More

    ಪಂಜಾಬ್​ನ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಎಪಿಯ 10 ಶಾಸಕರ ಮಾಹಿತಿ ಇಲ್ಲಿದೆ…

    ಚಂಡೀಗಢ: ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಆಮ್​ ಆದ್ಮಿ ಪಕ್ಷ (ಎಎಪಿ) ಮೊದಲ ಬಾರಿಗೆ ಪಂಜಾಬ್​ ಅಧಿಕಾರದ ಚುಕ್ಕಾಣಿ ಹಿಡಿದ್ದಿದ್ದು, ಪಕ್ಷದ 10 ಶಾಸಕರು ಇಂದು (ಮಾ.19) ಕ್ಯಾಬಿನೆಟ್​ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಸಿಎಂ ಭಗವಂತ್​ ಮಾನ್​ ನೇತೃತ್ವದಲ್ಲಿ ಇಂದು ಸಂಜೆ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಗ್ಗೆ 11.30ರ ಸುಮಾರಿಗೆ 10 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಹೊಸ ಸಚಿವರ ಪಟ್ಟಿ ಈ ಕೆಳಕಂಡಂತಿದೆ.

    1. ಹರ್ಪಾಲ್​ ಸಿಂಗ್​ ಚೀಮಾ: ಹರ್ಪಾಲ್ ಸಿಂಗ್ ಚೀಮಾ ಅವರು ದಿರ್ಬಾದಿಂದ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಾರಂಭದಿಂದಲೂ ಎಎಪಿ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಪಕ್ಷದಲ್ಲಿ ಪ್ರಮುಖ ದಲಿತ ನಾಯಕ ಎಂದು ಪರಿಗಣಿಸಲಾಗಿದೆ.

    2. ಡಾ. ಬಲ್ಜಿತ್​ ಕೌರ್​: ಡಾ ಬಲ್ಜಿತ್ ಕೌರ್ ಅವರು ಎಎಪಿ ಮಾಜಿ ಸಂಸದ ಸಾಧು ಸಿಂಗ್ ಅವರ ಪುತ್ರಿ. ಅವರು ಮಾಲೌಟ್ ಕ್ಷೇತ್ರದ ಶಾಸಕಿ. ಆಕೆ ನೇತ್ರ ತಜ್ಞೆಯಾಗಿದ್ದಾರೆ.

    3. ಹರ್ಭಜನ್​ ಸಿಂಗ್​ ಇಟಿಒ: ಇವರು ಜಂದಿಯಾಲ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2017ರಲ್ಲಿ ಎಎಪಿ ಅನ್ನು ಸೇರಿದರು. ಮಾಜಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಯಾಗಿರುವ ಹರ್ಭಜನ್​ ಸಿಂಗ್​ ಅವರು ರಾಜಕೀಯ ಸೇರಲು ಸ್ವಯಂ ನಿವೃತ್ತಿ ಪಡೆದುಕೊಂಡರು.

    4. ಡಾ. ವಿಜಯ್​ ಸಿಂಗ್ಲ: ವೃತ್ತಿಯಲ್ಲಿ ದಂತವೈದ್ಯರಾಗಿರುವ ವಿಜಯ್ ಸಿಂಗ್ಲಾ ಅವರು ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸೆವಾಲಾ ಅವರನ್ನು ಸೋಲಿಸಿ ಮಾನ್ಸಾದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    5. ಲಾಲ್​ ಚಂದ್​ ಕಟರುಚಕ್​: ಇವರು ಭೋವಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜೋಗಿಂದರ್ ಪಾಲ್ ಅವರನ್ನು ಸೋಲಿಸಿದ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.

    6. ಗುರ್ಮಿತ್​ ಸಿಂಗ್​ ಮೀಟ್​ ಹೆಯರ್​: ಬರ್ನಾಲಾ ಕ್ಷೇತ್ರದಿಂದ ಆಯ್ಕೆಯಾದ 32 ವರ್ಷದ ಶಾಸಕ ಇವರು. ಮೊದಲು ಅಣ್ಣಾ ಹಜಾರೆ ಅವರ ಚಳವಳಿಗೆ ಸೇರಿದರು ಮತ್ತು ನಂತರ ಎಎಪಿ ಸೇರಿದರು.

    7. ಕಲದೀಪ್​ ಸಿಂಗ್​ ಧಲಿವಾಲ್​: ಇವರು ಅಜ್ನಾಲಾ ಕ್ಷೇತ್ರದ ಶಾಸಕ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಏಳು ವರ್ಷಗಳ ಹಿಂದೆ ಎಎಪಿ ಸೇರಿದ್ದರು. 2017ರಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ. 2019 ರ ಚುನಾವಣೆಯಲ್ಲಿ ಅವರು ಗುರುದೀಪ್ ಔಜ್ಲಾ ವಿರುದ್ಧ ಸ್ಪರ್ಧಿಸಿದರು ಆದರೆ ಸೋತರು.

    8. ಲಾಲ್ಜಿತ್​ ಸಿಂಗ್​ ಭುಲ್ಲರ್​: ಪಟ್ಟಿ ಕ್ಷೇತ್ರದಲ್ಲಿರುವ ಧಾನ್ಯ ಮಾರುಕಟ್ಟೆಯಲ್ಲಿ ಇವರು ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಚುನಾವಣೆಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರ ಅಳಿಯ ಪ್ರತಾಪ್ ಸಿಂಗ್ ಕೈರಾನ್ ಅವರನ್ನು ಸೋಲಿಸಿ, ಇದೀಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    9. ಬ್ರಾಮ್​ ಶಂಕರ್​ (ಜಿಂಪಾ): 25 ವರ್ಷಗಳಿಂದ ಕೌನ್ಸಿಲರ್ ಆಗಿರುವ ಬ್ರಾಮ್​ ಶಂಕರ್​ ಅವರು ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಹೊಶಿಯಾರ್‌ಪುರದಲ್ಲಿ ಸಚಿವ ಸುಂದರ್ ಶ್ಯಾಮ್ ಅರೋರಾ ಅವರನ್ನು ಸೋಲಿಸಿದ್ದಾರೆ.

    10. ಹರ್ಜೊತ್​ ಸಿಂಗ್​ ಬೈನ್ಸ್​: ಇವರು ಶ್ರೀ ಆನಂದಪುರ ಸಾಹಿಬ್‌ನಿಂದ ಪಂಜಾಬ್ ಅಸೆಂಬ್ಲಿ ಸ್ಪೀಕರ್ ರಾಣಾ ಕೆಪಿ ಸಿಂಗ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಎಎಪಿ ಯುವ ಘಟಕದ ಮುಖ್ಯಸ್ಥರಾಗಿದ್ದಾರೆ ಮತ್ತು ಅರ್ಹ ವಕೀಲರೂ ಆಗಿದ್ದಾರೆ.

    ಪ್ರಮಾಣ ವಚನ ಕಾರ್ಯಕ್ರಮ ಪಂಜಾಬ್​ ರಾಜಧಾನಿ ಚಂಡೀಗಢದ ರಾಜಭವನದಲ್ಲಿ ನಡೆಯಿತು. ಪಂಜಾಬ್ ಕ್ಯಾಬಿನೆಟ್​ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಮಂತ್ರಿಗಳನ್ನು ಹೊಂದಬಹುದು. ಹೀಗಾಗಿ ರಾಜ್ಯ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಲು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸದಸ್ಯರನ್ನು ಸೇರಿಸಿಕೊಳ್ಳಲಿದೆ.

    ಮಾನ್​ ಸಂದೇಶ
    ಶುಕ್ರವಾರ ಟ್ವಿಟರ್ ಮೂಲಕ ತಮ್ಮ ಸಚಿವರ ಪಟ್ಟಿಯನ್ನು ಪ್ರಕಟಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್, ನೂತನ ಸಚಿವರಿಗೆ ಅಭಿನಂದಿಸಿದ್ದಾರೆ ಮತ್ತು ಪಂಜಾಬ್‌ಗೆ ಪ್ರಾಮಾಣಿಕ ಸರ್ಕಾರವನ್ನು ನೀಡಲು ಸಂಪುಟವು ಹಗಲಿರುಳು ಶ್ರಮಿಸಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಕುರಿತು ಶಾಕಿಂಗ್​ ಕಾಮೆಂಟ್: ವೈರಲ್​ ಆಗ್ತಿದೆ ಪ್ರಕಾಶ್​ ರಾಜ್ ಟ್ವೀಟ್​​

    ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…

    ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ ಧರಣಿ ಕುಳಿತ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts