More

    ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ: ಸ್ಥಳಕ್ಕೆ ವಿಪತ್ತು ನಿರ್ವಹಣಾ ಪಡೆ ದೌಡು, ರಕ್ಷಣಾ ಕಾರ್ಯಾಚರಣೆ ಜೋರು

    ಡೆಹ್ರಾಡೂನ್​: ಉತ್ತರಾಖಂಡದ ಡೆಹ್ರಾಡೂನ್​ ಜಿಲ್ಲೆಯ ಸರ್ಖೇತ್​ ಗ್ರಾಮದ ಸುತ್ತಮುತ್ತ ದಿಢೀರ್​ ಸುರಿದ ಧಾರಾಕಾರ ಮಳೆಯಿಂದಾಗಿ ಶನಿವಾರ ತಡರಾತ್ರಿ 2.45ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದ್ದು, ಈ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

    ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಣೆ ಮಾಡಿ, ಸಮೀಪದ ಆಶ್ರಯ ಶಿಬಿರಕ್ಕೆ ಸ್ಥಳಾಂತರ ಮಾಡುತ್ತಿರುವುದಾಗಿ ಎಸ್​ಡಿಆರ್​ಎಫ್​ ತಂಡ ತಿಳಿಸಿದೆ. ಆಗಸ್ಟ್ 19 ಮತ್ತು 20ರಂದು ಉತ್ತರಾಖಂಡ ಮತ್ತು ಪೂರ್ವ ಉತ್ತರ ಪ್ರದೇಶದ ಮೇಲೆ ಮತ್ತು ವಾರಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಗುಡುಗು ಸಹಿತ ವ್ಯಾಪಕವಾದ ಲಘು ಅಥವಾ ಮಧ್ಯಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ನಲ್ಲೂ ಶನಿವಾರ ಸಾಧಾರಣ ಮಳೆಯಾಗುತ್ತದೆ.

    ಉತ್ತರಾಖಂಡ ಮತ್ತು ಪೂರ್ವ ರಾಜಸ್ಥಾನವನ್ನು ಶನಿವಾರದಿಂದ ಸೋಮವಾರದವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್‌ನಲ್ಲಿ ಇರಿಸಿದೆ. ಉತ್ತರಾಖಂಡದಲ್ಲಿ ಶನಿವಾರ ತಡರಾತ್ರಿ ದಿಢೀರ್​ ಸುರಿದ ಭಾರೀ ಮಳೆಯಿಂದಾಗಿ ಡೆಹ್ರಾಡೂನ್​ನ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಮ್ಸಾ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಆತಂಕಕಾರಿ ಮಟ್ಟದಿಂದಾಗಿ, ಮಾತಾ ವೈಷ್ಣೋ ದೇವಿ ಕೇವ್ ಯೋಗ ದೇವಸ್ಥಾನ ಮತ್ತು ತಪಕೇಶ್ವರ್​ ಮಹಾದೇವ ದೇವಸ್ಥಾನ ನಡುವಿನ ಸಂಪರ್ಕ ಕಡಿತಗೊಂಡಿದೆ.

    ಧಾರಾಕಾರ ಮಳೆಯಿಂದಾಗಿ ಬದರಿನಾಥ ದೇಗುಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ತೋಟಘಾಟಿ ಮತ್ತು ತೀನ್ ಧಾರಾದಲ್ಲಿ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆಯ ಹಿನ್ನೆಲೆಯಲ್ಲಿ ತೆಹ್ರಿ ಜಿಲ್ಲೆಯ ಮೂಲಕ ಹಾದು ಹೋಗುವ ಭಿಲಂಗನಾ ನದಿ, ನೈಲ್ಚಾಮಿ ನದಿ ಮತ್ತು ಬಾಲಗಂಗಾ ನದಿ ಉಕ್ಕಿ ಹರಿಯುತ್ತಿವೆ. ಗಂಗಾ ನದಿಯು ಎಚ್ಚರಿಕೆಯ ಮಟ್ಟವನ್ನು ಮೀರಿದ ನಂತರ ಹರಿದ್ವಾರದ ತಗ್ಗು ಪ್ರದೇಶಗಳನ್ನು ಅಲರ್ಟ್ ಮಾಡಲಾಗಿದೆ. ಗಂಗಾ ನದಿಯು 293.70 ಮೀಟರ್‌ಗಳಷ್ಟು ಹರಿಯುತ್ತಿದೆ, ಇದು ಅಪಾಯದ 294 ಮೀಟರ್‌ಗಿಂತ ಸ್ವಲ್ಪವೇ ಸ್ವಲ್ಪ ಅಂಚಿನಲ್ಲಿ ಹರಿಯುತ್ತಿದೆ. ಮಳೆ ಮುಂದುವರಿದರೆ, ಅನುಹುತ ಸಂಭವಿಸುವ ಸಾಧ್ಯತೆ ಇದೆ.

    ಭಾರೀ ಮಳೆಯಿಂದಾಗಿ ಶುಕ್ರವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇಗುಲಕ್ಕೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹಲವಾರು ವೀಡಿಯೊಗಳು ವೈಷ್ಣೋ ದೇವಿ ಟ್ರ್ಯಾಕ್‌ನಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ತೋರಿಸುತ್ತವೆ. ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಶುಲ್ ಗರ್ಗ್ ಅವರು ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಸಾವು-ನೋವು ಅಥವಾ ಹಾನಿಯು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

    ಹಿಮಾಚಲ ಪ್ರದೇಶ, ಜಾರ್ಖಂಡ್​, ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳಲ್ಲೂ ವರುಣನ ಆರ್ಭಟ ಹೆಚ್ಚಾಗಿದ್ದು, ಮಳೆ ಮುಂದುವರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. (ಏಜೆನ್ಸೀಸ್​)

    ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

    ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವಿಡಿಯೋ ಚಿತ್ರೀಕರಣ: ಈತನ ದುಷ್ಕೃತ್ಯದ ಹಿಂದಿದ್ದ ದುರುದ್ದೇಶವಿದು

    ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ರಾಹುಲ್​ ನಡೆದುಕೊಂಡ ರೀತಿಗೆ ನೆಟ್ಟಿಗರ ಬಹುಪರಾಕ್​: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts