More

    ಖಂಡಿತ ಏನೋ ನಡೆದಿದೆ… ಪಂಜಾಬ್​ ವಿರುದ್ಧ ಆರ್​ಸಿಬಿ ಸೋತ ಬೆನ್ನಲ್ಲೇ ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಕಪ್ಪು ಬೆಕ್ಕು

    ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬಲಿಷ್ಠ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ನಿರ್ಣಾಯಕ ಪಂದ್ಯದಲ್ಲಿ 54 ರನ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ಲೀಗ್‌ನಲ್ಲಿ 6ನೇ ಸೋಲು ಕಂಡ ಬೆಂಗಳೂರು ತಂಡದ ಪ್ಲೇಆಫ್ ಹಾದಿ ತೂಗುಯ್ಯಲೆಯಲ್ಲಿ ಸಿಲುಕಿದೆ. ಆರ್​ಸಿಬಿ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಪ್ಪು ಬಣ್ಣದ ಬೆಕ್ಕಿನ ಫೋಟೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

    ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಪಂಜಾಬ್​ ತಂಡದ ಗುರಿ ಬೆನ್ನತ್ತಿದ ಆರ್​ಸಿಬಿ ಮೊದಲನೇ ಓವರ್​ನ 3 ಎಸೆತಗಳಲ್ಲಿ 5 ರನ್​ ಕಲೆಹಾಕಿತ್ತು. ಈ ವೇಳೆ ನಾನ್​ ಸ್ಟ್ರೈಕರ್ ವಿಭಾಗದಲ್ಲಿ ವಿರಾಟ್​ ಕೊಹ್ಲಿ ಮತ್ತು ಸ್ಟ್ರೈಕರ್​​ ವಿಭಾಗದಲ್ಲಿ ನಾಯಕ ಫಾಪ್​ ಡುಪ್ಲೆಸಿಸ್​ ಇದ್ದರು.​ ನಾಲ್ಕನೇ ಎಸೆತವನ್ನು ಡುಪ್ಲೆಸಿಸ್​ ಎದುರಿಸುವ ವೇಳೆ ಮೈದಾನದಲ್ಲಿ ಅಡಚಣೆ ಉಂಟಾಗಿ ಕ್ಷಣವೊತ್ತು ಆಟ ಸ್ಥಗಿತಗೊಳಿಸಿದರು. ಕಾರಣ ಕ್ರೀಡಾಂಗಣದ ಸೈಟ್​ಸ್ಕ್ರೀನ್​ ಬಳಿ ಕಪ್ಪು ಬಣ್ಣದ ಬೆಕ್ಕು ಪ್ರತ್ಯಕ್ಷವಾಗಿ ಆಟಕ್ಕೆ ಅಡಚಣೆ ಉಂಟು ಮಾಡಿತು. ಈ ವೇಳೆ ಮಧ್ಯಪ್ರವೇಶಿಸಿದ ಅಂಪೈರ್​ ಬೆಕ್ಕನ್ನು ಆ ಕಡೆ ಓಡಿಸುವಂತೆ ಹೇಳಿದರು. ಬೆಕ್ಕು ಅಲ್ಲಿಂದ ಹೋದ ಬಳಿಕ ಮತ್ತೆ ಆಟ ಮುಂದುವರಿಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ.

    ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಆರಂಭಿಕ ಹಂತದಲ್ಲಿ ಜಾನಿ ಬೇರ್‌ಸ್ಟೋ (66 ರನ್, 29 ಎಸೆತ, 4ಬೌಂಡರಿ, 7ಸಿಕ್ಸರ್) ಹಾಗೂ ಮಧ್ಯಮ-ಸ್ಲಾಗ್ ಓವರ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (70ರನ್, 42ಎಸೆತ, 5ಬೌಂಡರಿ, 4 ಸಿಕ್ಸರ್) ತೋರಿದ ಸ್ಫೋಟಕ ಬ್ಯಾಟಿಂಗ್ ಫಲವಾಗಿ 9 ವಿಕೆಟ್‌ಗೆ 209 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ 9 ವಿಕೆಟ್‌ಗೆ 155 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಎರಡೂ ಮುಖಾಮುಖಿಯಲ್ಲೂ ಪಂಜಾಬ್‌ಗೆ ಶರಣಾಯಿತು.

    ಇದೀಗ ಆರ್​ಸಿಬಿ ಸೋಲಿಗೆ ಕಪ್ಪು ಬೆಕ್ಕು ಎದುರಾಗಿದ್ದೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​ಗಳನ್ನು ಹರಿಬಿಡಲಾಗುತ್ತಿದೆ. ಮೈದಾನದಲ್ಲಿ ಎದುರಾದ ಬೆಕ್ಕು ಮಾಟ ಮಂತ್ರ ಪ್ರಯೋಗಿಸಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಪ್ರೀತಿಯ ಕೊಹ್ಲಿ ಅವರೇ ನೀವು ದುಷ್ಟ ಶಕ್ತಿಯ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಬಯಸಿದರೆ, ನೀವು ಟ್ವಿಟರ್‌ನಲ್ಲಿ ವರ್ಕೌಟ್​ಗೆ ಸಂಬಂಧಿಸಿದ ಫೋಟೋ ಮತ್ತ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ ಅಥವಾ ಕಪ್ಪು ಬೆಕ್ಕನ್ನು ದತ್ತು ತೆಗೆದುಕೊಳ್ಳಿ ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್​ ಮಾಡಿದ್ದಾರೆ. ಆರ್​ಸಿಬಿ ನಿಜವಾಗಿಯೂ ಅರ್ಹತಾ ಸುತ್ತಿಗೆ ಹೋಗುತ್ತಿತ್ತು. ಆದರೆ, ಈ ಕಪ್ಪು ಬೆಕ್ಕು ಬಂದು ಎಲ್ಲವನ್ನು ಹಾಳು ಮಾಡಿತು ಇನ್ನೋರ್ವ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಬೆಕ್ಕಿನ ಬಗ್ಗೆ ಟ್ವೀಟ್​ ಮಾಡಿ ಮೈದಾನದಲ್ಲಿ ಖಂಡಿತ ಏನೋ ನಡೆದಿದೆ ಎನ್ನುವ ರೀತಿಯಲ್ಲಿ ಮೀಮ್ಸ್​ಗಳನ್ನು ಹರಿಬಿಟ್ಟಿದ್ದಾರೆ.

    ಇನ್ನು ಕೆಲ ನೆಟ್ಟಿಗರು ಆರ್​ಸಿಬಿ ಸೋಲಿಗೆ ಬೆಕ್ಕನ್ನು ದೂಷಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ಏನೇ ಇರಲಿ ಆದರೆ, ಈ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಪಂಜಾಬ್​ಗಿಂತ ಹೆಚ್ಚು ಸದ್ದು ಮಾಡಿದ್ದು ಮಾತ್ರ ಕಪ್ಪು ಬಣ್ಣದ ಬೆಕ್ಕು. (ಏಜೆನ್ಸೀಸ್​)

    ಪಂಜಾಬ್ ಎದುರು ಮುಗ್ಗರಿಸಿದ ಆರ್‌ಸಿಬಿ; ಕಗ್ಗಂಟಾದ ಪ್ಲೇಆಫ್ ಕನಸು

    ಯಶ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​: KGF-3 ಶೂಟಿಂಗ್​, ಸಿನಿಮಾ ಬಿಡುಗಡೆ ಕುರಿತ ಮಹತ್ವದ ಮಾಹಿತಿ ಇದು!

    ಯುವತಿ ಮೇಲೆ ಆ್ಯಸಿಡ್​ ಹಾಕಿದ್ದೇಕೆ? ಪೊಲೀಸರ ಮುಂದೆ ಸ್ಫೋಟಕ‌ ಸತ್ಯ ಬಾಯ್ಬಿಟ್ಟ ಆರೋಪಿ ನಾಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts