More

    The Truth ಸಿನಿಮಾ ಮಾದರಿಯಲ್ಲೇ ತನಿಖಾಧಿಕಾರಿ ಹತ್ಯೆಗೆ ಯತ್ನ: ನಟ ದಿಲೀಪ್ ಭಯಾನಕ ಸಂಚು ಬಯಲು​

    ಕೊಚ್ಚಿ: ಖ್ಯಾತ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್​ ಕುಮಾರ್​ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಯ ಕೊಲೆಗೆ ಸಂಚು ರೂಪಿಸಿದ ಆರೋಪವು ದಿಲೀಪ್​ ಮೇಲಿದೆ.

    ಇದೀಗ ತನಿಖಾಧಿಕಾರಿಯ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಯೊಂದು ಹೊರಬಿದ್ದಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಮ್ಮಟ್ಟಿ ನಟನೆಯ “ದಿ ಟ್ರೂಥ್​” ಸಿನಿಮಾ ಮಾದರಿಯಲ್ಲಿ ತನಿಖಾಧಿಕಾರಿ ಬೈಜು ಪೌಲೋಸ್​ ಕೊಲೆ ಮಾಡಲು ದಿಲೀಪ್​ ಸಂಚು ರೂಪಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.

    2017ರ ನವೆಂಬರ್ 15ರಂದು ಅಲುವಾದಲ್ಲಿರುವ ದಿಲೀಪ್​ ಅವರ ಪದ್ಮಾಸರೋವರಂ​ ಮನೆಯಲ್ಲಿ ದಿಲೀಪ್​ ಸಹೋದರ ಸಿನಿಮಾ ಮಾದರಿಯಲ್ಲಿ ತನಿಖಾಧಿಕಾರಿಯನ್ನು ಕೊಲೆ ಮಾಡುವಂತೆ ಅನೂಪ್​ ಎಂಬಾತನಿಗೆ ಸೂಚನೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

    ದಿಲೀಪ್​ ಆಪ್ತ ಹಾಗೂ ನಿರ್ದೇಶಕ ಬಾಲಚಂದ್ರ ಕುಮಾರ್​ ತನಿಖಾಧಿಕಾರಿಗಳಿಗೆ ನೀಡಿರುವ ಆಡಿಯೋ ಸ್ಯಾಂಪಲ್​ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಇಡೀ ಪ್ರಕರಣಕ್ಕೆ ಬಾಲಚಂದ್ರ ಅವರು ನೀಡಿರುವ ಹೇಳಿಕೆಗಳು ಮಹತ್ವದ ತಿರುವುನನ್ನು ನೀಡಿದೆ. ಸಿನಿಮೀಯ ಶೈಲಿಯಲ್ಲಿ ತನಿಖಾಧಿಕಾರಿ ಕೊಲ್ಲಲು ದಿಲೀಪ್​ ಸಂಚು ರೂಪಿಸಿರುವುದಾಗಿ ಬಾಲಚಂದ್ರ ಕೂಡ ಹೇಳಿಕೆ ನೀಡಿದ್ದಾರೆ.

    ಪದ್ಮಸರೋವರಂ ಮನೆಯನ್ನು ಹೊರತುಪಡಿಸಿದರೆ, ಎರ್ನಾಕುಲಂನ ರವಿಪುರಂನಲ್ಲಿರುವ ಮದರ್​ ಅಪಾರ್ಟ್​ಮೆಂಟ್​ನಲ್ಲಿ ಕೊಲೆ ಮಾಡಲು ಕೂಡ ಸಂಚು ಮಾಡಲಾಗಿತ್ತು. ಅದು ಮಿಸ್​ ಆದರೆ, ಚಲಿಸುವ ಕಾರಿನಲ್ಲಿ ಕೊಲೆ ಮಾಡುವ ಮತ್ತೊಂದು ಪ್ಲ್ಯಾನ್​ ಅನ್ನು ದಿಲೀಪ್​ ಅಂಡ್​ ಟೀಮ್​ ಮಾಡಿತ್ತು ಎಂದು ಬಾಲಚಂದ್ರ ಬಹಿರಂಗಪಡಿಸಿದ್ದಾರೆ.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ದಿಲೀಪ್​ ಬಂಧನಕ್ಕೆ ಮುಂದಾಗಿದೆ. ಆದರೆ, ಯಾವಾಗ ಈ ಪ್ರಕರಣ ಬಯಲಾಯ್ತೋ ಆರೋಪಿ ದಿಲೀಪ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆದಿದ್ದು, ನಾಳೆ (ಫೆ.7) ತೀರ್ಪು ಹೊರಬೀಳಲಿದೆ. ಅಲ್ಲಿಯವರೆಗೆ ದಿಲೀಪ್​ರನ್ನು ಬಂಧಿಸದಂತೆ ಕೋರ್ಟ್​ ಸೂಚನೆ ನೀಡಿದೆ.

    ಇನ್ನು “ದಿ ಟ್ರೂಥ್” ಸಿನಿಮಾ ವಿಚಾರಕ್ಕೆ ಬಂದರೆ 1998ರಲ್ಲಿ ಈ ಸಿನಿಮಾವನ್ನು ಶಾಜಿ ಕೈಲಾಸ್​ ಎಂಬುವರು ನಿರ್ದೇಶನ ಮಾಡಿದ್ದು, ಎಸ್​.ಎಸ್​. ಸ್ವಾಮಿ ಚಿತ್ರಕತೆ ಬರೆದಿದ್ದಾರೆ. ಒಬ್ಬ IRS ಅಧಿಕಾರಿ ಭರತ್, ಮುಖ್ಯಮಂತ್ರಿಯೊಬ್ಬರ ಹತ್ಯೆಯ ತನಿಖೆಗೆ ಒಂದು ತಂಡದ ಮುಖ್ಯಸ್ಥರಾಗಿ, ಐಪಿಎಸ್ ಮೀನಾ ನಂಬಿಯಾರ್ ಅವರ ಸಹಾಯದಿಂದ ಆಘಾತಕಾರಿ ಸತ್ಯವನ್ನು ಮತ್ತು ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಬಹಿರಂಗಪಡಿಸುತ್ತಾರೆ. ಇದರಲ್ಲಿ ತನಿಖಾಧಿಕಾರಿಯನ್ನು ಕೊಲೆ ಮಾಡಲು ಯತ್ನಿಸಿದ ಮಾದರಿಯಲ್ಲೇ ದಿಲೀಪ್​ ತಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

    ಘಟನೆ ಹಿನ್ನೆಲೆ ಏನು?
    ಐದು ವರ್ಷಗಳ ಹಿಂದೆ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಸಂತ್ರಸ್ತ ನಟಿ ಸಾಮಾನ್ಯ ನಟಿಯೇನಲ್ಲ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಅವರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದು, ಇದೀಗ ಈ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬರುತ್ತಿವೆ. (ಏಜೆನ್ಸೀಸ್​)

    ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವಿಡಿಯೋ ಲೀಕ್​ ಆಗಿದೆ ಎಂದು ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತೆ

    ಬೆಂಗ್ಳೂರಿಗರೇ ಎಚ್ಚರ ಮಾಜಿ ಸಿಎಂ ಪತ್ನಿಯ ಟ್ರಾಫಿಕ್​​ ಜಾಮ್​ ಹೇಳಿಕೆ ನಿಮ್ಮ ಮದ್ವೆಗೆ ಮಾರಕ: ಹರಿದಾಡ್ತಿದೆ ಮೀಮ್ಸ್​!

    ಮೈ ಕಾಣಿಸುವಂತೆ ಅರ್ಧಂಬರ್ಧ ಬಟ್ಟೆ ಯಾಕೆ​ ಹಾಕ್ತೀಯಾ?: ನೆಟ್ಟಿಗನ ಕಾಮೆಂಟ್​ಗೆ ನಿವೇದಿತಾ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts