿ ಸಮಾನತೆ ಬೇರೂರಲು ಕಾರಣರಾದರು. ಅವರ ಬಗ್ಗೆ ರಾಹುಲ್‌ಗಾಂಧಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಅವರಿಗೆ ಗೌರವ ಸಮರ್ಪಿಸುವುದಕ್ಕಾಗಿ ಕೂಡಲಸಂಗಮಕ್ಕೆ ಭೇಟಿ ಕೊಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಐಸಿಸಿ ಕಾರ್ಯದರ್ಶಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಕ್ರಿಸ್ಟೋರ್ ತಿಲಕ್ ಮಾತನಾಡಿ, ದೇಶವನ್ನು ಶಾಂತಿ, ಸಮೃದ್ಧ ರಾಷ್ಟ್ರವನ್ನಾಗಿಸಿ ಹಾಗೂ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂಬುದು ರಾಹುಲ್‌ಗಾಂಧಿ ಕನಸಾಗಿದೆ ಎಂದರು.ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಎಐಸಿಸಿ ಸಂಯೋಜಕ ಮಂಜುನಾಥ ವಾಸನದ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಒಬಿಸಿ ಘಟಕದ ಅಧ್ಯಕ್ಷ ಕಾಶಿನಾಥ ಹುಡೇದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts