More

    ಪುತ್ತೂರು ಸಿಡಿಪಿಒ ಕಚೇರಿಗಿಲ್ಲ ಸ್ವಂತ ಕಟ್ಟಡ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಕಡಬ- ಪುತ್ತೂರು ತಾಲೂಕನ್ನು ಒಳಗೊಂಡ ಜಿಲ್ಲೆಯ ಪ್ರಮುಖ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡವೇ ಇಲ್ಲ.

    ಪುತ್ತೂರಿನಲ್ಲಿರುವ ಈ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯು 2 ತಾಲೂಕುಗಳ ವ್ಯಾಪ್ತಿ ಹೊಂದಿದೆ. ಆದರೆ ಸಿಡಿಪಿಒ ಕಚೇರಿ ಮಾತ್ರ ಈಗಲೂ ದುಬಾರಿ ಬಾಡಿಗೆ ಕೊಟ್ಟು ಪರರ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸ್ವಂತ ಕಟ್ಟಡಕ್ಕೆ ಜಮೀನು ಕೊಡಿ ಎಂಬ ಹಲವು ವರ್ಷಗಳ ಕೂಗಿಗೆ ಇನ್ನೂ ಯಾರೂ ಕಿವಿ ಕೊಟ್ಟಿಲ್ಲ. ಇಲಾಖೆ ಆರಂಭವಾದಂದಿನಿಂದ ಇಲ್ಲಿಯವರೆಗೆ ಇದೇ ಗೋಳು. ಪ್ರತಿವರ್ಷ ಸರ್ಕಾರಕ್ಕೆ ಬರೆಯುವುದೇ ಇಲಾಖೆ ಅಧಿಕಾರಿಗಳ ಕೆಲಸವಾಗಿದೆ.

     ಸ್ತ್ರೀಶಕ್ತಿ ಭವನಕ್ಕೆ ಸ್ಥಳಾಂತರ: ಹಿಂದೆ ತಾಲೂಕು ಬೋರ್ಡ್ ಅಸ್ತಿತ್ವದಲ್ಲಿದ್ದಾಗ ನಗರದ ಬಪ್ಪಳಿಗೆಯಲ್ಲಿ ಕಟ್ಟಡವೊಂದಿದ್ದು, ಅದನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ನೀಡಲಾಗಿತ್ತು. ಬೋರ್ಡ್ ಮಾಯವಾಗಿ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಾಗ ಆ ಕಟ್ಟಡ ತಾಪಂ ವ್ಯಾಪ್ತಿಗೆ ಸೇರಿತು. ಆಗಲೂ ಸಿಡಿಪಿಒ ಕಚೇರಿ ಅದೇ ಕಟ್ಟಡದಲ್ಲಿ ಮುಂದುವರಿಯಿತು. ಕಟ್ಟಡ ಹಳೆಯದಾಗಿದೆ ಎಂಬ ಕಾರಣಕ್ಕೆ 2016ರಲ್ಲಿ ಅದನ್ನು ಕೆಡವಲಾಯಿತು. ಆಗ ಸಿಡಿಪಿಒ ಕಚೇರಿಯನ್ನು ತಾತ್ಕಾಲಿಕ ನೆಲೆಯಲ್ಲಿ ಸ್ತ್ರೀಶಕ್ತಿ ಭವನಕ್ಕೆ ಸ್ಥಳಾಂತರಿಸಲಾಯಿತು.

    ಭರವಸೆಯಾಗಿಯೇ ಉಳಿದ ವಾಗ್ದಾನ: ಪುತ್ತೂರು ತಾಪಂ ವತಿಯಿಂದ ಹೊಸ ಕಟ್ಟಡ ನಿರ್ಮಿಸಿದಾಗ ಅದರಲ್ಲಿ ಒಂದು ಮಹಡಿಯನ್ನು ಪೂರ್ತಿಯಾಗಿ ಸಿಡಿಪಿಒ ಕಚೇರಿಗೆ ನೀಡಲಾಗುವುದು ಎಂದು ಅಂದಿನ ತಾಪಂ ಆಡಳಿತ (ಪುಲಸ್ತ್ಯಾ ರೈ ಅಧ್ಯಕ್ಷೀಯ ಅವಧಿ) ಸಭೆಯಲ್ಲೇ ಭರವಸೆ ನೀಡಿತ್ತು. ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆ ವೇಳೆಗೆ ತಾಪಂ ಆಡಳಿತ ಬದಲಾಗಿದ್ದು, ಹಿಂದಿನ ವಾಗ್ದಾನ ಯಾರಿಗೂ ನೆನಪಿರಲಿಲ್ಲ. ಹೀಗಾಗಿ ಸ್ತ್ರೀಶಕ್ತಿ ಭವನದ ಬಾಡಿಗೆ ವಾಸ್ತವ್ಯವೇ ಮುಂದುವರಿದಿದೆ.

    ಕನಿಷ್ಠ 50 ಸೆಂಟ್ಸ್ ಜಾಗಕ್ಕೆ ಬೇಡಿಕೆ: ಪುತ್ತೂರಿನಲ್ಲಿರುವ ಸಿಡಿಪಿಒ ಕಚೇರಿ ವ್ಯಾಪ್ತಿಯಲ್ಲಿ 371 ಅಂಗನವಾಡಿಗಳ 800 ಕಾರ್ಯಕರ್ತೆಯರು, ಸಹಾಯಕಿಯರು, ಕಚೇರಿ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಇಲಾಖೆಯ ನಾನಾ ಕಾರ್ಯಕ್ರಮಗಳಿಗೆ ತಾಯಂದಿರು, ಮಕ್ಕಳು ಬರುತ್ತಾರೆ. ಇದೆಲ್ಲವನ್ನೂ ನಿಭಾಯಿಸಬೇಕಾದರೆ ಸುಸಜ್ಜಿತ ಕಟ್ಟಡ, ಸಭಾಂಗಣ, ಅಂಗಳ ಅಗತ್ಯ. ನಗರ ವ್ಯಾಪ್ತಿಯಲ್ಲಿ ಕನಿಷ್ಠ 50 ಸೆಂಟ್ಸ್ ಜಾಗಕ್ಕೆ ಈ ಹಿಂದೆ ಬೇಡಿಕೆ ಸಲ್ಲಿಸಿದ್ದು, ಇನ್ನೂ ನಿವೇಶನ ಶೋಧ ಕಾರ್ಯ ನಡೆದಿಲ್ಲ.

    ಪುತ್ತೂರು ನಗರ ವ್ಯಾಪ್ತಿಯಲ್ಲಿ 8 ಸೆಂಟ್ಸ್ ಜಾಗವನ್ನು ಪ್ರಾಥಮಿಕ ಹಂತದಲ್ಲಿ ಗಮನಿಸಿದ್ದೇವೆ. ಅದು ಸಾಲದು ಎಂದು ಸಿಡಿಪಿಒ ಇಲಾಖೆ ಹೇಳಿದೆ. ಜತೆಗೆ ಅಂಗನವಾಡಿ ಕಟ್ಟಡಗಳಿಗೂ ಸ್ವಂತ ಜಾಗ ಬೇಕು ಎಂದು ಮನವಿ ಮಾಡಿದ್ದಾರೆ. ಜಮೀನು ಪರಿಶೋಧಿಸಲಾಗುವುದು ಎಂದು ತಹಸೀಲ್ದಾರ್ ರಮೇಶ್ ಬಾಬು ಹೇಳಿದ್ದಾರೆ. ನಾವೀಗ 17 ಸಾವಿರ ರೂ. ಮಾಸಿಕ ಬಾಡಿಗೆ ನೀಡಿ ಸ್ತ್ರೀಶಕ್ತಿ ಭವನ ಕಟ್ಟಡದಲ್ಲಿದ್ದೇವೆ. ಆದಷ್ಟು ಬೇಗ ಸ್ವಂತ ಕಟ್ಟಡಕ್ಕೆ ಹೋಗುವಂತಾದರೆ ಉತ್ತಮ.
    – ಶ್ರೀಲಯ, ಪುತ್ತೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ
    ———–
    ಯಾವುದಾದರೊಂದು ಇಲಾಖೆಯ ಕಟ್ಟಡದಲ್ಲಿ ಸಿಡಿಪಿಒ ಕಚೇರಿ ವ್ಯವಸ್ಥೆ ಮಾಡುವ ಬದಲು ಸ್ವಂತ ನಿವೇಶನ ಹೊಂದಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಒಂದೆರಡು ಕಡೆಗಳಲ್ಲಿ ನಿವೇಶನ ಗುರುತಿಸಲಾಗಿದ್ದು, ಶೀಘ್ರದಲ್ಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸ್ವಂತ ನಿವೇಶನಕ್ಕೆ ವ್ಯವಸ್ಥೆ ಮಾಡಲಾಗುವುದು.
    -ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts