More

    ವಿಧಾನಸಭಾ ಅಖಾಡದಲ್ಲಿ ಪುತ್ತೂರ‌ ಮುತ್ತು ಯಾರು?

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಪ್ರತಿ ಬಾರಿಯೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗಮನ ಸೆಳೆಯುವ ವಿಧಾನಸಭಾ ಕ್ಷೇತ್ರ ಪುತ್ತೂರು. ಸಂಘ ಪರಿವಾರ ಬಲವಾಗಿರುವ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಂತೆ ಕೇಸರಿ ಪಾಳಯ ಸಕ್ರಿಯವಾಗಿದೆ. ಕಾಂಗ್ರೆಸ್‌ನಲ್ಲೂ ಚಟುವಟಿಕೆ ನಡೆಯುತ್ತಿವೆ.

    ಬಿಜೆಪಿಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಹೊರತುಪಡಿಸಿ ಇನ್ಯಾರೂ ಟಿಕೆಟ್ ಆಕಾಂಕ್ಷಿಗಳು ಸದ್ಯಕ್ಕೆ ಕಂಡುಬಂದಿಲ್ಲ. ಹಾಗಂತ ಅವರು ಸರ್ವಸಮ್ಮತ ಅಭ್ಯರ್ಥಿಯೆಂದೇನೂ ಇಲ್ಲ. ಕಾಂಗ್ರೆಸಿನಲ್ಲಿರುವಂತೆ ಬಿಜೆಪಿಯಲ್ಲೂ ಒಳ ಬೇಗುದಿ ಇದೆ. ಆದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುವ ಪ್ರಮಾಣದಲ್ಲಿಲ್ಲ.

    ಪುತ್ತೂರಿನ ಹಿಂದುತ್ವವಾದಿ ನಾಯಕ ಅರುಣ್‌ಕುಮಾರ್ ಪುತ್ತಿಲ ಹಾಗೂ ಯುವಸಂಘಟಕ ಅಶೋಕ್ ರೈ ಕೋಡಿಂಬಾಡಿ ಬಹುತೇಕ ತೆರೆಮರೆಗೆ ಸರಿದಿದ್ದಾರೆ. ಅಶೋಕ್ ರೈ ಕಾಂಗ್ರೆಸ್ ಕೋಟೆ ಸೇರಿಯಾಗಿದೆ. ಹಾಗಾಗಿ ಮಠಂದೂರು ಅವರಿಗೆ ಬಿಜೆಪಿಯಲ್ಲಿ ದೊಡ್ಡ ಮಟ್ಟಿನ ಪೈಪೋಟಿ ನೀಡುವವರು ಇಲ್ಲ. ಇನ್ನೊಂದೆಡೆ, ಬಣ ರಾಜಕೀಯದಿಂದಲೇ ಅನೇಕ ಬಾರಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ನಲ್ಲಿ ಈಗಲೂ ಅದೇ ಪರಿಸ್ಥಿತಿ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಯುವನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಕೂಡ ಟಿಕೆಟ್ ಆಕಾಂಕ್ಷಿಗಳು. ಅಶೋಕ್ ರೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿ, ಉಳಿದವರ ನಿದ್ದೆ ಕೆಡಿಸಿದ್ದಾರೆ.

    *ಸಂಘ ಪರಿವಾರ ಓಟ್‌ಗಾಗಿ ಪೈಪೋಟಿ: ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಸದ್ಯ ಮೊದಲಿನ ಪರಿಸ್ಥಿತಿ ಇಲ್ಲ. ಅವರನ್ನು ವಿರೋಧಿಸುವ ದೊಡ್ಡ ಬಣ ಪಕ್ಷದಲ್ಲಿದೆ. ಈಗ ಅಶೋಕ್ ರೈ ಆಗಮನವೂ ಶಕುಂತಳಾಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇವರಿಬ್ಬರೂ ಬಿಜೆಪಿಯಲ್ಲಿದ್ದವರು. ಹಾಗಾಗಿ ಹಿಂದು ಮತಗಳಿಗೆ ಲಗ್ಗೆ ಹಾಕಬೇಕೆಂದು ಪಕ್ಷ ಭಾವಿಸಿದರೆ ಇಬ್ಬರಲ್ಲಿ ಒಬ್ಬರಿಗೆ ಸೀಟು ಗ್ಯಾರಂಟಿ. ಕಾಂಗ್ರೆಸ್ ಇಲ್ಲಿ ಹೊಸ ಪ್ರಯೋಗ ಮಾಡುವ ಸಾಧ್ಯತೆ ಜಾಸ್ತಿ. ಕಾಂಗ್ರೆಸ್‌ನಲ್ಲಿ ಹಿಂದು ಸಂಘಟನೆ ರಚಿಸಿ ರಾಜ್ಯಮಟ್ಟದ ನಾಯಕರ ಕೆಂಗಣ್ಣಿಗೆ ಗುರಿಯಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಕೂಡ ಟಿಕೆಟ್ ಆಕಾಂಕ್ಷಿ. ಇನ್ನೊಬ್ಬರು ನಾಯಕಿ ದಿವ್ಯಪ್ರಭಾ ಚಿಲ್ತಡ್ಕ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಕಳೆದ ಎರಡು ಬಾರಿಯೂ ಟಿಕೆಟ್‌ಗೆ ಪ್ರಯತ್ನಿಸಿ, ಯಶಸ್ವಿಯಾಗಿಲ್ಲ. ಈ ಹಿಂದೆ ಸುಳ್ಯಕ್ಕೆ ಹೆಚ್ಚಿನ ಅನುದಾನ ತಂದರೂ, ಅಲ್ಲಿ ಮೀಸಲಾತಿ ಅಡ್ಡಿ ಇರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಈಗ ಪುತ್ತೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಚಾರವಂತೂ ಭರ್ಜರಿಯಾಗಿದೆ.

    ———————————————————————————–

    ಮಠಂದೂರಿಗಿಲ್ಲ ಪರ್ಯಾಯ

    ಈ ಬಾರಿ ಬಿಜೆಪಿಯಿಂದ ಸ್ಥಳೀಯ ಹಿಂದು ಮುಖಂಡರು ಸ್ಪರ್ಧೆ ಆಸಕ್ತಿ ತೋರಿಸುತ್ತಿಲ್ಲ. ಬಿಜೆಪಿ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನೇ ಬೆಂಬಲಿಸಲು ತೀರ್ಮಾನಿಸಿದಂತಿದೆ. ಕ್ಷೇತ್ರದ ಮತದಾರರಲ್ಲಿ ಶೇ.35ರಷ್ಟು ಗೌಡ ಸಮಾಜದವರು ಇರುವುದು ಹಾಲಿ ಶಾಸಕ ಮಠಂದೂರು ಅವರ ಪ್ಲಸ್ ಪಾಯಿಂಟ್. ಬಿಜೆಪಿಯಲ್ಲಿ ಆಂತರಿಕ ಮುನಿಸು ಇಲ್ಲವೆಂದಲ್ಲ. ಹಲವಾರು ಪ್ರಕರಣಗಳಲ್ಲಿ ಇದು ಗೋಚರಿಸಿದೆ. ಅದರಲ್ಲೂ ಹಿಂದು ಸಂಘಟನೆಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿರುವುದಿದೆ. ಆದರೆ ಅವೆಲ್ಲವನ್ನೂ ಮಠಂದೂರು ಸಮರ್ಥವಾಗಿ, ಸಮಾಧಾನದಿಂದ ನಿಭಾಯಿಸಿದ್ದಾರೆ. ಈ ಕಾರಣದಿಂದಾಗಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಕ್ಷೀಣ.

    ————————–

    ಪಕ್ಷಾಂತರ-ಪಕ್ಷದೊಳಗೆ ಗೊಂದಲ

    ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದ ಉದ್ಯಮಿ ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ರೈ ಅವರು ಕಾಂಗ್ರೆಸ್ ಕಚೇರಿಗೆ ಹೋಗಿ ತನ್ನ ಉಮೇದುವಾರಿಕೆ ಆಸಕ್ತಿಯನ್ನು ವರಿಷ್ಠರಿಗೆ ಮನವರಿಕೆ ಮಾಡಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ಇದನ್ನು ಬಹಿರಂಗವಾಗಿ ವಿರೋಧಿಸಿದ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ವಿಮುಕ್ತಿಗೊಳಿಸಿದೆ. ಇದು ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ನಿದರ್ಶನ.

    ——————————–

    ಕಾಂಗ್ರೆಸ್ ಭಿನ್ನಮತ, ಬಿಜೆಪಿಗೆ ವರದಾನ

    ಪುತ್ತೂರಿನ ರಾಜಕೀಯ ಇತಿಹಾಸಲ್ಲಿ ಬಿಜೆಪಿ ಗದ್ದುಗೆ ಏರಿದ್ದೇ ಕಾಂಗ್ರೆಸ್ ಭಿನ್ನಮತದಿಂದ ಎಂಬ ಮಾತಿದೆ. ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಸಂಕಪ್ಪ ರೈ 1978ರ ಚುನಾವಣೆಯಲ್ಲಿ ಹಾಗೂ ಸಿ.ಸಿ.ಚಾಕೊ 1983ರ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪರಿಣಾಮ ಕಾಂಗ್ರೆಸ್ ಸೋಲುಂಡಿತ್ತು. 1994ರ ಚುನಾವಣೆಯಲ್ಲಿ ಹೇಮನಾಥ ಶೆಟ್ಟಿ ಕೆಸಿಪಿಯಿಂದ ಸ್ಪರ್ಧಿಸಿದ ಕಾರಣ ವಿನಯಕುಮಾರ್ ಸೊರಕೆ ಸೋಲು ಕಂಡರು. 2008ರ ಚುನಾವಣೆಯಲ್ಲೂ ಕಾಂಗ್ರೆಸ್ ಭಿನ್ನಮತದ ಕಾರಣ ಬಿಜೆಪಿಯ ಮಲ್ಲಿಕಾ ಪ್ರಸಾದ್ 1,425 ಮತಗಳ ಅಂತರದ ಜಯ ಸಾಧಿಸಿದ್ದರು.

    ——————————–

    ಈ ಹಿಂದಿನ ಚುನಾವಣಾ ಫಲಿತಾಂಶ

    ಕ್ಷೇತ್ರದಲ್ಲಿ 1,97,987 ಮತದಾರರಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ.76.2 ಮತದಾನವಾಗಿದ್ದು, ಬಿಜೆಪಿಯ ಮಲ್ಲಿಕಾ ಪ್ರಸಾದ್ ಕಾಂಗ್ರೆಸ್‌ನ ಬೋಂಡಾಲ ಜಗನ್ನಾಥ ಶೆಟ್ಟಿ ವಿರುದ್ಧ 1,425 ಮತಗಳ ಅಂತರದಿಂದ ಜಯ ಗಳಿಸಿದ್ದರು. 2013ರಲ್ಲಿ 79.54 ಶೇ.ಮತದಾನವಾಗಿದ್ದು, ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ ಬಿಜೆಪಿಯ ಸಂಜೀವ ಮಠಂದೂರು ಅವರ ವಿರುದ್ಧ 4,289 ಮತಗಳ ಅಂತರದಿಂದ ಜಯ ಗಳಿಸಿದ್ದರು. 2018ರಲ್ಲಿ ಶೇ.81.7 ಮತದಾನವಾಗಿದ್ದು, ಕಾಂಗ್ರೆಸ್‌ನ ಶಕುಂತಳಾ ವಿರುದ್ಧ ಬಿಜೆಪಿಯ ಸಂಜೀವ ಮಠಂದೂರು 19,477 ಮತಗಳ ಅಂತರದಿಂದ ಜಯಗಳಿಸಿದ್ದರು.

    ವರ್ಷ ಗೆಲುವು ಸೋಲು

    1994 ಡಿ.ವಿ.ಸದಾನಂದ ಗೌಡ ವಿನಯಕುಮಾರ್ ಸೊರಕೆ

    1999 ಡಿ.ವಿ.ಸದಾನಂದ ಗೌಡ ಸುಧಾಕರ ಶೆಟ್ಟಿ

    2004 ಶಕುಂತಳಾ ಶೆಟ್ಟಿ ಸುಧಾಕರ ಶೆಟ್ಟಿ

    2008 ಮಲ್ಲಿಕಾ ಪ್ರಸಾದ್ ಬೊಂಡಾಲ ಜಗನ್ನಾಥ ಶೆಟ್ಟಿ

    2013 ಶಕುಂತಳಾ ಶೆಟ್ಟಿ ಸಂಜೀವ ಮಠಂದೂರು

    2018 ಸಂಜೀವ ಮಠಂದೂರು ಶಕುಂತಳಾ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts