More

    ಬಸವನ ಹುಳು ಕಾಟ ಬಸವಳಿದ ರೈತ

    ರಬಕವಿ/ಬನಹಟ್ಟಿ: ಕೋವಿಡ್ ಮಹಾಮಾರಿಯಿಂದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತರೀಗ ಬಸವನ ಹುಳುವಿನ ಕಾಟಕ್ಕೆ ಬಸವಳಿದು ಹೋಗಿದ್ದು, ಬೆಳೆಗಳ ರಕ್ಷಣೆಗೆ ಶ್ರಮಪಡುತ್ತಿದ್ದಾರೆ.

    ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ, ನಾವಲಗಿ ಗ್ರಾಮಗಳಲ್ಲಿ ಬಸವನ ಹುಳುಗಳ ಕಾಟ ಹೆಚ್ಚಾಗಿದೆ. ಬೆಳೆಗಳಿಂದ ಅವುಗಳನ್ನುತೆರವುಗೊಳಿಸಲು ರೈತರು ಕೂಲಿಕಾರ್ಮಿಕರ ಮೊರೆ ಹೋಗಿದ್ದು, ಆದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
    ಕಳೆದ ಹಲವಾರು ವರ್ಷಗಳಿಂದ ಈ ಬಸವನ ಹುಳುವಿನ ಕಾಟದಿಂದ ಈ ಭಾಗದ ರೈತರು ತತ್ತರಿಸಿ ಹೋಗಿದ್ದಾರೆ. ಮಳೆಗಾಲ ಆರಂಭಕ್ಕೂ ಒಂದು ವಾರ ಮೊದಲೇ ಭೂಮಿಯಿಂದ ಇರುವೆಯಂತೆ ಮೇಲೇಳುವ ಈ ಹುಳುಗಳು ಒಂದೇ ದಿನದಲ್ಲೇ ಸಾವಿರಾರು ಮರಿಗಳು ಜನ್ಮತಳಿಯುತ್ತವೆ. ಸಂಜೆ ಕತ್ತಲಾಗುತ್ತಿದ್ದಂತೆ ಬೆಳೆಯನ್ನು ತಿನ್ನಲು ಪ್ರಾರಂಭಿಸಿದರೆ ಬೆಳಗಾಗುವುದರೊಳಗಾಗಿ ಹೊಲವನ್ನೇ ಸಂಪೂರ್ಣ ಖಾಲಿ ಮಾಡುತ್ತವೆ ಎನ್ನುತ್ತಾರೆ ರೈತರು.

    ಬಾಳೆ, ಪಪ್ಪಾಯಿ, ಅರಿಶಿಣ, ವೀಳ್ಳೆದೆಲೆ ಸೇರಿ ಕಾಯಿಪಲ್ಲೆಗಳ ಬೆಳೆಗಳನ್ನು ದಿನವಿಡಿ ಗುಂಪಾಗಿ ಹಾಳು ಮಾಡುತ್ತವೆ. ಅದರಲ್ಲೂ ಕಾಯಿಪಲ್ಲೆಗಳನ್ನು ಬೆಳೆಗಳ ಮೇಲೆ ಹೆಚ್ಚು ದಾಳಿ ಮಾಡುತ್ತವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಔಷಧಗಳನ್ನು ಕೊಟ್ಟರು ಇವುಗಳ ಹತೋಟಿ ಸಂಪೂರ್ಣವಾಗಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಗದಾಳದ ಪ್ರಗತಿಪರ ರೈತ ಸದಾಶಿವ ಬಂಗಿ.

    ಹತೋಟಿ ಕಷ್ಟ
    ಬಸವನ ಹುಳುಗಳ ಹಾವಳಿ ನಿಯಂತ್ರಸಲು ರೈತರು ಹೈರಾಣಾಗಿದ್ದಾರೆ. ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ರೈತರೇ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಬೆಳೆಗಳಲ್ಲಿನ ಹುಳುಗಳನ್ನು ತೆರವುಗೊಳಿಸಲು ಆಳುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಂತರ ಅವುಗಳನ್ನು ಚೀಲವೊಂದರಲ್ಲಿ ಸಂಗ್ರಹಿಸಿ ಕಟ್ಟಿ ಇಡುತ್ತಿದ್ದಾರೆ. ಅಲ್ಲದೆ, ತಂಬಾಕಿನ ಪುಡಿಯನ್ನು ಅವುಗಳ ಮೇಲೆ ಸಿಂಪಡಿಸಿ ಸಾಯಿಸುತ್ತಿದ್ದಾರೆ. ಔಷಧ ದರ ದುಬಾರಿ ಆಗಿದ್ದರಿಂದ ರೈತರು ಕೂಲಿ ಆಳುಗಳ ಮೊರೆ ಹೋಗಿದ್ದಾರೆ.

    ಶಂಖದ ಹುಳುವಿನ ಕಾಟ ಹೆಚ್ಚಾಗಿದ್ದು, ಅದಕ್ಕೆ ತೋಟಗಾರಿಕೆ ಇಲಾಖೆಯವರು ಪರಿಹಾರ ಕ್ರಮಗಳನ್ನು ತಿಳಿಸಿದ್ದಾರೆ. ಆದರೆ, ಅವುಗಳನ್ನು ಆರಿಸುವುದು ಮತ್ತು ಅದರ ನಾಶಕ್ಕಕೆ ಬಳಸುವ ಔಷಧ ತುಂಬಾ ವೆಚ್ಚದಾಯಕವಾಗಿದೆ. ಕೃಷಿ ಇಲಾಖೆಯವರು ರಿಯಾಯಿತಿ ದರದಲ್ಲಿ ಔಷಧ ದೊರೆಯುವಂತೆ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ.
    – ಸದಾಶಿವ ಬಂಗಿ, ಪ್ರಗತಿಪರ ರೈತರು, ಜಗದಾಳ

    ಜಗದಾಳ, ನಾವಲಗಿ ಗ್ರಾಮಗಳಲ್ಲಿ ಬಸವನ ಹುಳುಗಳ ಹಾವಳಿ ಹೆಚ್ಚಾಗಿರುವ ವಿಷಯ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಅಲ್ಲಿ ನೀರಾವರಿ ಹೆಚ್ಚಾಗಿರುವುದರಿಂದ ಈ ಹುಳುಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇವುಗಳ ಹತೋಟಿಗೆ ಜಿಲ್ಲಾ ತೋಟಗಾರಿಕೆ ವಿಶ್ವವಿದ್ಯಾಲಯದ ತಂಡ ಶೀಘ್ರ ರೈತರ ಹೊಲಗಳಿಗೆ ಭೇಟಿ ನೀಡಲಿದ್ದು, ಸೂಕ್ತ ಔಷಧ ಬಳಕೆಗೆ ತಿಳಿಸಲಿದೆ.
    ಅಭಯಕುಮಾರ ಮೊರಬ (ದೇಸಾಯಿ), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಮಖಂಡಿ ವಲಯ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts