More

    ಕಣ್ಮರೆಯಾಗುತ್ತಿದೆ ಸಾಂಪ್ರದಾಯಿಕ ಒಕ್ಕಣೆ ; ರಸ್ತಗಳೇ ಕಣಗಳಾಗಿ ಮಾರ್ಪಾಡು

    ಬೂದಿಕೋಟೆ: ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಳೆಗಳಿಂದ ಕಾಳು ಬೇರ್ಪಡಿಸಲು ನಿರ್ಮಿಸುತ್ತಿದ್ದ ಸಾಂಪ್ರದಾಯಿಕ ಒಕ್ಕಣೆಗಳು ಕಣ್ಮರೆಯಾಗುತ್ತಿವೆ.

    ಕೋಲಾರ ಜಿಲ್ಲೆಯು ಕೃಷಿ ಹಾಗೂ ಹೈನುಗಾರಿಕೆಗೆ ಪ್ರಸಿದ್ಧಿಯಾಗಿದ್ದು, ಇಲ್ಲಿನ ಬಹುತೇಕ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ರಾಗಿ, ಸಾಮೆ, ತೊಗರಿ, ಅವರೆ, ಹುರಳಿ ಸೇರಿ ಹಲವು ಬೆಳೆ ಬೆಳೆಯುವ ರೈತರು ಜಮೀನಿನಲ್ಲಿ ಸಗಣಿಯಿಂದ ಸಾರಿಸಿದ ಸಾಂಪ್ರದಾಯಿಕ ಕಣ ನಿರ್ಮಿಸಿ ಒಕ್ಕಣೆ ಮಾಡಿ ಕಾಳುಗಳನ್ನು ಬೇರ್ಪಡಿಸುತ್ತಿದ್ದರು. ಆದರೆ ಈಗ ಆಧುನಿಕ ತಂತ್ರಜ್ಞಾನದಿಂದ ಕಣದಲ್ಲಿ ಒಕ್ಕಣೆ ಮಾಡುವ ಪದ್ಧತಿ ಮರೆಯಾಗಿ ಒಕ್ಕಣಿಗಾಗಿ ಯಂತ್ರೋಪಕರಣ ಬಳಸುವ ಜತೆಗೆ ರಸ್ತೆಗಳೇ ಕಣಗಳಾಗಿ ಮಾರ್ಪಡುತ್ತಿವೆ.

    ಕಣ್ಮರೆಯಾಗುತ್ತಿರುವ ಸಮುದಾಯ ಕಣಗಳು: ಬೂದಿಕೋಟೆ ವ್ಯಾಪ್ತಿಯಲ್ಲಿ ಹತ್ತಾರು ಕುಟುಂಬಗಳು ಕೊಯ್ಲು ಮಾಡಿದ ರಾಗಿ, ಭತ್ತ, ಸಾಮೆ ಇತ್ಯಾದಿಗಳನ್ನು ಕಟ್ಟುಗಳ ರೂಪದಲ್ಲಿ ಮೆದೆ ಅಥವಾ ಬಣವೆಗಳನ್ನು ಒಂದು ನಿಗದಿತ ಸ್ಥಳದಲ್ಲಿ ಹಾಕುತ್ತಿದ್ದರು. ನಂತರ ಭೂಮಿ ಸಮತಟ್ಟು ಮಾಡಿ ಕಣ ನಿರ್ಮಾಣ ಮಾಡಿ, ಒಕ್ಕಣೆಗೆ ಬಳಸುವ ಕಣದ (ಗುಂಡಾದ) ಕಲ್ಲನ್ನು ಹಸುಗಳಿಂದ ಸುತ್ತಾಡಿಸಿ ಒಕ್ಕಣೆ ಮಾಡುತ್ತಿದ್ದರು. ಕಸಕಡ್ಡಿಗಳಿಂದ ಕಾಳುಗಳು ಬೇರ್ಪಡಿಸಿದ ನಂತರ ಅದಕ್ಕೆ ಪೂಜೆ ಸಲ್ಲಿಸಿ ಮನೆಗೆ ಒಯ್ಯುತ್ತಿದ್ದರು. ಸಮುದಾಯ ಕಣ ಕೂಡ ಇಂದು ಇಲ್ಲದಂತಾಗಿದೆ.

    ಸ್ವಚ್ಚಗೊಳ್ಳದ ಕಾಳುಗಳು: ಜಮೀನಿನಲ್ಲೇ ಯಂತ್ರಗಳಿಂದ ಬೆಳೆಯನ್ನು ಕಟಾವುಗೊಳಿಸುವ ಜತೆಗೆ ಅಲ್ಲೆ ಒಕ್ಕಣೆ ಮಾಡಿಸುತ್ತಿದ್ದಾರೆ. ಇದರಿಂದ ಸಮಯ ವ್ಯರ್ಥವಾಗದೇ, ಹೆಚ್ಚಿನ ಕೂಲಿ ಆಳುಗಳ ಪ್ರಮೇಯ ಇರುವುದಿಲ್ಲ. ಹೀಗಾಗಿ ರೈತರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಆದರೆ ಸಂಪ್ರದಾಯ ಒಕ್ಕಣೆಯಿಂದ ಸ್ವಚ್ಚವಾಗುತ್ತಿದ್ದಂತೆ ಇಲ್ಲಿ ಕಾಳುಗಳು ಸ್ವಚ್ಚವಾಗುವುದಿಲ್ಲ.

    ರಸ್ತೆ ಒಕ್ಕಣೆ ಅಪಾಯಕಾರಿ:ಬಹುಪಾಲು ರೈತರು ಯಂತ್ರೋಪಕರಣ ಹಾಗೂ ಸಮುದಾಯ ಕಣಗಳಿಗಿಂತ ಡಾಂಬರು ರಸ್ತೆಯಲ್ಲೇ ಒಕ್ಕಣೆ ಮಾಡಲು ಮುಂದಾಗಿದ್ದಾರೆ. ರಸ್ತೆಯಲ್ಲಿ ರಾಗಿ ತೆನೆ ಇತ್ಯಾದಿ ಹಾಕಿದರೆ ಅವುಗಳ ಮೇಲೆ ವಾಹನ ಸಂಚರಿಸುವುದರಿಂದ ಒಕ್ಕಣೆಯಾಗುತ್ತದೆ. ಆದರೆ ವಾಹನ ಸವಾರರು ಒಕ್ಕಣೆ ಮೇಲೆ ಹೋಗಿ ಜಾರಿ ಬಿದ್ದು ಹಾಗೂ ಧೂಳು ಕಣ್ಣಿಗೆ ಬಿದ್ದು ಅಪಘಾತವಾಗುವ ಸಂಭವವಿರುತ್ತದೆ.

    ನಾವು ವೈಜ್ಞಾನಿಕ ಆಲೋಚನೆಯನ್ನಿಟ್ಟುಕೊಂಡು ಸಾಂಪ್ರದಾಯಿಕ ಒಕ್ಕಣೆಯೊಂದಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಒಕ್ಕಣೆಗೆ ಬಳಸುತ್ತಿದ್ದ ಕಣದ ಕಲ್ಲುಗಳು ಬಳಕೆಗೆ ಬಾರದೆ ಎಲ್ಲೆಂದರಲ್ಲಿ ಬಿದ್ದಿವೆ. ಅವುಗಳನ್ನು ಮುಂದಿನ ತಲೆಮಾರಿನವರಿಗೆ ನೀಡಲು ಹಾಗೂ ರಕ್ಷಿಸಿ ಸಂಗ್ರಹಿಸಿಡಬೇಕಿದೆ.
    ಕಿರಣ್ , ಗರಿಕೆ ಸಾಂಸ್ಕೃತಿಕ ಕೇಂದ್ರ, ಕಾರಮಾನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts