More

    ಡುಂಡಿರಾಜ ಅಂಕಣ; ಆಯ್ಕೆ ಮಾಡದೆ ಸುಮ್ಮನಿರುವುದು ಕೂಡ ಒಂದು ಆಯ್ಕೆ

    ಡುಂಡಿರಾಜ ಅಂಕಣ; ಆಯ್ಕೆ ಮಾಡದೆ ಸುಮ್ಮನಿರುವುದು ಕೂಡ ಒಂದು ಆಯ್ಕೆಆರಿಸಬಹುದು

    ಹತ್ತು ಮಹಡಿಗಳ ಕಟ್ಟಡ

    ಹೊತ್ತಿ ಉರಿದರೆ

    ಆರಿಸುವುದು ಕಷ್ಟ

    ಮಡದಿ ಮನಸಾರೆ

    ಮೆಚ್ಚುವಂಥ ಒಂದು ಸೀರೆ!

    ಮದುವೆಯಾದ ಹೊಸತರಲ್ಲಿ ನಾನು ಹೆಂಡತಿಯನ್ನು ಅಚ್ಚರಿಗೊಳಿಸಬೇಕೆಂದು ಹಲವು ಬಾರಿ ಅವಳಿಗೆ ತಿಳಿಸದೇ ಸೀರೆ ಖರೀದಿಸಿ ಉಡುಗೊರೆಯಾಗಿ ನೀಡಿದ್ದೆ. ಆದರೆ ಒಮ್ಮೆಯೂ ನಾನು ಆರಿಸಿದ ಸೀರೆ ಅವಳಿಗೆ ಇಷ್ಟವಾಗಲಿಲ್ಲ. ಅಷ್ಟೇ ಅಲ್ಲ ಅಂಚು ಚಿಕ್ಕದಾಯಿತು, ಬಣ್ಣ ಚೆನ್ನಾಗಿಲ್ಲ, ವಯಸ್ಸಾದವರು ಉಡುವ ಹಾಗಿದೆ, ಬೆಲೆ ಹೆಚ್ಚಾಯಿತು ಮುಂತಾದ ಟೀಕೆಗಳನ್ನು ಕೇಳಬೇಕಾಯಿತು. ಕೊನೆಗೆ ಇನ್ನು ಮುಂದೆ ಅವಳಿಗೆ ಬೇಕಾದ ಬಟ್ಟೆಬರೆೆಗಳನ್ನು ಅವಳೇ ಆರಿಸಿಕೊಳ್ಳುವುದು ಮತ್ತು ದುಡ್ಡು ಮಾತ್ರ ನಾನು ಕೊಡುವುದು ಎಂಬ ಒಪ್ಪಂದ ಮಾಡಿಕೊಂಡು ಈಗಲೂ ಅದನ್ನು ಪಾಲಿಸುತ್ತಿದ್ದೇವೆ.

    ಅಂದ ಹಾಗೆ ಈ ಲೇಖನಕ್ಕೆ ನಾನು ಆಯ್ಕೆ ಮಾಡಿಕೊಂಡಿರುವ ವಿಷಯ ಸೀರೆಯಲ್ಲ, ಆಯ್ಕೆ. ಯಾಕೆ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದರೆ ನನ್ನ ಬಳಿ ನಿರ್ದಿಷ್ಟ ಉತ್ತರವಿಲ್ಲ. ಯಾವುದರ ಬಗ್ಗೆ ಬರೆಯಲಿ ಎಂದು ಯೋಚಿಸುತ್ತಿದ್ದಾಗ ಆಯ್ಕೆಯ ಕುರಿತೇ ಬರೆಯಬಹುದಲ್ಲ ಅನ್ನಿಸಿತು. ಅದನ್ನು ಆಯ್ಕೆ ಮಾಡಿಕೊಂಡೆ, ಅಷ್ಟೆ. ಕೆಲವೊಮ್ಮೆನಾವು ಮಾಡುವ ಆಯ್ಕೆಗಳ ಹಿಂದೆ ನಿರ್ದಿಷ್ಟ ಕಾರಣಗಳು ಇರುವುದಿಲ್ಲ. ಅದೇ ರೀತಿ ನಾವು ಯಾವ ಧರ್ಮದಲ್ಲಿ, ಯಾವ ಜಾತಿಯಲ್ಲಿ, ಯಾವ ದೇಶದಲ್ಲಿ ಜನಿಸಿದ್ದೇವೆ ಅನ್ನುವುದು ನಮ್ಮ ಆಯ್ಕೆಯಲ್ಲ. ಎಷ್ಟು ಮಕ್ಕಳು ಬೇಕು ಮತ್ತು ಅವು ಯಾವಾಗ ಹುಟ್ಟಬೇಕೆಂಬುದು ಈಗ ತಂದೆ ತಾಯಿಯರ ಆಯ್ಕೆ.

    ಗಿರೀಶ್ ಕಾರ್ನಾಡರು ತಾಯಿಯ ಹೊಟ್ಟೆಯಲ್ಲಿದ್ದಾಗ ಅವರ ತಾಯಿ ಗರ್ಭ ತೆಗೆಸಿಕೊಳ್ಳಲು ವೈದ್ಯರ ಹತ್ತಿರ ಹೋಗಿದ್ದರಂತೆ. ಗಿರೀಶರ ಅದೃಷ್ಟ ಚೆನ್ನಾಗಿದ್ದದ್ದರಿಂದ ಅಂದು ವೈದ್ಯರು ಬಂದಿರಲಿಲ್ಲ. ನಂತರ ತಾಯಿಯ ಮನಸ್ಸು ಬದಲಾಗಿ ಗರ್ಭ ಉಳಿಯಿತು. ಇದನ್ನು ಗಿರೀಶ್ ಕಾರ್ನಾಡರು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅಂದು ವೈದ್ಯರು ಕ್ಲಿನಿಕ್ಕಿಗೆ ಬಂದಿದ್ದರೆ ಕನ್ನಡಕ್ಕೆ ಒಂದು ಜ್ಞಾನಪೀಠ ಪ್ರಶಸ್ತಿ ಕಕ್ಷಿಡಿಮೆಯಾಗುತ್ತಿತ್ತು!

    ಶ್ರೀಮಂತರ ಮಕ್ಕಳಾಗಿ ಹುಟ್ಟಿದವರನ್ನು ಆಗರ್ಭ ಶ್ರೀಮಂತರು ಅನ್ನುತ್ತೇವೆ. ಇಂಗ್ಲಿಷ್ ಭಾಷೆಯಲ್ಲಿ ಇಂಥ ಮಕ್ಕಳಿಗೆ ಬಾರ್ನ್ ವಿದ್ ಸಿಲ್ವರ್ ಸ್ಪೂನ್ ಅನ್ನುತ್ತಾರೆ. ಆದರೆ ಬಾಯಲ್ಲಿ ಬೆಳ್ಳಿ ಚಮಚ ಅಥವಾ ಪ್ಲಾಸ್ಟಿಕ್ ಚಮಚ ಇಟ್ಟುಕೊಂಡು ಹುಟ್ಟುವುದು ನಮ್ಮ ಕೈಯಲ್ಲಿ ಇಲ್ಲ. ಧನಿಕರ ಮನೆಯಲ್ಲಿ ಜನಿಸುವುದು ಅಥವಾ ಬಡವರ ಹಟ್ಟಿಯಲ್ಲಿ ಹುಟ್ಟುವುದು ನಮ್ಮ ಆಯ್ಕೆಯಲ್ಲ. ಅದು ಅದೃಷ್ಟದಿಂದ ಬೈ ಚಾನ್ಸ್ ಆಗುವಂಥದು. ಆದರೆ ಕೆಲವರು ಶ್ರೀಮಂತರ ಮನೆಯ ಅಳಿಯ ಅಥವಾ ಸೊಸೆಯಾಗುತ್ತಾರಲ್ಲ ಅದು ಅವರ ಆಯ್ಕೆ. ಬೈ ಚಾಯ್್ಸ

    ಹುಟ್ಟುವಾಗ ಮಾತ್ರವಲ್ಲ ಬೆಳೆದು ಪ್ರೌಢ ವಯಸ್ಸಿಗೆ ಬರುವ ತನಕವೂ ಮಕ್ಕಳಿಗೆ ಆಯ್ಕೆಯ ಅವಕಾಶಗಳು ಕಡಿಮೆ. ಅವರ ಬೇಕು ಬೇಡಗಳನ್ನು ಪಾಲಕರೇ ನಿರ್ಧರಿಸುತ್ತಾರೆ. ಯಾವ ಶಾಲೆಗೆ ಹೋಗಬೇಕು, ಯಾವ ಕಾಲೇಜು ಸೇರಬೇಕು, ಯಾವ ವಿಷಯ ತೆಗೆದುಕೊಳ್ಳಬೇಕು ಅನ್ನುವುದನ್ನು ಮಕ್ಕಳ ಪರವಾಗಿ ಪೋಷಕರೇ ಆಯ್ಕೆ ಮಾಡಿಕೊಳ್ಳುವುದು ನಮ್ಮದೇಶದಲ್ಲಿ ಸಾಮಾನ್ಯ. ನಮ್ಮಲ್ಲಿ ಮಕ್ಕಳ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳಿಗಿಂತ ಯಾವ ವಿಷಯ ತೆಗೆದುಕೊಂಡರೆ ಒಳ್ಳೆಯ ಉದ್ಯೋಗ ಸಿಗುತ್ತದೆ ಅನ್ನುವುದು ಆಯ್ಕೆಯ ಮೇಲೆ ಪ್ರಭಾವ ಬೀರುತ್ತದೆ. ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಕನ್ನಡ ಅಧ್ಯಾಪಕರು ‘ನಾನು ಏನಾಗ ಬಯಸುವೆ?’ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದರು.

    ಆಗ ನನಗೆ ಅಧ್ಯಾಪಕನಾಗುವ ಆಸೆ ಇತ್ತು. ಕನ್ನಡ ಉಪನ್ಯಾಸಕನಾಗುತ್ತೇನೆ ಎಂದು ನಾನು ಬರೆದ ಪ್ರಬಂಧವನ್ನು ನಮ್ಮ ಅಧ್ಯಾಪಕರು ತುಂಬಾ ಮೆಚ್ಚಿಕೊಂಡಿದ್ದರು. ಆದರೆ ಆಮೇಲೆ ನಾನು ಬಂಧುಮಿತ್ರರ ಸಲಹೆಯಂತೆ ಒಳ್ಳೆಯ ಕೆಲಸ ಸಿಗುತ್ತದೆ ಅನ್ನುವ ಕಾರಣಕ್ಕೆ ಕೃಷಿ ವಿಜ್ಞಾನವನ್ನು ಆರಿಸಿಕೊಂಡೆ. ಹೆಚ್ಚು ಸಂಬಳ ಬರುತ್ತದೆ ಎಂದು ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡೆ. ನನ್ನದು ‘ಇಷ್ಟಪಟ್ಟದ್ದು ಸಿಗದಿದ್ದಾಗ ಸಿಕ್ಕಿದ್ದನ್ನೆ ಇಷ್ಟಪಡಬೇಕು’ ಅನ್ನುವ ಧೋರಣೆಯಾದ್ದರಿಂದ ನನ್ನ ಆಯ್ಕೆಯ ಬಗ್ಗೆ ಯಾವತ್ತೂ ಪಶ್ಚಾತ್ತಾಪ ಪಡಲಿಲ್ಲ.

    ಹುಟ್ಟು ನಮ್ಮಆಯ್ಕೆಯಲ್ಲ ನಿಜ. ಆದರೆ ಹುಟ್ಟಿದ ಮೇಲೆ ಬದುಕಿನುದ್ದಕ್ಕೂ ನಾವು ಆಯ್ಕೆಗಳನ್ನು ಮಾಡಲೇಬೇಕಾಗುತ್ತದೆ. ಧರಿಸುವ ಬಟ್ಟೆಯಿಂದ ಹಿಡಿದು ನಡೆಯುವ ಬಟ್ಟೆಯವರೆಗೆ ಅಡಿಗಡಿಗೆ ಆಯ್ಕೆಯ ಸವಾಲು ಎದುರಾಗುವುದು. ಕೆಲವೊಮ್ಮೆ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಪತ್ರಿಕೆಗಳ ಹಾಗೆ ಹಲವು ಆಯ್ಕೆಗಳು ನಮ್ಮಮುಂದೆ ಇರುತ್ತವೆ. ಗೊಂದಲ ಮೂಡಿಸುವ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ಉದ್ಯೋಗ, ಸ್ನೇಹಿತರು, ಮದುವೆ, ಮನೆ, ಮಕ್ಕಳು ಇತ್ಯಾದಿ ಬದುಕಿನ ಪರೀಕ್ಷೆಯಲ್ಲಿ ನಾವು ಮಾಡುವ ಆಯ್ಕೆಗೆ ಬಹಳ ಮಹತ್ವವಿದೆ. ನಮ್ಮ ಜೀವನದ ಗುಣಮಟ್ಟ ನಿರ್ಧಾರವಾಗುವುದು ನಾವು ಮಾಡುವ ಆಯ್ಕೆಗಳಿಂದ. ನಮ್ಮ ಉದ್ಯೋಗ, ಸ್ನೇಹಿತರು, ಜೀವನ ಸಂಗಾತಿಯ ಆಯ್ಕೆ ಸರಿಯಾಗಿದ್ದರೆ ನಮ್ಮ ಬದುಕೂ ಚೆನ್ನಾಗಿರುತ್ತದೆ.

    ಒಂದು ಕಾಲದಲ್ಲಿ ಮದುವೆಯಾಗುವವರಿಗೆ ತಮ್ಮ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತವೆಂದು ಹಿರಿಯರು ಆರಿಸಿದ ವರ/ವಧುವನ್ನು ಒಪ್ಪಿಕೊಳ್ಳುತ್ತಿದ್ದರು. ಈಗ ಮದುವೆಯ ವಿಷಯದಲ್ಲಿ ಅಂತಿಮ ಆಯ್ಕೆ ಹುಡುಗ ಮತ್ತು ಹುಡುಗಿಯದ್ದು ಎಂದು ಹಿರಿಯರೇ ಹೇಳುತ್ತಾರೆ. ಹೀಗಾಗಿ ಮದುವೆಯಾಗುವವರೇ ಆಯ್ಕೆ ಮಾಡಬೇಕು ಮತ್ತು ಅದರ ಪರಿಣಾಮವನ್ನು ಅವರೇ ಅನುಭವಿಸಬೇಕು. ಹುಡುಗಿಯರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಹುಡುಗರಿಗೆ ಆಯ್ಕೆಯ ಅವಕಾಶಗಳು ಕಡಿಮೆಯಾಗುತ್ತಿವೆ. ಗಂಡು ಸಾಮಾನ್ಯವಾಗಿ ಹೆಣ್ಣಿನ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾನೆ. ಅಂಥವರಿಗೆ ಒಂದು ಕಿ(ಕ)ವಿ ಮಾತು:

    ಮರುಳಾಗಬೇಡಿ ಗೆಳೆಯರೆ

    ಹುಡುಗಿಯ ಮೈಕಟ್ಟಿಗೆ

    ನೆನಪಿರಲಿ

    ಮನಸ್ಸಿಲ್ಲದ ಮೈ

    ಕಟ್ಟಿಗೆ!

    ಹೆಣ್ಣು ಕೊಡುವವರು ಹುಡುಗನ ರೂಪಕ್ಕಿಂತ ಅವನ ಮನೆತನ, ಗುಣನಡತೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಜೊತೆಗೆ ಎಲ್ಲಕ್ಕಿಂತ ಮೊದಲು ಆತನ ವೇತನ. ಈಗಿನ ಹುಡುಗಿಯರೂ ಅಷ್ಟೆ. ಶಕುಂತಲೆಯ ಹಾಗೆ ಮೊದಲ ನೋಟದಲ್ಲೇ ಪ್ರೇಮದ ಬಲೆಗೆ ಬೀಳುವುದಿಲ್ಲ. ಲವ್ ಎಟ್ ಫಸ್ಟ್ ಸೈಟ್ ಅನ್ನುವ ಬದಲು ಫಸ್ಟ್ ಸೈಟು ಆಮೇಲೆ ಲವ್ವು ಅನ್ನುವುದು ಇಂದಿನ ಯುವತಿಯರ ಧೋರಣೆ. ಹೀಗಾಗಿ ಅವರು ಸೈಟು, ಮನೆ ಇರುವ ಹುಡುಗರನ್ನೆ ಆಯ್ಕೆ ಮಾಡಿಕೊಂಡು ಲವ್ ಮಾಡುತ್ತಾರೆ.

    ದಮಯಂತಿ ಸ್ವಯಂವರದ ಪ್ರಸಂಗ ನೆನಪು ಮಾಡಿಕೊಳ್ಳಿ. ದೇವತೆಗಳಾದ ಇಂದ್ರ, ಅಗ್ನಿ, ವರುಣ ಮತ್ತು ಯಮ ನಳನ ರೂಪ ಧರಿಸಿ ಸ್ವಯಂವರಕ್ಕೆ ಬಂದದ್ದರಿಂದ ದಮಯಂತಿಗೆ ನಿಜವಾದ ನಳನನ್ನು ಆರಿಸುವುದು ಹೇಗೆ ಎಂಬ ಸಮಸ್ಯೆ ಎದುರಾಯಿತು. ಆಗ ಅವಳು ಬಡಿಯದ ಕಣ್ಣುರೆಪ್ಪೆ, ಭೂಮಿಗೆ ತಾಗದ ಕಾಲುಗಳು, ಬೆವರದ ಮೈ ಮುಂತಾದ ದೇವತೆಗಳ ಲಕ್ಷಣವಿಲ್ಲದವ ನಿಜವಾದ ನಳ ಎಂದು ಗುರುತಿಸಿ ಅವನಿಗೆ ಮಾಲೆ ಹಾಕುತ್ತಾಳೆ.

    ದಮಯಂತಿಗೆ ಎದುರಾದ ಆಯ್ಕೆಯ ಸಮಸ್ಯೆ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೂ ಎದುರಾಗುತ್ತದೆ. ಪಕ್ಷಗಳು ಬೇರೆಯಾಗಿದ್ದರೂ ಎಲ್ಲಾ ಅಭ್ಯರ್ಥಿಗಳೂ ಒಂದೇ ತರದ ಭರವಸೆಗಳನ್ನು ನೀಡುತ್ತಾರೆ. ಅಭ್ಯರ್ಥಿಗಳ ಆಸ್ತಿಪಾಸ್ತಿಗಳ ವಿವರ ನೋಡಿದರೆ ಅಲ್ಲೂ ವ್ಯತ್ಯಾಸ ಕಾಣುವುದಿಲ್ಲ. ಎಲ್ಲರೂ ಭ್ರಷ್ಟರೇ ಆಗಿರುವಾಗ ಯಾರನ್ನು ಆಯ್ಕೆ ಮಾಡುವುದು ಎಂದು ಗೊತ್ತಾಗದೆ ಅನೇಕರು ಮತದಾನದಿಂದ ದೂರ ಉಳಿಯುತ್ತಾರೆ. ಅಂತವರಿಗಾಗಿ ಈಗ ಯಾರನ್ನೂ ಆಯ್ಕೆಮಾಡದೆ ಇರುವ ನೋಟಾ ಎಂಬ ಆಯ್ಕೆಯೂ ಉಂಟು.

    ಮತದಾರರಿಗೆ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಸಮಸ್ಯೆ ಉಂಟಾಗಲು ಕಾರಣ ನಮ್ಮ ರಾಜಕೀಯ ವ್ಯವಸ್ಥೆ. ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗಲೇ ತಪ್ಪು ಮಾಡುತ್ತವೆ. ಟಿಕೆಟ್ ನೀಡುವಾಗ ಆ ವ್ಯಕ್ತಿಯ ಸಾಧನೆ, ಯೋಗ್ಯತೆ, ಪ್ರಾಮಾಣಿಕತೆ, ಸಿದ್ಧಾಂತ, ಪಕ್ಷನಿಷ್ಠೆ ಮುಂತಾದವುಗಳಿಗೆ ಈಗ ಬೆಲೆ ಇಲ್ಲ. ಆಯ್ಕೆಯ ಮಾನದಂಡವೇ ಬೇರೆ.

    ಅಭ್ಯರ್ಥಿಯ ಆಯ್ಕೆಯಲ್ಲಿ

    ಜಾತಿ ಮತವೇ ಪ್ರಧಾನ

    ಅರ್ಹತೆ, ಅನುಭವ ಗೌಣ

    ವೋಟ್ ಎಂಬ ಶಬ್ದಕ್ಕೆ

    ಮತ ಅನ್ನುವುದು

    ನಿಜಕ್ಕೂ ಆರ್ಥಪೂರ್ಣ!

    ಪ್ರಯಾಣದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಗೂಗಲ್ ಮ್ಯಾಪ್ ಸಹಾಯ ಪಡೆಯಬಹುದು. ಆದರೆ ಬದುಕಿನ ದಾರಿಯನ್ನು ಆರಿಸಿಕೊಳ್ಳಲು ಅದು ನೆರವಾಗುವುದಿಲ್ಲ. ಬಂಧು ಮಿತ್ರರ ಸಲಹೆ ಎಲ್ಲಾ ಸಂದರ್ಭಗಳಲ್ಲೂ ಸಿಗಲಾರದು. ಸಿಕ್ಕಿದರೂ ಸರಿಯಾಗಿರುತ್ತದೆ ಅನ್ನುವ ಗ್ಯಾರಂಟಿ ಇಲ್ಲ. ಹೀಗಾಗಿ ಆಯ್ಕೆಯ ಜವಾಬ್ದಾರಿ ನಮ್ಮದೇ. ಆಯ್ಕೆಗಳು ಜಾಸ್ತಿಯಿದ್ದಾಗ ಆರಿಸುವುದು ಹೆಚ್ಚು ಜಟಿಲವಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಮಾರ್ಗ ಒನ್ ವೇ ಆಗಿದ್ದರೆ ಆರಿಸಿಕೊಳ್ಳುವಾಗ ವಿಶೇಷ ಎಚ್ಚರ ವಹಿಸಬೇಕು. ಕೆಲವೊಮ್ಮೆ ಆಯ್ಕೆ ಮಾಡದಿರುವುದು ಮತ್ತು ಆಯ್ಕೆಯನ್ನು ಮುಂದೂಡುವುದೂ ಸಹ ಒಂದು ಆಯ್ಕೆ. ಈ ಮನೋಧರ್ಮಕ್ಕೆ ಒಳ್ಳೆಯ ಉದಾಹರಣೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್. ರಾಜಕೀಯದಲ್ಲಿ ಇದು ನಡೆಯಬಹುದು. ಆದರೆ ಬದುಕಿನಲ್ಲಿ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಆಯ್ಕೆ ಮಾಡಲಾಗದೆ ಮದುವೆಯನ್ನು ಮುಂದೂಡಿದರೆ ವಿವಾಹದ ವಯಸ್ಸು ಜಾರಿಹೋಗುತ್ತದೆ.

    ನಮ್ಮ ಆಯ್ಕೆ ಮಾತ್ರವಲ್ಲ ಬೇರೊಬ್ಬರು ಮಾಡುವ ಆಯ್ಕೆಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಸಂದರ್ಶನದಲ್ಲಿ ಉದ್ಯೋಗಕ್ಕೆ ಆಯ್ಕೆಯಾಗುವುದು, ಲೇಖಕರಿಗೆ ಪ್ರಶಸ್ತಿ ಬರುವುದು, ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಗುವುದು ಇತ್ಯಾದಿ. ಕೆಲವೊಮ್ಮೆ ಆಯ್ಕೆ ಮಾಡುವವರ ಪೂರ್ವಗ್ರಹದಿಂದಾಗಿ, ಅವರು ಮಾಡುವ ತಪ್ಪುಗಳಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುವುದುಂಟು. ಯಜಮಾನ ಮಾಡಿದ ತಪ್ಪು ಆಯ್ಕೆಯಿಂದಾಗಿ ಕುಟುಂಬದ ಎಲ್ಲಾ ಸದಸ್ಯರು ಕಷ್ಟಪಡಬೇಕಾಗುತ್ತದೆ. ಯಾವುದೇ ದುರಭ್ಯಾಸ ಇಲ್ಲದವರು ಘೊರ ರೋಗಗಳಿಗೆ ತುತ್ತಾಗಿ ನರಳುವುದನ್ನು, ಅಕಾಲಮರಣಕ್ಕೆ ತುತ್ತಾಗುವುದನ್ನು ನಾವು ನೋಡುತ್ತೇವೆ. ಕಾಯಿಲೆ ಬೇರೆಯವರನ್ನೆಲ್ಲ ಬಿಟ್ಟು ಅವರನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತದೆ? ಇದಕ್ಕೆ ಸರಿಯಾದ ಉತ್ತರವಿಲ್ಲ. ದುರದೃಷ್ಟ, ಪೂರ್ವ ಜನ್ಮದ ಕರ್ಮ, ಯಾರದೋ ಶಾಪ ಮುಂತಾದವು ನಮ್ಮ ಸಮಾಧಾನಕ್ಕೆ ನಾವು ಕೊಡುವ ಕಾರಣಗಳು. ಇದನ್ನು ಸುಮತೀಂದ್ರ ನಾಡಿಗರು ತಮಾಷೆಯ ಧಾಟಿಯಲ್ಲಿ ಹೀಗೆ ಹೇಳಿದ್ದಾರೆ:

    ಯಾರೇನು ಆಗುವರೊ

    ಅದು ಅವರ ಕರ್ಮ

    ಈ ಕುರಿಯ ನೋಡಿ

    ಆಗಿಹುದು ಕೂರ್ವ

    ಕೂರ್ವ ಆಗುವುದು ಕುರಿಯ ಆಯ್ಕೆಯಲ್ಲ. ಅದನ್ನು ಖರೀದಿಸಿದವನ ಆಯ್ಕೆ.

    ಬದುಕಿನಲ್ಲಿ ಕಷ್ಟ ನಷ್ಟಗಳು ಉಂಟಾದಾಗ ಅವುಗಳನ್ನು ಎದುರಿಸಲಾಗದೆ ಕೆಲವರು ಸಾವಿಗೆ ಶರಣಾಗುತ್ತಾರೆ. ಆಗಲೇ ಹೇಳಿದಂತೆ ಹುಟ್ಟು ನಮ್ಮ ಆಯ್ಕೆಯಲ್ಲ. ಹೀಗಿರುವಾಗ ಜಿಗುಪ್ಸೆಯಿಂದ ಸಾವನ್ನು ಆರಿಸಿಕೊಳ್ಳುವುದು ಸರಿಯೆ? ಸೀರೆ ಆರಿಸುವುದರಿಂದ ಆರಂಭವಾದ ಈ ಲೇಖನ ಕೊನೆಯಲ್ಲಿ ತುಂಬಾ ಸೀರಿಯಸ್ ಆಯಿತು ಅಂತೀರಾ? ಅದು ನನ್ನ ತಪ್ಪಲ್ಲ. ಲೇಖನವನ್ನು ಓದುವ ಆಯ್ಕೆ ಮಾಡಿದ್ದು ನೀವು!

    ಮುಗಿಸುವ ಮುನ್ನ:

    ಎಪ್ಪತ್ತರ ಮುದುಕನನ್ನು

    ಪ್ರೀತಿಸಿ ಮದುವೆಯಾದಳು

    ಮುವ್ವತ್ತರ ಭಾಮಿನಿ

    ಆಯ್ಕೆಗೆ ಕಾರಣ

    ಪತಿಯ ಸಂಪತ್ತಿಗೆ

    ಆಕೆಯೇ ನಾಮಿನಿ! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts