More

    ಕೇರಳದವರಿಗೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮ ಪರಿಷ್ಕರಣೆ

    ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಸಹಿತ ಎಲ್ಲರಿಗೂ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ ಬುಧವಾರ ಆದೇಶ ಪರಿಷ್ಕರಣೆ ಮಾಡಿದೆ.

    ಅದರಂತೆ, ಮೂರು ದಿನದೊಳಗಿನ ಪ್ರಯಾಣದವರು, ಮೂರು ದಿನದೊಳಗೆ ಇರುವುದಕ್ಕೆ ಪರೀಕ್ಷೆಗಾಗಿ ರಾಜ್ಯಕ್ಕೆ ಒಬ್ಬ ಹೆತ್ತವರೊಂದಿಗೆ ಆಗಮಿಸುವ ವಿದ್ಯಾರ್ಥಿಗಳು, ಆರೋಗ್ಯ ಸೇವಾ ವೃತ್ತಿಪರರು, ಅವರ ಸಂಗಾತಿಗಳು, 2ಕ್ಕಿಂತ ಕೆಳಹರೆಯದ ಮಕ್ಕಳು, ತುರ್ತು ಆರೋಗ್ಯ ಸಮಸ್ಯೆ, ಸಾವಿನಂತಹ ಸನ್ನಿವೇಶ ಇಂಥವರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.

    ಉಳಿದಂತೆ ಎಲ್ಲ ವಿದ್ಯಾರ್ಥಿಗಳು, ಉದ್ಯೋಗಿಗಳು ಕಡ್ಡಾಯವಾಗಿ 72 ಗಂಟೆಯೊಳಗಿನ ಆರ್‌ಟಿ ಪಿಸಿಆರ್ ಪ್ರಮಾಣಪತ್ರ ತರಬೇಕು, ಇದರ ಅವಧಿ ಒಂದು ವಾರ ಆಗಿರುತ್ತದೆ ಎಂದು ಸೂಚಿಸಲಾಗಿದೆ.

    ಕೇರಳದಿಂದ ಬರುವ ಎಲ್ಲ ವಿದ್ಯಾರ್ಥಿಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಶಿಕ್ಷಣ ಸಂಸ್ಥೆಗಳ ಆಡಳಿತ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಯಾವುದೇ ಕಂಪನಿಗಳ ಉದ್ಯೋಗಿಗಳ ಸಾಂಸ್ಥಿಕ ಕ್ವಾರಂಟೈನ್ ಬೇಕಾದಲ್ಲಿ ಆಯಾ ಸಂಸ್ಥೆ, ಕಂಪನಿಗಳು ವ್ಯವಸ್ಥೆ ಮಾಡಬೇಕು. ಅಂತವರಿಗೆ ಯಾವುದೇ ಕಾರಣಕ್ಕೂ ಹೋಂ ಐಸೊಲೇಶನ್ ಕೊಡಲೇಬಾರದು.

    ಗೊಂದಲವಿಲ್ಲ: ಕೇರಳದಿಂದ ಆಗಮಿಸುವವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾದರೂ ತಲಪಾಡಿಯಲ್ಲಿ ಯಾವುದೇ ಗೊಂದಲ ಕಾಣಿಸಲಿಲ್ಲ. ಈಗಾಗಲೇ ಕೇರಳದಿಂದ ರೈಲಿನಲ್ಲಿ, ಬಸ್‌ಗಳಲ್ಲಿ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ತಲಪಾಡಿ ಮೂಲಕ ಬರುವ ಮಂಗಳೂರಿನ ಕೆಲವು ಕಂಪನಿಗಳ ಉದ್ಯೋಗಿಗಳನ್ನು(ಮಂಗಳೂರಿನಲ್ಲಿ ವಾಸಿಸುವ ಕೇರಳ ಮೂಲದ) ಮಾತ್ರ 7 ದಿನ ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ವಿಜಯವಾಣಿಗೆ ತಿಳಿಸಿದರು.

    ಕೇರಳದಿಂದ ಆಗಮಿಸುವವರು ಮೂರು ದಿನದೊಳಗೆ ಮರುಪ್ರಯಾಣ ಮಾಡುವುದಾದರೆ ಅವರಿಗೆ ಕ್ವಾರಂಟೈನ್ ಇಲ್ಲ, ಅವರು ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಹೊಂದಿದ್ದರೆ ಸಾಕಾಗುತ್ತದೆ, ಸಾಂಸ್ಥಿಕ ಕ್ವಾರಂಟೈನ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ. ಅಲ್ಲದೆ ದೈನಂದಿನ ಪ್ರಯಾಣದ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಪ್ರಮಾಣ ಪತ್ರ ನೀಡಿದರೆ ಸಾಕಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts