More

    ಇಂಜಿನಿಯರಿಂಗ್ ಪರೀಕ್ಷೆಗಳಿಗೆ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆ: ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್

    ಮೈಸೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಪ್ರಶ್ನೆ ಪತ್ರಿಕೆ ನೀಡಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.
    ನಗರದ ವಿಶ್ವವಿದ್ಯಾನಿಲಯ ಬಡಾವಣೆಯಲ್ಲಿರುವ ಮೈಸೂರು ಅರ್ಕಿಟೆಕ್ಟ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನಮ್ಮ ಹಬ್ಬ ಕಾಲೇಜಿನ ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.
    ಇಂಜಿನಿಯರಿಂಗ್‌ಗೆ ಸೇರುವ ವಿದ್ಯಾರ್ಥಿಗಳಲ್ಲಿ ಶೇ.60ರಷ್ಟು ಗ್ರಾಮೀಣ ಪ್ರದೇಶದಿಂದ ಬಂದವರು ಇದ್ದಾರೆ. ಕನ್ನಡ ಕೆಲವರು ಎಸ್‌ಎಸ್‌ಎಲ್‌ಸಿ ವರೆವಿಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅವರಿಗೆ ಇಂಜಿನಿಯರಿಂಗ್‌ನಲ್ಲಿ ಇಂಗ್ಲಿಷ್ ಕಷ್ಟವಾಗುತ್ತಿರುವುದು ನನ್ನ ಅನುಭವದಿಂದಲೂ ತಿಳಿದಿದೆ ಎಂದರು.
    ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮಾತೃಭಾಷೆಯಲ್ಲಿಯೂ ಶಿಕ್ಷಣ ನೀಡಬೇಕಾಗಿರುವುದರಿಂದ ಯಾವುದೇ ವಿದ್ಯಾರ್ಥಿ ತರಗತಿಯಲ್ಲಿ ಪಠ್ಯ ಅರ್ಥವಾಗದೆ ಇದ್ದಾಗ ಕನ್ನಡದಲ್ಲಿಯೂ ಧೈರ್ಯವಾಗಿ ಪ್ರಶ್ನೆಗಳನ್ನು ಕೇಳಬಹುದು. ಅದಕ್ಕೆ ಪ್ರಾಧ್ಯಾಪಕರು ಅರ್ಥವಾಗುವಂತೆ ತಿಳಿಸಿ ಹೇಳಬೇಕು ಎನ್ನುವ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
    ವಿಶ್ವವಿದ್ಯಾಲಯದಲ್ಲಿ ಪ್ರಥಮ ಬಾರಿಗೆ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುವುದು. ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಪರೀಕ್ಷೆ ನಡೆದ ಕೇವಲ 10 ದಿನಗಳಲ್ಲಿ ಫಲಿತಾಂಶ ನೀಡಲಾಗುವುದು. ವಿದ್ಯಾರ್ಥಿಗಳ ವಾಟ್ಸ್‌ಆಪ್‌ಗೆ ಫಲಿತಾಂಶ ಕಳುಹಿಸಲಾಗುವುದು. ಪದವಿ ಮುಗಿದ ತಕ್ಷಣವೇ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣ ಪತ್ರ ನೀಡಲಾಗುವುದು. ಇದರಿಂದ ವಿದೇಶ, ಇನ್ನಿತರ ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅಗುತ್ತಿದ್ದ ವಿಳಂಬವನ್ನು ತಪ್ಪಿಸಿದಂತಾಗುತ್ತದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯೋಗವಾಗಿದೆ ಎಂದು ವಿವರಿಸಿದರು.
    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಟಿ.ಪಿ.ರೇಣುಕಾಮೂರ್ತಿ, ಎಲ್.ಕೆ.ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಜೆ.ಎನ್.ಪ್ರಶಾಂತ್, ಟ್ರಸ್ಟಿ ಡಾ.ಕೆ.ವಿ.ಲಕ್ಷ್ಮೀದೇವಿ, ಮೈಸೂರು ಅರ್ಕಿಟೆಕ್ಟ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸ್ವಪ್ನಾ, ಡೀನ್, ಕಾಲೇಜಿನ ಪ್ರೊ.ರಣಬೀರ್ ಮೊದಲಿಯಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts