More

    ಬಂದಿದೆ ಬೇಸಿಗೆ ರಜೆ, ನಲಿಕಲಿಯೋಣ ಬಾರಾ..

    ಬೇಸಿಗೆ ರಜೆಗಾಗಿ, ರಜೆಯ ಮಜಕ್ಕಾಗಿ ಕಾಯುತ್ತಿದ್ದ ಮಕ್ಕಳಿಗೆ ಆ ಸಂಭ್ರಮ ಬಂದೇ ಬಿಟ್ಟಿದೆ. ಕಳೆದೆರಡು ವರ್ಷಗಳು ಕರೊನಾ ಕರಿನೆರಳಿನ ಬಂಧನದಲ್ಲಿ ಕಳೆಗುಂದಿದ್ದ ಮಕ್ಕಳಿಗೆ, ಈ ವರ್ಷದ ಬೇಸಿಗೆ ರಜೆ ನವೋಲ್ಲಾಸವನ್ನು ನೀಡಿದೆ.ಆನ್​ಲೈನ್, ಆಫ್​ಲೈನ್ ಎಂಬ ಎರಡು ದೋಣಿಯಲ್ಲಿ ಸಾಗಿ, ಶೈಕ್ಷಣಿಕ ವರ್ಷ ಮುಗಿಸಿದ ನಂತರ ದೊರೆತ ಈ ವಿರಾಮವೆಂಬ ದಿನಗಳಲ್ಲಿ ಹೊಸತನದತ್ತ ಮನಸ್ಸನ್ನು ತೆರೆದುಕೊಳ್ಳುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ರಜಾ ದಿನಗಳನ್ನು ಹೇಗೆ ಅರ್ಥಪೂರ್ಣವಾಗಿ ಕಳೆಯಬಹುದೆಂಬ ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

    | ಅನೀಶ್ ಬಿ. ಕೊಪ್ಪ

    ಪ್ರವಾಸಗಳು, ಆಟಗಳು, ಅಜ್ಜಿ ಮನೆಗೆ ಭೇಟಿ, ಪುಸ್ತಕ ಪ್ರೀತಿ ಇತ್ಯಾದಿಗಳು ರಜೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತವೆ. ಬೇಸಿಗೆ ಶಿಬಿರ ಎಂಬ ಆಧುನಿಕ ಮನರಂಜನೆಯ ಕೇಂದ್ರಕ್ಕೂ ಮಿಗಿಲಾದುದು ನಗರದಿಂದ ಹಳ್ಳಿಗಳತ್ತ ಪಯಣ ಹಾಗೂ ಹಳ್ಳಿಯ ಬದುಕು.

    ಪ್ರವಾಸಗಳು: ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ, ಪ್ರವಾಸಿ ತಾಣಗಳು ಮನಕ್ಕೆ ಮುದ ನೀಡುವುದಲ್ಲದೆ, ಕಲಿಕೆಯ ಭಾಗವಾಗಿ ಆ ತಾಣಗಳ ಪ್ರಾಮುಖ್ಯತೆಯನ್ನು ನಮ್ಮ ಮನದಲ್ಲಿ ಅಚ್ಚೊತ್ತುವಂತೆ ಮಾಡುತ್ತವೆ. ನಮಗೆ ಸಮೀಪ ಇರುವ ಅನೇಕ ಸ್ಥಳಗಳ ಪ್ರಾಮುಖ್ಯತೆಯನ್ನು ನಾವು ಒಮ್ಮೊಮ್ಮೆ ತಿಳಿದಿರುವುದಿಲ್ಲ. ಹಾಗಾಗಿ ಪ್ರವಾಸದಲ್ಲಿ ನಮ್ಮ ಮೊದಲ ಆಯ್ಕೆ ಹತ್ತಿರದ ಸುಂದರ ತಾಣಗಳಾಗಿರಬೇಕು. ಐತಿಹಾಸಿಕ ಸ್ಥಳಗಳ ವೀಕ್ಷಣೆ ನಮ್ಮ ಮುಂದಿನ ಸಾಧನೆಗಳಿಗೆ ದಾರಿದೀಪವಾಗಬಲ್ಲದು. ಕದಂಬ, ಗಂಗ, ಹೊಯ್ಸಳ, ವಿಜಯನಗರ ಇತ್ಯಾದಿ ಕರ್ನಾಟಕದ ರಾಜವಂಶಗಳ ದೇವಾಲಯಗಳು, ವಾಸ್ತುಶಿಲ್ಪದ ನೆಲೆವೀಡಾಗಿವೆ. ಸುಲ್ತಾನರು, ಚೋಳರು, ಪಲ್ಲವರಂತಹ ಹೊರ ರಾಜ್ಯದ ರಾಜವಂಶಗಳು ಕಟ್ಟಿಸಿದ ಐತಿಹಾಸಿಕ ಕಟ್ಟಡಗಳು ಪ್ರವಾಸದ ಸವಿಯನ್ನು ಹೆಚ್ಚಿಸಿ, ಇತಿಹಾಸವನ್ನು ತಿಳಿಯಲು ಸಹಕರಿಸುತ್ತವೆ. ಇವಲ್ಲದೆ ಪಕ್ಷಿಧಾಮಗಳು, ಮೃಗಾಲಯಗಳು, ನಿಸರ್ಗ ಧಾಮಗಳು, ಕಡಲ ಕಿನಾರೆಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ರಜೆಯ ಮಜ ಇಮ್ಮಡಿಗೊಳ್ಳುತ್ತದೆ.

    ಗ್ರಾಮೀಣ ಆಟಗಳು: ಆಟಗಳು ಬಾಲ್ಯದ ಅವಿಭಾಜ್ಯ ಅಂಗಗಳು. ನಗರ ಜೀವನದ ಜಂಜಾಟದಲ್ಲಿ ಮರೆತು ಹೋಗಿದ್ದ ಹಲವು ಗ್ರಾಮೀಣ ಆಟಗಳನ್ನು ಆಡಿ ಸಂತಸಪಡಲು ಬೇಸಿಗೆ ರಜೆ ಸಕಾಲವಾಗಿದೆ. ಹಳ್ಳಿಯಲ್ಲಿರುವ ಅಜ್ಜಿಮನೆ ಎಂದರೆ ಒಂದು ಆಟದ ಮೈದಾನವಿದ್ದಂತೆ. ಕಣ್ಣಾ ಮುಚ್ಚಾಲೆ, ರತ್ತೋ ರತ್ತೋ, ಮರಕೋತಿಯಾಟ, ಚಿಣ್ಣಿದಾಂಡು, ಹುಲಿ-ದನ, ಟೋಪಿಯಾಟ, ಗೋಲಿಯಾಟ, ಲಗೋರಿ ಇತ್ಯಾದಿ ಹೊರಾಂಗಣ ಆಟಗಳು ಸ್ನೇಹಿತರನ್ನೆಲ್ಲ ಕೂಡಿಕೊಂಡು ಆಡುವ ಉತ್ತಮ ರಂಜನೀಯ ಆಟಗಳಾಗಿವೆ. ಮನೋಲ್ಲಾಸದೊಂದಿಗೆ ದೈಹಿಕ ವ್ಯಾಯಾಮಕ್ಕೂ ಈ ಆಟಗಳು ಸಹಕಾರಿ. ಚನ್ನೆಮಣೆ, ಪಗಡೆಯಾಟದಂತಹ ಒಳಾಂಗಣ ಆಟಗಳನ್ನು ಕುಟುಂಬದ ಸದಸ್ಯರೊಂದಿಗೆ ಆಡುವುದರಿಂದ ಕೌಟುಂಬಿಕ ಬಾಂಧವ್ಯ ವೃದ್ಧಿಸುತ್ತದೆ.

    ಜ್ಞಾಪಕಶಕ್ತಿಗೆ ಸವಾಲು: ಬಾಲ್ಯದಲ್ಲಿ ಕಲಿತ ಕಲಿಕೆ ದೀರ್ಘಕಾಲ ಅಚ್ಚಳಿಯದೆ ನಿಲ್ಲುತ್ತದೆ. ಹಾಗಾಗಿ ಜ್ಞಾಪಕ ಶಕ್ತಿಗೆ ಸವಾಲೊಡ್ಡುವ ಕೆಲವು ಸರಣಿಗಳನ್ನು ನೆನಪಿಟ್ಟುಕೊಂಡು ನಿರರ್ಗಳವಾಗಿ ಹೇಳಲು ಪ್ರಯತ್ನಿಸಬಹುದು. ಇದು ಶೈಕ್ಷಣಿಕವಾಗಿ ಬಲಗೊಳ್ಳಲು ಕೂಡ ಸಹಕಾರಿ. ಉದಾಹರಣೆಗೆ ಸಾಮಾನ್ಯ ಜ್ಞಾನದ ವಿಷಯಗಳಾದ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಹೆಸರಿಸುವುದು, ಭಾರತದ ರಾಜ್ಯ ಮತ್ತು ರಾಜಧಾನಿಗಳನ್ನು ಹೆಸರಿಸುವುದು, 60 ಸಂವತ್ಸರ, 27 ಮಳೆ ನಕ್ಷತ್ರಗಳ ಹೆಸರು ಹೇಳುವುದು, ಒಂದಿಷ್ಟು ಗಾದೆಮಾತುಗಳನ್ನು ಸಂಗ್ರಹಿಸಿ ನಿರರ್ಗಳವಾಗಿ ಹೇಳುವುದು ಇತ್ಯಾದಿ.

    ಕಥೆಗಳೆಂಬ ಕಲ್ಪನಾಲೋಕ: ಮಕ್ಕಳ ಕಲ್ಪನಾ ಶಕ್ತಿ ಗರಿಗೆದರಲು ಕಥೆಗಳು ಕೀಲಿಕೈ ಇದ್ದಂತೆ. ಅಜ್ಜ-ಅಜ್ಜಿಯರ ಒಡನಾಟವೆಂದರೆ ಕಥೆಗಳ ಕಣಜವನ್ನು ನಮ್ಮದಾಗಿಸಿಕೊಂಡಂತೆ. ಹಳ್ಳಿಯಲ್ಲಿರುವ ಅಜ್ಜಿಮನೆ ಅಥವಾ ಬಂಧುಗಳ ಮನೆಗೆ ಬೇಸಿಗೆಯ ರಜೆ ಕಳೆಯಲು ತೆರಳಿದಾಗ ಅಲ್ಲಿ ಅವರಿಂದ ದಿನಕ್ಕೊಂದು ಕಥೆ ಕೇಳಿ ತಿಳಿಯಬೇಕು. ಸಣ್ಣ ಕಥೆಗಳು, ಪೌರಾಣಿಕ ಕಥೆಗಳು, ಜನಪದ ಕಥೆಗಳು, ಹಾಡ್ಗತೆಗಳನ್ನು ಕೇಳುವುದರ ಜತೆಗೆ ಕಥೆಗಳನ್ನು ಸೂಕ್ತ ಹಾವಭಾವದೊಂದಿಗೆ ಹೇಳುವ ಅಭ್ಯಾಸ ಕೂಡ ಮಾಡಿ ಕೊಳ್ಳಬಹುದು.

    ಪುಸ್ತಕ ಪ್ರೀತಿ: ಪುಸ್ತಕವಿಲ್ಲದ ಮನೆ, ಜೀವವಿಲ್ಲದ ದೇಹ ಎರಡೂ ಒಂದೇ ಎಂಬ ಮಾತಿದೆ. ಮನೆಯಲ್ಲಿ ಒಂದಿಷ್ಟು ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿ, ನಮ್ಮದೇ ಆದ ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡರೆ ನಮ್ಮ ಜ್ಞಾನ ದಾಹ ತೀರುವುದಲ್ಲದೆ, ವಿರಾಮ ಕಾಲದ ಸದುಪಯೋಗವಾಗುತ್ತದೆ. ನಾಗರಿಕತೆಯ ನಾಗಾಲೋಟದಲ್ಲಿ ಕೇವಲ ಮೊಬೈಲ್, ಟಿ.ವಿ, ಕಂಪ್ಯೂಟರ್​ಗಳ ಜತೆಗೆ ಕಾಲ ಕಳೆಯದೆ, ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ತಮ್ಮ ಆಸಕ್ತಿಗೆ ಅನುಗುಣವಾಗಿ ಕಥೆ ಪುಸ್ತಕ, ಚಿತ್ರಕಥೆ, ಪ್ರವಾಸ ಕಥನಗಳು, ಜೀವನ ಚರಿತ್ರೆಗಳು ಇತ್ಯಾದಿ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಪುಸ್ತಕ ಪ್ರೀತಿಯು ನಮ್ಮ ವಿಚಾರ ಮತ್ತು ತಿಳುವಳಿಕೆಯನ್ನು ಗಟ್ಟಿಗೊಳಿಸುತ್ತದೆ ಮತ್ತು ಇತರರ ಭಿನ್ನ ವಿಚಾರ ಮತ್ತು ಅಭಿಪ್ರಾಯಗಳನ್ನು ಪರಿಚಯಿಸುತ್ತದೆ.

    ಕಸದಿಂದ ರಸ: ಕ್ರಾಫ್ಟ್ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳವರು ಕಸದಿಂದ ರಸ ಎಂಬಂತೆ, ಉಪಯೋಗಿಸಿ ಬಿಟ್ಟಂತಹ ವಸ್ತುಗಳಿಂದ ಅನೇಕ ಆಕರ್ಷಕ ವಸ್ತುಗಳನ್ನು ತಯಾರಿಸಬಹುದು. ಬೆಂಕಿಕಡ್ಡಿ ಯಿಂದ ಕಲಾಕೃತಿಗಳು, ಬೀಜಗಳು, ಮಣಿಗಳನ್ನು ಅಂಟಿಸಿ ವಿವಿಧ ಆಕೃತಿಗಳು, ಬೆಂಡೆಕಾಯಿ ಕತ್ತರಿಸಿ ತುದಿಯನ್ನು ಬಣ್ಣದಲ್ಲಿ ಮುಳುಗಿಸಿ ಅಚ್ಚೊತ್ತಿ ಹೂವಿನ ಕಲಾಕೃತಿಗಳು,ಕೈ ಬೆರಳನ್ನು ಬಣ್ಣದಲ್ಲಿ ಮುಳುಗಿಸಿ ಅಚ್ಚೊತ್ತಿ ಕಲಾಕೃತಿಗಳು ಇತ್ಯಾದಿಗಳನ್ನು ಮಾಡಬಹುದು. ಇವಲ್ಲದೆ ಹಳೆಯ ಬಟ್ಟೆಗಳನ್ನು ಬಳಸಿ ಮ್ಯಾಟ್ (ಕಾಲುಚಾಪೆ) ಹೆಣೆಯುವುದು, ಒಡೆದ ಗಾಜಿನ ಬಳೆ, ಶಾರ್ಪ್ ಮಾಡಿದ ಪೆನ್ಸಿಲ್ ಕಸವನ್ನು ಹೂಗಳ ಆಕಾರದಲ್ಲಿ ಅಂಟಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಬಹುದು.ಇದರೊಂದಿಗೆ ಪ್ರಕೃತಿಯಲ್ಲಿ ಸುಲಭವಾಗಿ ಸಿಗುವ ತೆಂಗಿನ ಗರಿಯಿಂದ ಆಟಿಕೆಯ ಹಾವು, ಪೇಪರ್​ನಿಂದ ದೋಣಿ, ಕಪ್ಪೆ ಮುಂತಾದ ಕ್ರಾಫ್ಟ್, ಮಣ್ಣಿನಿಂದ ಕ್ಲೇ ಮಾಡೆಲ್​ಗಳನ್ನೂ ಮಾಡುವುದರಿಂದ ಹೊಸತನವನ್ನು ಕಲಿತ ಸಂತಸ ದೊರೆಯುತ್ತದೆ.

    ಪುಟ್ಟ ಕೈತೋಟ: ಹಸಿರು ನಮ್ಮ ಉಸಿರು. ಅದಕ್ಕಾಗಿ ಒಂದು ಪುಟ್ಟ ಕೈತೋಟವನ್ನು ಮನೆಯಂಗಳ ದಲ್ಲೋ, ತಾರಸಿಯ ಮೇಲೋ ನಿರ್ಮಾಣ ಮಾಡಿಕೊಂಡು ಗಿಡಗಳನ್ನು ಆರೈಕೆ ಮಾಡುವುದು ಉತ್ತಮ ಹವ್ಯಾಸವಾಗಿದೆ. ತರಕಾರಿ ಗಿಡಗಳು ಅಥವಾ ಹೂವಿನ ಗಿಡಗಳನ್ನು ಈ ಕೈತೋಟದಲ್ಲಿ ಬೆಳೆಸಬಹುದಾಗಿದೆ. ಗಿಡಗಳ ಸುತ್ತಲಿನ ಕಳೆ ತೆಗೆಯುವುದು, ಪ್ರತಿದಿನ ನೀರು ಹಾಕುವುದು, ಆಗಾಗ್ಗೆ ಗೊಬ್ಬರ ಮತ್ತು ಮಣ್ಣು ಹಾಕುವುದು, ತರಕಾರಿಗಳನ್ನು ಕೊಯ್ಯುವುದು ಇಂತಹ ಕೆಲಸಗಳನ್ನು ಕುಟುಂಬದ ಸದಸ್ಯರೊಂದಿಗೆ ಕೂಡಿ ಮಾಡಬಹುದಾಗಿದೆ. ಕೈತೋಟದ ನಿರ್ವಹಣೆ ಕಲಿಕೆ ಅನುಭವಾತ್ಮಕವಾಗುತ್ತದೆ.

    ಬರವಣಿಗೆ: ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಲು ಮತ್ತು ಸಾಹಿತ್ಯಿಕವಾಗಿ ತೊಡಗಿಕೊಳ್ಳಲು ರಜಾಕಾಲ ಸೂಕ್ತವಾದ ಸಮಯ. ತಮ್ಮ ಕಲ್ಪನೆಗೆ ನಿಲುಕುವ ಸರಳ ವಿಷಯಗಳನ್ನು ಆರಿಸಿಕೊಂಡು, ದೈನಂದಿನ ಅನುಭವಗಳನ್ನು ಆಧರಿಸಿ, ಚುಟುಕು, ಕವನ, ಸಣ್ಣಕಥೆ, ಕಿರು ಲೇಖನಗಳನ್ನು ಬರೆಯಲು ಪ್ರಯತ್ನಿಸಬಹುದು. ಆಗ ಬರವಣಿಗೆಯ ಹವ್ಯಾಸ ಬೆಳೆಯುತ್ತದೆ.

    ಜಾತ್ರೆಗಳು: ಬೇಸಿಗೆ ಕಾಲದಲ್ಲಿ ಬಿಸಿಲನ್ನೂ ಲೆಕ್ಕಿಸದೆ ಅನೇಕ ದೇವಾಲಯ ಗಳಲ್ಲಿ ಜಾತ್ರೆಗಳ ಸಂಭ್ರಮ ಮೇಳೈಸಿರುತ್ತದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಜಾತ್ರೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಸಂಸ್ಕೃತಿಯ ಅರಿವು ಮೂಡುತ್ತದೆ. ಜಾತ್ರೆಯಲ್ಲಿನ ರಥೋತ್ಸವ, ತರಹೇವಾರಿ ಅಂಗಡಿಗಳು, ಆಕರ್ಷಕ ಆಟಿಕೆಗಳು ಬಾಲ್ಯದ ನೆನಪನ್ನು ಸದಾ ಹಸಿರಾಗಿಸಲು ಸಹಕಾರಿಯಾಗುತ್ತವೆ.

    ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts