More

    ತಾಲಿಬಾನ್​ನಿಂದ ಶಿಕ್ಷೆಯ ವಿಧಾನ ಬಹಿರಂಗ: ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ರೆ ಹೀಗಿರಲಿದೆಯಂತೆ ದಂಡನೆ!

    ಕಾಬುಲ್​: ತಾಲಿಬಾನ್​ ಸರ್ಕಾರವು 20 ವರ್ಷಗಳ ಬಳಿಕ ಆಫ್ಘಾನ್​ ನೆಲದಲ್ಲಿ ತನ್ನ ಕುಖ್ಯಾತ ಸಚಿವಾಲಯ ಸದ್ಗುಣ ಪ್ರಚಾರ ಮತ್ತು ದುಶ್ಚಟ ತಡೆಯುವ ಇಲಾಖೆಯನ್ನು ಮರುಸ್ಥಾಪಿಸಿದೆ. ಅಮೆರಿಕ ಆಫ್ಘಾನ್​ ನೆಲಕ್ಕೆ ಬಂದು ತಾಲಿಬಾನಿಗಳ ಅಟ್ಟಹಾಸಕ್ಕೆ ಕಡಿಹಾಣ ಹಾಕಿದ್ದಾಗ ಈ ಇಲಾಖೆಯು ಕೊನೆಯಾಗಿತ್ತು. ಇದೀಗ ಅಮೆರಿಕ ಸೇನೆ ಸಂಪೂರ್ಣವಾಗಿ ಆಫ್ಘಾನ್ ನೆಲವನ್ನು ತೊರೆದಿದ್ದು, ಮತ್ತೆ ಹಿಡಿತ ಸಾಧಿಸಿರುವ ತಾಲಿಬಾನ್​ ಕುಖ್ಯಾತ ಸಚಿವಾಲಯವನ್ನು ಮರುಸ್ಥಾಪಿಸಿದ್ದಾರೆ.

    ಇಸ್ಲಾಂ ಧರ್ಮದ ಸೇವೆಗಾಗಿ​ ಸದ್ಗುಣ ಪ್ರಚಾರ ಮತ್ತು ದುಶ್ಚಟ ತಡೆಯುವ ಇಲಾಖೆಯ ಅವಶ್ಯಕತೆ ಇದೆ ಎಂದು ತಾಲಿಬಾನ್​ ಅಧಿಕಾರಿಯೊಬ್ಬ ತಿಳಿಸಿದ್ದಾರೆಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ. ಆಫ್ಘಾನ್​ ಹೆಣ್ಣು ಮಕ್ಕಳ ಭೀತಿಗೆ ಕಾರಣವಾಗಿರುವ ಷರಿಯಾ ಕಾನೂನನ್ನು ಈ ಸಚಿವಾಲಯ ಜಾರಿ ಮಾಡುತ್ತದೆ. ಈ ಕಾನೂನಿನ ಪ್ರಕಾರ ಮಹಿಳೆಯರು ಪುರುಷರಿಲ್ಲದೆ, ಒಂಟಿಯಾಗಿ ಹೊರಗಡೆ ಹೋಗುವಂತಿಲ್ಲ. ಅಲ್ಲದೆ, ಸಂಗೀತ ಸೇರಿದಂತೆ ಇತರೆ ಮನರಂಜನೆಗಳನ್ನು ಷರಿಯಾ ಕಾನೂನಿನ ಅಡಿಯಲ್ಲಿ ನಿಷೇಧವಿದೆ.

    ಇಸ್ಲಾಮಿಕ್​ ನಿಯಮಗಳ ಪ್ರಕಾರ ನಾವು ದಂಡಿಸುತ್ತೇವೆ. ಇಸ್ಲಾಂ ನಮಗೆ ಏನೇ ಮಾರ್ಗದರ್ಶನ ನೀಡಲಿ, ನಾವು ಅದರಂತೆಯೇ ಶಿಕ್ಷಿಸುತ್ತೇವೆ ಎಂದು ತಾಲಿಬಾನ್​ ಅಧಿಕಾರಿ ಮೊಹಮ್ಮದ್​ ಯೂಸುಫ್​ ತಿಳಿಸಿದ್ದಾರೆ. ಈತ ಆಫ್ಘಾನಿಸ್ತಾನದ ಕೇಂದ್ರ ವಲಯದ ಉಸ್ತುವಾರಿ ಎಂದು ಹೇಳಿಕೊಂಡಿದ್ದಾರೆ. ತಾಲಿಬಾನ್‌ಗಳು ತಮ್ಮ ಹಿಂದಿನ ಆಡಳಿತದಲ್ಲಿ ಅಪರಾಧಗಳಿಗೆ ಶಿಕ್ಷೆಯಾಗಿ ಜನರನ್ನು ಸಾರ್ವಜನಿಕವಾಗಿ ಥಳಿಸುವುದು, ಕಲ್ಲು ಹೊಡೆಯುವುದು, ಕತ್ತರಿಸುವುದು ಮತ್ತು ಸಾರ್ವಜನಿಕವಾಗಿ ಗಲ್ಲಿಗೇರಿಸುತ್ತಿದ್ದರು.

    ನ್ಯೂಯಾರ್ಕ್​ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಯೂಸೂಫ್​, ಕಳ್ಳತನ ಮಾಡಿದರೆ ಕಳ್ಳರ ಕೈ ಕಡಿಯಲಾಗುವುದು. ಅಕ್ರಮ ಸಂಬಂಧವಿಟ್ಟುಕೊಂಡು ಸಿಕ್ಕಿಬಿದ್ದರೆ, ಅವರಿಗೆ ಕಲ್ಲು ಹೊಡೆದು ಸಾಯಿಸಲಾಗುವುದು. ಈ ಹಿಂದೆಯೂ ಇದೆ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಕೊಲೆ ಮಾಡುವ ಕೊಲೆಗಾರನನ್ನು ಸಾರ್ವಜನಿಕರ ಎದುರು ಕೊಲ್ಲಲಾಗುವುದು. ಯಾವುದೇ ದುರುದ್ದೇಶವಿಲ್ಲದೇ ಅಚಾನಕ್ ಆಗಿ ಕೊಲೆ ಸಂಭವಿಸಿದರೆ ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಮೇಲೆ ಹೇಳಿದ ಎಲ್ಲ ಶಿಕ್ಷೆಗಳಿಗೆ ಕನಿಷ್ಟ ಪಕ್ಷ ನಾಲ್ವರು ಸಾಕ್ಷಿಗಳಿರಬೇಕು. ಆ ಸಾಕ್ಷಿಗಳೆಲ್ಲರು ಒಂದೇ ಕತೆಯನ್ನು ಹೇಳಬೇಕು. ಒಂದುಚೂರು ವ್ಯತ್ಯಾಸವಾದಲ್ಲಿ ಯಾವುದೇ ಶಿಕ್ಷೆ ಇರುವುದಿಲ್ಲ. ಆದರೆ, ಎಲ್ಲರೂ ಒಂದೇ ಕತೆ ಹೇಳಿದರೆ, ಅದೇ ಸಮಯದಲ್ಲಿ, ಅದೇ ಜಾಗದಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ಯೂಸೂಫ್​ ನ್ಯೂಯಾರ್ಕ್​ ಪೋಸ್ಟ್​ಗೆ ಹೇಳಿದ್ದಾರೆ. ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಪರಿಗಣಿಸಿದರೆ ಶಿಕ್ಷಿಸಲಾಗುವುದು ಎಂದರು.

    ಇಸ್ಲಾಮಿಕ್​ ನಿಯಮಗಳೊಂದಿಗೆ ಶಾಂತಿ-ಸೌಹಾರ್ದತೆಯ ರಾಷ್ಟ್ರವನ್ನು ನಾವು ಬಯಸಿದ್ದೇವೆ ಎಂದು ಯೂಸೂಫ್​ ಹೇಳಿದರು. ಆದರೆ, ಆಫ್ಘಾನ್​ನಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ತಾಲಿಬಾನಿಗಳು ಈಗಾಗಲೇ ವಿಫಲವಾಗಿದ್ದಾರೆಂದು ಜಿನಿವಾದ ವಿಶ್ವಸಂಸ್ಥೆಯಲ್ಲಿರುವ ಸರ್ಕಾರದ ರಾಯಭಾರಿಗಳು ಅಸಮಾಧಾನ ಹೊರಹಾಕಿ ಈಗಾಗಲೇ ಹೊರನಡೆದಿದ್ದಾರೆ. (ಏಜೆನ್ಸೀಸ್​)

    ಇರಲಾರದೆ ಇರುವೆ ಬಿಟ್ಟುಕೊಂಡ ಕತೆಯಿದು! ತಳಕು ಬಳಕು​ ವಿಡಿಯೋಗಳಿಗೆ ಮರುಳಾದ್ರೆ ಆಗೋದು ಹೀಗೆ

    ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್​ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!

    ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೂ, ಸಹಕಾರ ನೀಡಿದ ಸಂಬಂಧಿಗೂ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts