More

    ಮೀಸಲಾತಿ ಕೊಡದಿದ್ದರೆ ತಕ್ಕ ಶಾಸ್ತಿ

    ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದೆ ಹೋದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮಾಜ ನಿಮ್ಮ ವಿರುದ್ಧ ಪುಟಿದೇಳುವುದು ಖಚಿತ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

    ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಗರದ ನೆಹರು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ರ‍್ಯಾಲಿ ಹಾಗೂ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

    ಮೀಸಲಾತಿ ಕೊಟ್ಟರೆ ನಮ್ಮ ಸಹಕಾರ ನಿಮಗಿರಲಿದೆ. ಇಲ್ಲವಾದಲ್ಲಿ ಅಸಹಕಾರ ತೋರಿಸುತ್ತೇವೆ ಎಂದು ಖಡಕ್ ಸಂದೇಶ ನೀಡಿದರು. ಪ್ರತಿ ಸಂದರ್ಭದಲ್ಲೂ ಎಚ್ಚರಿಕೆ ನೀಡುತ್ತ ಬಂದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರ ಪರಿಣಾಮವನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ ಎಂದರು.

    ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜ ದೊಡ್ಡದಿದೆ. ನಾವು ಬಹುಸಂಖ್ಯಾತರು. ಆದರೆ, ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ. ಬೊಮ್ಮಾಯಿ ಅವರೇ ಇದೇ ಕೊನೆಯ ಹಂತ. ಆಗಸ್ಟ್ 22ರೊಳಗೆ ನಮಗೆ ಮೀಸಲಾತಿ ನೀಡಬೇಕು. ಕೊಟ್ಟ ಮಾತು ತಪ್ಪಿದರೆ ನಿಮ್ಮ ಮನೆಯ ಮುಂದೆ ಹೋರಾಟ ಮಾಡುತ್ತೇವೆ. ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನು ಮನೆಗೆ ಕಳಿಸುತ್ತೇವೆ ಎಂದು ಗುಡುಗಿದರು.

    ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಮೀಸಲಾತಿ ಹೋರಾಟ ನಿನ್ನೆ ಮೊನ್ನೆಯದಲ್ಲ. ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮೀಸಲಾತಿ ಬೇಕು. ಎಲ್ಲ ಮುಖ್ಯಮಂತ್ರಿಗಳು ಬರೀ ಸಾಗಹಾಕುವ ಕೆಲಸ ಮಾಡಿದ್ದಾರೆ. ನಮ್ಮ ಹಕ್ಕು ನಮಗೆ ಕೊಡಲೇಬೇಕು. ಇಲ್ಲವಾದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಪಂಚಮಸಾಲಿ ಸಮಾಜವು ತೀರ ಹಿಂದುಳಿದಿದೆ. ಅದರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವ ಅಗತ್ಯವಿದೆ. ನಮ್ಮ ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿದವರು ಮರಳಿ ಮಾತನಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಇದಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದರು.

    ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಾತನಾಡಿ, ಮೀಸಲಾತಿ ಕೊಟ್ಟರೆ ಹರಿಹರದಲ್ಲಿ 25 ಲಕ್ಷ ಜನರು ಸೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸೋಣ. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸೋಣ ಎಂದರು. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಪಿ.ಸಿ. ಸಿದ್ದನಗೌಡ್ರ, ಎಸ್.ಐ. ಚಿಕ್ಕನಗೌಡ್ರ, ಮುಖಂಡರಾದ ವಿಜಯ ಕುಲಕರ್ಣಿ, ಅರವಿಂದ ಕಟಗಿ, ನಾಗರಾಜ ಗೌರಿ, ವೀರೇಶ ಉಂಡಿ, ಶಿವಲೀಲಾ ವಿನಯ ಕುಲಕರ್ಣಿ, ರಾಜಶೇಖರ ಮೆಣಸಿನಕಾಯಿ, ಮಲ್ಲಿಕಾರ್ಜುನ ಹೊರಕೇರಿ, ರಾಮನಗೌಡ ಪಾಟೀಲ ಯತ್ನಾಳ, ಗುರುರಾಜ ಹುಣಸೀಮರದ, ಶಿವಾನಂದ ಅಂಬಡಗಟ್ಟಿ, ಲಿಂಗಣ್ಣ ಕರಿಕಟ್ಟಿ, ಎಚ್.ವಿ. ಬೆಳಗಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts