

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದ್ದು, ಪ್ಯಾರಾ ಹೈಜಂಪರ್ ಪ್ರವೀಣ್ ಕುಮಾರ್ ಶುಕ್ರವಾರ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೇರಿದೆ.
2.07 ಮೀಟರ್ ಎತ್ತರ ಜಿಗಿಯು ಮೂಲಕ ಪ್ರವೀಣ್ ಕುಮಾರ್ ಏಷಿಯನ್ ದಾಖಲೆಯನ್ನು ಮುರಿದರು. ಗ್ರೇಟ್ ಬ್ರಿಟನ್ನ ಜೊನಾಥನ್ ಬ್ರೂಮ್ ಎಡ್ವರ್ಸ್ 2.10 ಮೀಟರ್ ಜಿಗಿಯುವುದರೊಂದಿಗೆ ಚಿನ್ನದ ಪದಕ ಜಯಿಸಿದರೆ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪ್ರವೀಣ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ನಿಶಾದ್ ಕುಮಾರ್, ಮರಿಯಪ್ಪನ್ ಥಂಗವೇಲು ಮತ್ತು ಶರದ್ ಕುಮಾರ್ ಬಳಿಕ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಪದಕ ಜಯಿಸಿದ ನಾಲ್ಕನೇ ಪದಕ ವಿಜೇತ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಪ್ರವೀಣ್ ಪದಕ ಜಯಿಸುತ್ತಿದ್ದಂತೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ನಮ್ಮ ಹೆಮ್ಮೆ. ಈ ಪದಕ ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ. (ಏಜೆನ್ಸೀಸ್)