More

    ಮನಸ್ತಾಪ ಬದಿಗೊತ್ತಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: ಡಾ.ಮಂತರ್ ಗೌಡ

    ಮಡಿಕೇರಿ: ಪಕ್ಷದೊಳಗೆ ಸಹಜವಾಗಿರುವ ಗೊಂದಲ, ಭಿನ್ನಾಭಿಪ್ರಾಯ, ಮನಸ್ತಾಪಗಳನ್ನು ಕಾರ್ಯಕರ್ತರು ಬದಿಗೊತ್ತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.


    ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು.


    ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಒಂದಾಗಿ ಲೋಕಸಭೆ ಚುನಾವಣೆ ಎದುರಿಸಿ ಗೆಲುವಿಗೆ ದುಡಿಯಬೇಕು. ವಿಧಾನಸಭಾ ಚುನಾವಣಾ ಮಾದರಿಯಲ್ಲಿ ಸಂಘಟಿತ ಕೆಲಸ ಮಾಡಿದರೆ ಗೆಲುವು ನಿಶ್ಚಿತ. ಅಭ್ಯರ್ಥಿ ಲಕ್ಷ್ಮಣ್‌ರವರು ಕೊಡಗು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ದುಡಿದಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಅಗತ್ಯ ನೆರವು ಕೇಂದ್ರದಿಂದ ದೊರೆತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ಮತ್ತಷ್ಟು ಅನುದಾನ ಕೇಂದ್ರದಿಂದ ಜಿಲ್ಲೆಗೆ ಲಭಿಸುತ್ತದೆ. ೨೫ ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಅವಕಾಶವಿದೆ. ಸ್ಥಾನ ಸಿಗದೆ ಕೆಲವರು ಅಸಮಾಧಾನಗೊಂಡಿದ್ದಾರೆ. ಇದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.


    ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ವ್ಯವಸ್ಥಿತವಾಗಿ ಸಂಘಟಿಸಿದ ಫಲದಿಂದ ಇದೀಗ ಪಕ್ಷ ಬಲಶಾಲಿಯಾಗಿ ಜಿಲ್ಲೆಯ ೨ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಎಲ್ಲಾ ಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯ, ಗೊಂದಲಗಳು ಸಹಜ. ಆದರೆ, ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಂಡು ಮುನ್ನಡೆಯಬೇಕು. ೨೫ ವರ್ಷಗಳಿಂದ ಜಿಲ್ಲೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಅಧಿಕಾರ ಮರುಸ್ಥಾಪಿಸಲು ಕಾರ್ಯಕರ್ತರ ಶ್ರಮ ದೊಡ್ಡ ಮಟ್ಟದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು. ರಾಜವಂಶಸ್ಥರಿಗೆ ದೊಡ್ಡ ಮಟ್ಟದ ಗೌರವವಿದೆ. ಆದರೆ, ಅವರು ರಾಜಕೀಯಕ್ಕೆ ಬಂದಿರುವುದು ಸರಿಯಲ್ಲ ಎಂದರು.


    ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ವಿಧಾನಸಭಾ ಚುನಾವಣೆ ಸಂದರ್ಭ ರಚಿಸಲಾದ ಬೂತ್ ಸಮಿತಿಯನ್ನು ಮುಂದುವರೆಸಿ ಪಕ್ಷವನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಗುವುದು. ನಗರಸಭೆ ನಾಮನಿರ್ದೇಶನ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಅದನ್ನು ಬಗೆಹರಿಸುವ ಕೆಲಸ ಮಾಡಲಾಗುವುದು. ರಾಜ್ಯ ಸರ್ಕಾರದ ಸಾಧನೆ, ಕೊಡಗು ಜಿಲ್ಲೆಗೆ ನೀಡಿದ ಕೊಡುಗೆಯನ್ನು ಮತದಾರರಿಗೆ ಪ್ರಚಾರ ಮಾಡುವ ಕೆಲಸಕ್ಕೆ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದ ಅವರು, ವೈಯಕ್ತಿಕ ಕಾರಣದಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಆದರೆ, ಚುನಾವಣೆ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.


    ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಸದಸ್ಯ ಟಿ.ಪಿ.ರಮೇಶ್ ಮಾತನಾಡಿದರು.


    ಪಕ್ಷ ಸೇರ್ಪಡೆ: ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಇಸಾಕ್ ಖಾನ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲೀಲಾ ಶೇಷಮ್ಮ, ಪ್ರಮುಖ ಮೋಹನ್ ಮೌರ್ಯ, ನಗರಸಭಾ ಮಾಜಿ ಸದಸ್ಯ ಕೆ.ಎಂ.ಅಶ್ರಫ್ ಸೇರಿದಂತೆ ಜೆ.ಡಿ.ಎಸ್ ತೊರೆದು ೨೫ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದಂತೆ ಬಿಜೆಪಿ ತೊರೆದು ಕೆಲವರು ಕಾಂಗ್ರೆಸ್ ಸೇರ್ಪಡೆಗೊಂಡರು.


    ಸಭೆಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೋಹನ್ ದಾಸ್, ಎ.ಐ.ಸಿ.ಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಜಿಲ್ಲಾ ಉಪಾಧ್ಯಕ್ಷ ಸುಜುತಿಮ್ಮಯ್ಯ, ಕಾರ್ಯದರ್ಶಿ ಮುನೀರ್ ಅಹಮ್ಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts