More

    ಸಿಎಂ ಬಿಎಸ್​ವೈ ಬದಲಾವಣೆ ಮಾಡಿದ್ರೆ ಹಿಂದಿನ ಇತಿಹಾಸ ಮರುಕಳಿಸುವ ಖಡಕ್​ ಎಚ್ಚರಿಕೆ..!

    ಮುಖ್ಯಮಂತ್ರಿ ಬದಲಾಗೇ ಬಿಡ್ತಾರೆ ಅನ್ನೋ ಗಾಸಿಪ್ ಕಮಲ ಪಾಳಯದಲ್ಲಿ ಹರಿದಾಡುತ್ತಿದೆ. ಇದ್ಯಾವಾಗ ಮುನ್ನೆಲೆಗೆ ಬಂತೋ, ರಾಜ್ಯದಲ್ಲಿ ಜಾತಿ-ಮತ-ಪಕ್ಷ ಮರೆತು ಇಡೀ ರಾಜ್ಯ ಯಡಿಯೂರಪ್ಪ ಪರ ಒಂದಾಗಿದೆ. ವಿವಿಧ ಮಠಾಧೀಶರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಇದರ ಜತೆಗೆ ಬಿಜೆಪಿಯಲ್ಲೂ ಬಿಎಸ್​ವೈ ಪರ ಶಾಸಕರು ಅಚಲವಾಗಿ ನಿಂತಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಅಂತಿದ್ದಾರೆ.

    ರಾಜ್ಯದ ಉದ್ದಗಲದಿಂದಲೂ ವಿವಿಧ ಮಠಾಧೀಶರು ಯಡಿಯೂರಪ್ಪ ಪದಚ್ಯುತಿಗೊಳಿಸಿದ್ರೆ ಸಮುದಾಯ ಸುಮ್ಮನೆ ಕೂರಲ್ಲ ಅನ್ನೋ ಸಂದೇಶವನ್ನ ಕಮಲ ಕಮ್ಯಾಂಡ್​​ಗೆ ರವಾನಿಸಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲ, ವಿವಿಧ ಧರ್ಮಗಳ ಮಠಾಧೀಶರು ಕೂಡ ಬಿಎಸ್ ಯಡಿಯೂರಪ್ಪ ಪರ ದನಿ ಎತ್ತಿದ್ದಾರೆ. ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕಕ್ಕೆ ತಂದ ಧೀಮಂತ ನಾಯಕ ಬಿಎಸ್ ಯಡಿಯೂರಪ್ಪರನ್ನ ಬದಲಿಸಿದ್ರೆ ಬಿಜೆಪಿಗೆ ದೊಡ್ಡ ಮಟ್ಟದ ಹಾನಿ ಖಂಡಿತ ಎಂದು ವಿವಿಧ ಮಠಾಧೀಶರು ಎಚ್ಚರಿಕೆ ಕೊಟ್ಟಿದ್ದಾರೆ.

    ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಮಠಾಧೀಶರ ಬೆಂಬಲ ಬಿಎಸ್​ವೈಗಿದೆ. ಪಕ್ಷವನ್ನ ತಳಮಟ್ಟದಿಂದ ಕಟ್ಟಿ ಬೆಳೆಸಿದ ಯಡಿಯೂರಪ್ಪಗೆ ಪೂರ್ಣಾವಧಿ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. ಲಿಂಗಾಯತ ಸಮುದಾಯದ ನಾಯಕನಿಗೆ ಬಿಜೆಪಿ ವರಿಷ್ಠರು ಅನ್ಯಾಯ ಮಾಡಬಾರದು. ಉಳಿದ ಎರಡು ವರ್ಷಗಳ ಕಾಲವೂ ಯಡಿಯೂರಪ್ಪ ಸುಲಲಿತ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಅಂತಾ ವಿವಿಧ ಮಠಾಧೀಶರು ಬಿಜೆಪಿ ಹೈಕಮಾಂಡ್​ ಅನ್ನು ಆಗ್ರಹಿಸಿದ್ದಾರೆ.

    ವೀರಶೈವ-ಲಿಂಗಾಯತ ಮಠಾಧೀಶರು ಮಾತ್ರವಲ್ಲದೆ, ವಿವಿಧ ಜಾತಿಮತಗಳ ಶ್ರೀಗಳು ಬಿಎಸ್ ಯಡಿಯೂರಪ್ಪ ಬದಲಾವಣೆ ಯತ್ನವನ್ನ ವಿರೋಧಿಸಿದ್ದಾರೆ. ಚಿತ್ರದುರ್ಗ ಮುರುಘಾ ಮಠ ಸೇರಿದಂತೆ ರಾಜ್ಯದ ನೂರಾರು ಮಠಾಧೀಶರು ನೇರವಾಗಿ ಅಥವಾ ಪರೋಕ್ಷವಾಗಿ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಹೀಗೆ ರಾಜ್ಯಾದ್ಯಂತ ಬಿಎಸ್ ಯಡಿಯೂರಪ್ಪ ಪರ ಕಾವಿ ಬೆಂಬಲ ಪ್ರವಾಹೋಪಾದಿಯಾಗಿ ಹರಿದುಬರುತ್ತಿದೆ. ಇದರ ಬೆನ್ನಲ್ಲೇ ಸಿಎಂಗೆ ಬೆಂಬಲ ನೀಡಲು ಇನ್ನೆರಡು ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳ 600ಕ್ಕೂ ಅಧಿಕ ಮಠಾಧೀಶರ ಸಭೆ ನಡೆಸಲು ಶ್ರೀಗಳು ಮುಂದಾಗಿದ್ದಾರೆ. ಈ ಮುಖಾಂತರ ಯಡಿಯೂರಪ್ಪ ಸ್ಥಾನಪಲ್ಲಟಕ್ಕೆ ಪ್ರಯತ್ನಿಸಿದ್ರೆ ವೀರಶೈವ-ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಗಳು ತಿರುಗಿಬೀಳಲಿವೆ ಎಂಬ ಎಚ್ಚರಿಕೆ ನೀಡೋಕೆ ಮಠಾಧೀಶರು ಅಣಿಯಾಗಿದ್ದಾರೆ.

    ಒಂದೆಡೆ, ಮಠಾಧೀಶರ ಬೆಂಬಲದ ಮಹಾಪೂರವೇ ಯಡಿಯೂರಪ್ಪ ಕಡೆ ಹರಿದುಬಂದ್ರೆ, ಹಲವು ಸಚಿವರು ಹಾಗೂ ಬಿಜೆಪಿ ಶಾಸಕರು ಬಿಎಸ್​ವೈ ಪರ ದನಿ ಎತ್ತಿದ್ದಾರೆ. ನಾಯಕತ್ವ ಬದಲಾವಣೆ ಊಹಾಪೋಹವಷ್ಟೇ..ಬಿಎಸ್​ ಯಡಿಯೂರಪ್ಪ ಇನ್ನೂ ಎರಡು ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ ಅಂತಾ ಕಮಲ ನಾಯಕರು ಸಮಜಾಯಿಷಿ ಕೊಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಅಂದ್ರೆ, ಬಿಜೆಪಿ ಶಾಸಕರು ಮಾತ್ರವಲ್ಲ, ವೀರಶೈವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್​​ ಶಾಸಕರೂ ಬಿಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪರಿಗೆ ತೊಂದರೆ ಮಾಡಿದ್ರೆ, ಬಿಜೆಪಿ ಇತಿಹಾಸ ಮುಗೀತು ಅಂತ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ನೀಡಿದ್ದಾರೆ. ಇಷ್ಟ ಲ್ಲದೆ, ಒಂದು ವೇಳೆ , ಲಿಂಗಾಯತರಲ್ಲೇ ಪರ್ಯಾಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಅವಕಾಶ ಕೊಟ್ರೂ, ಬಿಎಸ್​ವೈಗೆ ಹೊರತಾಗಿ ಬೇರೊಬ್ಬ ನಾಯಕರನ್ನಾಗಿ ಒಪ್ಪಿಕೊಳ್ಳಲ್ಲ ಅಂತಾ ಕಾಂಗ್ರೆಸ್ ಶಾಸಕರೂ ಆದ ಶಾಮನೂರು ಖಡಕ್ ಆಗಿ ನುಡಿದಿದ್ದಾರೆ.

    ಸುದೀರ್ಘ ಅವಧಿ ಮಹಾಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರೋ ಶಾಮನೂರು ಶಿವಶಂಕರಪ್ಪ ಇಲ್ಲಿ ಹೇಳಿರೋದರಲ್ಲಿ ಯಾವುದೇ ಉತ್ಪ್ರೇಕ್ಷೆಯೂ ಇಲ್ಲ, ಅಂದಾಭಿಮಾನವೂ ಇಲ್ಲ, ರಾಜ್ಯದ ಅತಿ ದೊಡ್ಡ ಸಮುದಾಯದ ಜನರ ಭಾವನೆಗಳನ್ನ ಬಲ್ಲ ಶಾಮನೂರು, ಬಿಎಸ್​ ಯಡಿಯೂರಪ್ಪ ಪರ ಗಟ್ಟಿಯಾಗಿ ಕಹಳೆ ಮೊಳಗಿಸಿದ್ದಾರೆ. ಇಷ್ಟಲ್ಲದೆ, ಕಾಂಗ್ರೆಸ್​ನ ಮತ್ತೋರ್ವ ಶಾಸಕ, ಕಳೆದ ಚುನಾವಣೆ ಮುನ್ನ ಪ್ರತ್ಯೇಕ ಧರ್ಮದ ಬಗ್ಗೆ ಹೋರಾಟ ನಡೆಸಿದ್ದ ಎಂಬಿ ಪಾಟೀಲ್ ಕೂಡ ಬಿ.ಎಸ್​ ಯಡಿಯೂರಪ್ಪ ಗೌರವಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ. ಇಡೀ ಸಮುದಾಯ ಬಿಎಸ್​ವೈ ಹಿಂದೆ ನಿಂತಿದೆ ಅಂತಾ ಹೇಳೋ ಮೂಲಕ ಎಂಬಿ ಪಾಟೀಲ್ ಸಮುದಾಯದ ಭಾವನೆಗಳನ್ನ ಬಿಚ್ಚಿಟ್ಟಿದ್ದಾರೆ. ಹೀಗೆ ಸಿಎಂ ಬಿಎಸ್​ ಯಡಿಯೂರಪ್ಪಗೆ ಪಕ್ಷಾತೀತ, ಜಾತ್ಯಾತೀತ ಬೆಂಬಲ ವ್ಯಕ್ತವಾಗುತ್ತಿರೋದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

    ಈ ಹಿಂದೆ ಹಲವಾರು ನಿದರ್ಶನಗಳನ್ನ ಗಮನಿಸಿದ್ರೆ, ಯಾವೆಲ್ಲಾ ಸಂದರ್ಭಗಳಲ್ಲಿ ವೀರಶೈವ-;ಲಿಂಗಾಯತ ಸಿಎಂಗಳನ್ನ ಪದಚ್ಯುತಿಗೊಳಿಸಲಾಯ್ತೋ..ಆನಂತರದ ಚುನಾವಣೆಗಳಲ್ಲಿ ಆ ಪಕ್ಷ ಮಣ್ಣುಮುಕ್ಕಿದೆ. ಈಗಲೂ ಬಿಜೆಪಿ ತಪ್ಪು ಹೆಜ್ಜೆ ಇಟ್ರೆ, ಇತಿಹಾಸ ಮರುಕಳಿಸಲಿದೆ ಎಂಬುದು ಮಠಾಧೀಶರ ಎಚ್ಚರಿಕೆ! ಇದು ಕಮಲ ಕಮಾಂಡ್​ ಏನೇ ಮಾಡಿದರೂ ಎರಡು ಸಲ ಯೋಚಿಸುವಂತೆ ಮಾಡಿದೆ.

    ಇಲ್ಲಿ ಹೀಗೆ ಸಿಎಂ ಬಿಎಸ್ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಸ್ಥಾನದಿಂದ ಅಲುಗಾಡಿಸಿದ್ರೆ, ಬಿಜೆಪಿ ನಿರ್ನಾಮ ಖಚಿತ ಅಂತಾ ಎಚ್ಚರಿಕೆ ಕೊಟ್ಟಿರೋದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ. ವೀರಶೈವರು ಸಂಪೂರ್ಣವಾಗಿ ಬಿಎಸ್ ಯಡಿಯೂರಪ್ಪ ಜತೆಗಿದ್ದಾರೆ ಎಂಬ ಸಂದೇಶವನ್ನ ರವಾನಿಸಿದ್ದಾರೆ ಶಾಮನೂರು ಶಿವಶಂಕರಪ್ಪ. ಯಡಿಯೂರಪ್ಪರನ್ನ ಕೆಳಗಿಳಿಸಿದ್ರೆ, ಬಿಜೆಪಿ ನಿಜಲಿಂಗಪ್ಪ, ಬೊಮ್ಮಾಯಿ, ವೀರೇಂದ್ರ ಪಾಟೀಲ್, ಜೆಎಚ್ ಪಟೇಲ್ ಸರ್ಕಾರಗಳನ್ನ ಕೆಡವಿದ ಬಳಿಕ ಆ ಪಕ್ಷಗಳಿಗಾದ ಗತಿಯೇ ಬಿಜೆಪಿಗೆ ಕಾದಿದೆ ಎಂಬ ಕಟು ಎಚ್ಚರಿಕೆಯನ್ನ ಶಾಮನೂರು ಕೊಟ್ಟಿದ್ದಾರೆ. ಅಷ್ಟಕ್ಕೂ ವೀರಶೈವ ಮುಖ್ಯಮಂತ್ರಿಗಳ ಪದಚ್ಯುತಿ ಬಳಿಕ ಆಗಿದ್ದೇನು ಅಂತಾ ಸ್ವಲ್ಪ ಡಿಟೇಲ್ಸ್ ನೋಡಿದ್ರೆ, ಕಾಣಸಿಗುತ್ತೆ ಸಮುದಾಯದ ಪ್ರಚಂಡ ಒಗ್ಗಟ್ಟಿನ ಶಕ್ತಿ.. ಹಾಗೆಯೇ ಪ್ರತೀಕಾರದ ಜ್ವಾಲೆ..!

    ಹೌದು..1967-69ರ ಸಂದರ್ಭದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪರನ್ನ ಪದಚ್ಯುತಿಗೊಳಿಸಿದ ಇಂದಿರಾಗಾಂಧಿ ವಿರುದ್ಧ ಸಿಡಿದೆದ್ದ ಲಿಂಗಾಯಿತರು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್​​ಗೆ ಕಲಿಸಿದ ಪಾಠ ಆ ಪಕ್ಷವನ್ನ ದಶಕಗಳ ಕಾಲ ಬೆಂಬಿಡದೇ ಕಾಡಿತ್ತು. ಇದಾದ ನಂತರ ರಾಮಕೃಷ್ಣ ಹೆಗಡೆ ಆಶಯದಂತೆ ಸಿಎಂ ಪಟ್ಟಕ್ಕೇರಿದ ಬೊಮ್ಮಾಯಿರನ್ನ 1989ರಲ್ಲಿ ಕೆಳಗಿಳಿಸಿದ ರೀತಿ ವೀರಶೈವರನ್ನ ಕೆರಳಿಸಿತ್ತು. ಇದರಿಂದ ವೀರಶೈವರ ರೋಷಾಗ್ನಿ ಸ್ಫೋಟಗೊಂಡ ಬೆನ್ನಲ್ಲೇ ಈ ಕಿಡಿಯನ್ನೇ ಅಧಿಕಾರಕ್ಕೆ ಅಗತ್ಯವಾದ ಬೆಂಕಿಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಸಫಲವಾಯಿತು. ಆಗ ಪಕ್ಷ ವೀರೇಂದ್ರ ಪಾಟೀಲ್​​ಗೆ ಕೆಪಿಸಿಸಿ ಅಧ್ಯಕ್ಷಗಿರಿ ನೀಡಿತಲ್ಲದೆ, ಚುನಾವಣೆ ಚುಕ್ಕಾಣಿ ನೀಡಿತು. ಎಲೆಕ್ಷನ್​​ನಲ್ಲಿ ಲಿಂಗಾಯತರು ಸಾರಾಸಗಟಾಗಿ ಜನತಾ ಪರಿವಾರದಿಂದ ಕಾಂಗ್ರೆಸ್​​ನತ್ತ ಶಿಫ್ಟ್ ಆದ ಪರಿಣಾಮ, 1989ರಲ್ಲಿ ಕೈ ಪಕ್ಷ ಅನಾಯಾಸವಾಗಿ ಅಧಿಕಾರಕ್ಕೇರಿತು.

    ಇದಾದ ಬಳಿಕ ಒಂದು ವರ್ಷವಾಯ್ತು ಅನ್ನೋವಷ್ಟರಲ್ಲಿ ವಿಮಾನ ನಿಲ್ದಾಣದಲ್ಲೇ ರಾಜೀವ್ ಗಾಂಧಿ, ವೀರೇಂದ್ರ ಪಾಟೀಲ್​ ರಾಜೀನಾಮೆಗೆ ಹುಕುಂ ಮಾಡಿದ್ದು ವೀರಶೈವರಲ್ಲಿ ಧಾವಾಗ್ನಿ ಧಗಧಗಿಸುವಂತೆ ಮಾಡಿಬಿಟ್ಟಿತು. ಇದರ ಸೇಡಿಗೆ ಕಾದ ವೀರಶೈವರು, ಮುಂದಿನ ಚುನಾ ವಣೆ ಅಂದ್ರೆ, 1994ರಲ್ಲಿ ಕಾಂಗ್ರೆಸ್​​ಗೆ ತಕ್ಕ ಶಾಸ್ತಿ ಮಾಡಿದರು. ಇದರ ಎಫೆಕ್ಟ್ ಎಂಬಂತೆ ರಾಮಕೃಷ್ಣ ಹೆಗಡೆ-ದೇವೇಗೌಡರ ನೇತೃತ್ವದ ಜನತಾ ದಳ ಅಧಿಕಾರಕ್ಕೆ ಮರಳಿತು. ವೀರೇಂದ್ರ ಪಾಟೀಲ್​ರನ್ನ ಅಪಮಾನಕಾರಿಯಾಗಿ ಕೆಳಗಿಳಿಸಿದ ಕಾಂಗ್ರೆಸ್ ನಡೆಗೆ ಆಕ್ರೋಶಗೊಂಡು ಕೈಪಕ್ಷ ದಿಂದ ದೂರಸರಿದ ವೀರಶೈವ-ಲಿಂಗಾಯತರು, ಇಲ್ಲೀವರೆಗೆ ಅಂದ್ರೆ, ಸರಿಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್​ ವಿರುದ್ಧ ಅಚಲವಾಗಿ ನಿಂತಿದ್ದಾರೆ.

    ಇದಲ್ಲದೆ, 2008ರಲ್ಲಿ ಬಿಎಸ್​ ಯಡಿಯೂರಪ್ಪ ಜತೆಗಿನ ತಲಾ 20 ತಿಂಗಳ ಅಧಿಕಾರ ಹಂಚಿಕೆ ಸೂತ್ರ ಪಾಲಿಸದೇ ವಚನಭ್ರಷ್ಟತೆ ಆರೋಪಕ್ಕೆ ತುತ್ತಾದ ಜೆಡಿಎಸ್​​​ನತ್ತಲೂ ವೀರಶೈವ-ಲಿಂಗಾಯತರು ತಿರುಗಿನೋಡಿಲ್ಲ. ಈ ಎಲ್ಲಾ ನಿದರ್ಶನಗಳು ಇತಿಹಾಸದ ಕಣ್ಮುಂದೆ ಇರುವಾಗ ಬಿಜೆಪಿಯನ್ನ ಎರಡು ಬಾರಿ ಅಧಿಕಾರಕ್ಕೆ ತಂದ ಬಿಎಸ್ ಯಡಿಯೂರಪ್ಪ ಬಗ್ಗೆ ಬಿಜೆಪಿ ಹೈಕಮಾಂಡ್​ ಅವಕೃಪೆ ಬೀರಿದ್ರೆ, ಮತ್ತೇನೂ ಅಲ್ಲ.. ಹಿಸ್ಟರಿ ರಿಪೀಟ್ ಆಗಲಿದೆ..ಇದು ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ಹಿಂದಿನ ತಾತ್ಪರ್ಯ.

    ಇನ್ನ, ಸಿಎಂ ಬಿಎಸ್ ಯಡಿಯೂರಪ್ಪಗೆ ಎಲ್ಲಾ ಸಮುದಾಯಗಳ ಬೆಂಬಲ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನ ಬದಲಾವಣೆ ಮಾಡಬಾರದು ಎಂದು ವಿವಿಧ ಸಮಾಜಗಳ ಮುಖಂಡರು ಬಿಜೆಪಿ ಹೈಕಮಾಂಡ್​​ಅನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಸಿಎಂ ಬದಲಿಸಿದ್ರೆ ಬಿಜೆಪಿಗೆ ದೊಡ್ಡ ಡ್ಯಾಮೇಜ್ ಆಗಲಿದೆ ಎಂದು ಈ ಮುಖಂಡರು ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಾರೆ, ಸಿಎಂ ದೆಹಲಿಯಿಂದ ಬಂದ ನಂತರ ನೋ ಪ್ರಾಬ್ಲಂ ಅಂದೇ ಅನ್ಕೊಂಡ ಕಮಲ ಪಡೆಗೆ ನಳಿನ್ ಕುಮಾರ್ ಕಟೀಲ್ ರದ್ದು ಎನ್ನಲಾದ ಆಡಿಯೋ ಶಾಕ್ ಕೊಟ್ಟಿದೆ. ಇದು ನಕಲಿ ಅಂತಾ ಬಿಜೆಪಿ ಕಲಿಗಳು ಎಷ್ಟೇ ಸ್ಪಷ್ಟನೆ ಕೊಟ್ಟರೂ, ಆ ಬಳಿಕ ಆಗಿರೋ ತಲ್ಲಣ ಎಲ್ಲರಿಗೂ ಎದ್ದುಕಾಣುತ್ತಿರೋದು ಸ್ಪಷ್ಟ.

    ಬಿಎಸ್​ವೈ ಸರ್ಕಾರ ಸುಭದ್ರವಾಗಿದ್ರೂ, ಸಿಎಂ ಕುರ್ಚಿಗೆ ಮಾತ್ರ ಸಂಚಕಾರ ತರೋ ಯತ್ನವನ್ನ ಕೆಲವರು ನಡೆಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಬಿಎಸ್​ವೈ ಪರ ಬೆಂಬಲದ ಮಹಾಪೂರವೇ ಹರಿಉದುಬರುತ್ತಿದೆ. ಬಿಎಸ್​ವೈ ಪರ ಪ್ರತಿಭಟನೆ, ಸಿಎಂ ಸ್ಥಾನ ಭದ್ರಗೊಳಿಸೋಕೆ ಪ್ರಾರ್ಥಿಸಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ನಡೆದಿದೆ. ಇದರ ಬೆನ್ನಲ್ಲೇ ಸಿಎಂ ಆಪ್ತ ರೇಣುಕಾಚಾರ್ಯ ದೆಹಲಿಗೆ ಹಾರಿರೋದು ಇನ್ನಷ್ಟು ಕುತೂಹಲ ಗರಿಗೆದರುವಂತೆ ಮಾಡಿದೆ.

    ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್​ರದ್ದು ಎನ್ನಲಾದ ಆಡಿಯೋ ವಿಪ್ಲವವನ್ನೇ ಸೃಷ್ಟಿಸಿದೆ. 2 ದಿನಗಳ ದೆಹಲಿ ಭೇಟಿ ಬಳಿಕ ವಾಪಸಾದ ಸಿಎಂ ಬಿಎಸ್​ವೈ, ತಮ್ಮ ನಾಯಕತ್ವ ಅಬಾಧಿತ ಅಂತಾನೇ ಹೇಳಿದಾಗ, ಕಮಲ ಪಾಳೆಯದಲ್ಲಿ ಕಂಡ ನಿರಾಳತೆ ಇದೀಗ ಸ್ವಲ್ಪಮಟ್ಟಿಗಾದರೂ ಮಾಯವಾಗಿದೆ. ಸಿಎಂ ಆಪ್ತರ ಮೊಗದಲ್ಲಿ ಮೊದಲಿದ್ದ ಹುಮ್ಮಸ್ಸು ಕಾಣಿಸುತ್ತಿಲ್ಲ. ಅದೇನೋ ದುಗುಡ..!

    ನಳಿನ್ ಆಡಿಯೋ ನಕಲಿ ಅಂತಾ ಎಷ್ಟೇ ಹೇಳಿದರೂ, ಈಗ ಕೇಸರಿ ಮನೆಯಲ್ಲಿ ಕಂಡಿರೋ ಚಟುವಟಿಕೆಗಳು ಬೇರೆಯದ್ದೇ ಆದ ಭಾವ ಮೂಡಿಸಿದೆ. ಇದೇ 25 ಹಾಗೂ 26ಕ್ಕೆ ಬಿಎಸ್​ವೈ ಕರೆದಿರೋ ಔತಣಕೂಟ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇದು ವಿದಾಯ ಸಭೆಯೋ..ಇಲ್ಲಾ ಯುದ್ಧಗೆದ್ದ ಖುಷಿಯ ಸಂಭ್ರಮವೋ ಎಂಬುದೇ ಅರಿಯದಾಗಿದೆ. ಆದ್ರೂ ಅಷ್ಟು ಸುಲಭವಾಗಿ ಸಿಎಂ ಬದಲಾವಣೆ ಸಾಧ್ಯತೆಯನ್ನ ಒಪ್ಪಿಕೊಳ್ಳದ ಸಿಎಂ ಆಪ್ತವಲಯ ಎಚ್ಚರಿಕೆಯಿಂದಲೇ ಎಲ್ಲವನ್ನೂ ಗಮನಿಸುತ್ತಿದೆ. ಯಾವಾಗ ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ವೀರಶೈವ-ಲಿಂಗಾಯತರು ಅತ್ಯಪೂರ್ವ ಒಗ್ಗಟ್ಟು ಪ್ರದರ್ಶಿಸಿದರೋ, ಹೈಕಮಾಂಡ್​​ ಮಟ್ಟದಲ್ಲಿ ಕಂಪನ ಸೃಷ್ಟಿಯಾಗಿರೋದು ನಿಜ.

    ಈಗಲೇ ಇಷ್ಟೊಂದು ಪ್ರಮಾಣದಲ್ಲಿ ಬಿಎಸ್ವೈ ಪರ ಸಮುದಾಯ ಎದ್ದು ನಿಂತಿರುವಾಗ, ಒಂದು ವೇಳೆ ಯಡಿಯೂರಪ್ಪರನ್ನ ಬದಲಿಸಿಬಿಟ್ರೆ ಏನು ಗತಿ ಎಂಬ ಆತಂಕ ಕೂಡ ವರಿಷರಲ್ಲಿ ಮೂಡಿದೆ. ಹೀಗಾಗಿ ಎಲ್ಲವನ್ನೂ ಅಳೆದೂತೂಗಿಯೂ ನೋಡಿದ ಬಳಿಕವಷ್ಟೇ ನಾಯಕತ್ವ ಬದಲಾವಣೆ ಮಾಡಬೇಕಾ? ಬೇಡವೋ? ಎಂಬ ಬಗ್ಗೆ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್​ ತೀರ್ಮಾನಿಸಿದೆ ಎನ್ನಲಾಗಿದೆ. ಸಿಎಂ ಆಪ್ತ ಪಡೆ ಕೂಡ ಅಲ್ಲೀವರೆಗೂ ಆತುರ ಬೀಳದೆ ಎಚ್ಚರಿಕೆಯಿಂದ ತಾಳ್ಮೆಯಿಂದ ಕಾದುನೋಡೋಕೆ ಮುಂದಾಗಿದೆ. ಇತ್ತ ಸಿಎಂ ಬದಲಾವಣೆ ಬಗೆಗಿನವದಂತಿಗೆ ರೆಕ್ಕೆಪುಕ್ಕೆ ಬಂದಿದ್ರೆ, ಯಡಿಯೂರಪ್ಪ ಪರ ಪ್ರತಿಭಟನೆ, ಪೂಜೆ ಪುನಸ್ಕಾರ ನಡೆಯುತ್ತಿದೆ. ಚಾಮರಾಜನಗರದಲ್ಲಿ ಬಿಎಸ್​ವೈ ಪದಚ್ಯುತಿ ಯತ್ನ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಾಸನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರವನ್ನ ರಕ್ಷಿಸಬೇಕೆಂದು ಪ್ರಾರ್ಥಿಸಿ ವೀರಶೈವ ಮಹಸಭಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದೆ.

    ಇದೆಲ್ಲದರ ಮಧ್ಯೆ, ಎಲ್ಲರ ಚಿತ್ತ ದೇಶದ ರಾಜಧಾನಿಯತ್ತ ನೆಟ್ಟಿದ್ರೆ, ಸಿಎಂ ಆಪ್ತ ಶಾಸಕ ರೇಣುಕಾಚಾರ್ಯ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಸಾಧ್ಯ ವಾದ್ರೆ, ಪಕ್ಷದ ವರಿಷ್ಟರನ್ನ ಭೇಟಿಯಾಗೋ ಪ್ಲಾನ್ ಮಾಡಿರೋ ರೇಣುಕಾಚಾರ್ಯ, ಯಡಿಯೂರಪ್ಪರನ್ನ ಬದಲಿಸಿದ್ರೆ ಆಗೋ ಹಾನಿ ಬಗ್ಗೆ ವಿವರಿಸೋ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

    ಒಟ್ಟಾರೆ, ಬಿಎಸ್​ವೈ ಪರ ಸಮುದಾಯ ಹಾಗೂ ಮಠಾಧೀಶರು ಜಾತಿ-ಮತ-ಪಕ್ಷ ಮರೆತು ಒಗ್ಗೂಡಿದೆ. ಮಾಸ್ ಲೀಡರ್ ಯಡಿಯೂರಪ್ಪ ರನ್ನ ಅಲುಗಾಡಿಸಿದ್ರೆ ಬಿಜೆಪಿಗೆ ನಷ್ಟ ಗ್ಯಾರೆಂಟಿ ಅನ್ನೋ ಎಚ್ಚರಿಕೆಯನ್ನ ಕೂಡ ಕೆಲವು ಮಠಾಧೀಶರು ನೀಡಿದ್ದಾರೆ. ಇಲ್ಲಿ ಮಠಾಧೀಶರು ಮೊಳಗಿಸಿರೋ ಕಹಳೆ ದೂರದ ದೆಹಲಿ ಅಂಗಳ ತಲುಪುತ್ತಾ? ಪರಿಸ್ಥಿತಿ ಅವಲೋಕಿಸಿಯಾದರೂ, ಯಾರದ್ದೋ ಮೂರು-ನಾಲ್ಕು ಮಂದಿ ಮಾತಿಗೆ ಕಿವಿಗೊಡದೇ, ಬಿಎಸ್​ವೈಗೆ ಬಿಜೆಪಿ ಹೈಕಮಾಂಡ್​ ಪೂರ್ಣ ಅವಕಾಶ ಕೊಡುತ್ತಾ? ಇದೇ ಇವತ್ತಿನ ಕುತೂಹಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts