More

    ಏನೇ ಇರಲಿ ಅವರು ಮಾಡಿದ್ದು ತಪ್ಪು: ಐಎಎಸ್​ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಡಿ. ರೂಪಾ ವಾಗ್ದಾಳಿ!

    ಮೈಸೂರು: ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರು ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದು, ರೋಹಿಣಿ ಸಿಂಧೂರಿ ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಇದರ ಬೆನ್ನಲ್ಲೇ ಐಎಎಸ್​ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಡಿ. ರೂಪಾ ಅವರು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ. ಕರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣದ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಅಧಃಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ. ಕಟ್ಟುವುದನ್ನು ಮುಂದೂಡಲೂಬಹುದಿತ್ತು ಎಂದಿದ್ದಾರೆ.

    ಪ್ರಾದೇಶಿಕ ಆಯುಕ್ತರು ನೀಡಿರುವ ವರದಿಯಲ್ಲೇನಿದೆ?
    ವರದಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಗಳ ಉಲ್ಲಂಘನೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈಜುಕೊಳ ನಿರ್ಮಾಣದಲ್ಲಿ ಆಗಿರುವ ಪ್ರಮುಖ ಆರು ಲೋಪಗಳನ್ನು ಪಟ್ಟಿ ಮಾಡಿದ್ದು, ಈ ಕೆಳಕಂಡಂತಿದೆ.

    1. ಈಜುಕೊಳಕ್ಕಾಗಿ 32 ಲಕ್ಷ ರೂ.ಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿದೆ. ಆದರೆ, ಅಂದಾಜು ಪಟ್ಟಿಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.
    2. ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ. ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ.
    3. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.
    4. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.
    5. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ.
    6. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣವು ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ ಎಂದು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಪ್ರಾದೇಶಿಕ ಆಯುಕ್ತ ಉಲ್ಲೇಖಿಸಿದ್ದಾರೆ.

    ರೋಹಿಣಿ ಸಿಂಧೂರಿ ಏನು ಹೇಳಿದ್ದರು?
    ವರ್ಗಾವಣೆ ಬೆನ್ನಲ್ಲೇ ಸರ್ಕಾರದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅವರಿಗೆ ಎರಡು ಪುಟಗಳ ಉತ್ತರ ಸಲ್ಲಿಸಿರುವ ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು ಐದು ವರ್ಷಗಳ ಹಿಂದಿನ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲ ಜಿಲ್ಲಾಧಿಕಾರಿ ವಸತಿ ಕಚೇರಿಯಲ್ಲೂ ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ. ನಿರ್ಮಿತಿ ಕೇಂದ್ರದ 28.72 ಲಕ್ಷ ರೂ.ಗಳಲ್ಲಿ ಈಜುಕೊಳ ನಿರ್ಮಾಣವಾಗಿದೆ. ಪಾರಂಪರಿಕ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ: ರೋಹಿಣಿ ಸಿಂಧೂರಿ ಮಾಡಿದ್ದಾರೆನ್ನಲಾದ ತಪ್ಪುಗಳ ಪಟ್ಟಿ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts