More

    ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ಕ್ರಮ ಕೈಗೊಳ್ಳಲು ಸಚಿವ ಬಿ.ಸಿ.ಪಾಟೀಲ್ ಸೂಚನೆ

    ಉಡುಪಿ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ಕೀಟನಾಶಕ, ಗೊಬ್ಬರ ವಿತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೀಜ ಮತ್ತು ಕೀಟನಾಶಕಗಳನ್ನು ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಿ, ಕಳಪೆ ವಸ್ತುಗಳನ್ನು ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಯಂತ್ರೋಪಕರಣ ಬೆಲೆ ಮತ್ತು ಮಾರುಕಟ್ಟೆಯಲ್ಲಿರುವ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಇಲಾಖೆಗೆ ಸಬ್ಸಿಡಿ ದರದಲ್ಲಿ ಸರಬರಾಜು ಮಾಡುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಸಬ್ಸಿಡಿ ಮೊತ್ತ ನೇರವಾಗಿ ಫಲಾನುಭವಿ ರೈತರ ಖಾತೆಗೆ ಹಾಕುವ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.

    ಬೆಳೆ ವಿಮೆ ಗೊಂದಲ ಪರಿಹರಿಸಿ: ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ಎಪಿಎಂಸಿಯಲ್ಲಿ ಶೇ.1.5 ತೆರಿಗೆ ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ಭತ್ತದ ಬೆಂಬಲ ಬೆಲೆ ಕಟಾವು ಸಂದರ್ಭದಲ್ಲೇ ಘೋಷಣೆ ಮಾಡಬೇಕು. ಜಿಲ್ಲೆಗೆ ಕೋಲ್ಡ್ ಸ್ಟೋರೇಜ್ ಅಗತ್ಯವಿದ್ದು, ಮಳೆ ಆಧಾರಿತ ಸಿರಿಧಾನ್ಯಗಳಿಗೆ ನೀಡುವ ರೀತಿಯಲ್ಲಿ ಭತ್ತದ ಬೆಳೆಗೂ ಪ್ರೋತ್ಸಾಹ ಧನ ನೀಡಬೇಕು. ಬೆಳೆ ವಿಮೆಯಲ್ಲಿ ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ರಸಗೊಬ್ಬರ ಸಮಸ್ಯೆ ಇಲ್ಲ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮಸ್ಯೆ ಇಲ್ಲ. ಇದುವರೆಗೆ 49 ಮಿ.ಮೀ ಮಳೆ ಆಗಿದ್ದು, ಜಿಲ್ಲೆಯಲ್ಲಿ 36,000 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೊಂದಾಯಿಸಿದ ಎಲ್ಲ 1,34,244 ಮಂದಿಗೆ ಮೊದಲ ಕಂತಿನಲ್ಲಿ 2 ಸಾವಿರ ರೂ. ವಿತರಿಸಲಾಗಿದೆ. ಕೋವಿಡ್-19 ಅವಧಿಯಲ್ಲಿ ಜಿಲ್ಲೆಯಲ್ಲಿನ ಕೃಷಿ ಬೆಳೆಗಳಿಗೆ ಹಾನಿಯಾಗದಂತೆ ಸಾಗಾಟ ಮತ್ತು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಉಪಸ್ಥಿತರಿದ್ದರು.

    ಕೃಷಿ ಪದವಿ ಕಾಲೇಜು ಆರಂಭಿಸಿ: ಕೃಷಿಕರ ಬೆಳೆಗೆ ಕಾಡುಪ್ರಾಣಿಗಳಿಂದ ಹಾವಳಿಯಿಂದ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಗ್ರಹಿಸಿದರು. ಶಾಸಕ ರಘುಪತಿ ಭಟ್ ಮಾತನಾಡಿ, ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಪರಿಸರದಲ್ಲಿ 357 ಎಕರೆ ಜಾಗವಿದ್ದು, ಸದ್ಯ ಡಿಪ್ಲೊಮಾ ಕಾಲೇಜು ನಡೆಯುತ್ತಿದೆ. ಜಿಲ್ಲೆಗೆ ಕೃಷಿ ಪದವಿ ಕಾಲೇಜು ಅಗತ್ಯವಿದ್ದು, ಶೀಘ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಬಿ.ಸಿ. ಪಾಟೀಲ್ ಹೇಳಿದರು.

    ಜಿಲ್ಲೆಯಲ್ಲಿ ಕೃಷಿ ಭೂಮಿ ಹಡಿಲು ಬಿಟ್ಟವರಿಗೂ ಕೃಷಿ ಲಾಭದಾಯಕ ಎಂಬ ಅರಿವಾಗಿದೆ. ಯುವಕರು ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಕೆಲವೆಡೆ ಕೃಷಿ ಭೂಮಿ ಹಡಿಲು ಬಿಟ್ಟವರೂ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಾಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಇದನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಗಮನಕ್ಕೆ ತರಲಾಗುವುದು.
    – ಬಿ.ಸಿ ಪಾಟೀಲ್, ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts