More

    ಪಿಯುಸಿ ದಾಖಲಾತಿ ಬಿರುಸು; ಖಾಸಗಿ ಕಾಲೇಜು ಸಿಬ್ಬಂದಿ ಮನೆ ಮನೆ ಭೇಟಿ

    ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರಥಮ ಪಿಯು ದಾಖಲಾತಿ ಚುರುಕಾಗಿದೆ. ಪ್ರಕ್ರಿಯೆಯಲ್ಲಿ ಎಂದಿನಂತೆ ಸರ್ಕಾರಿ ಕಾಲೇಜುಗಳಿಗಿಂತ ಮುಂಚೂಣಿಯಲ್ಲಿರುವ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿ ಬೇಟೆ ಪ್ರಾರಂಭಿಸಿವೆ.

    ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಸದ್ದಿಲ್ಲದೇ ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಅಬ್ಬರದ ಪ್ರಚಾರ ಜತೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಪಟ್ಟಿಹಿಡಿದು ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡುವ ಮೂಲಕ ತಮ್ಮ ಕಾಲೇಜಿನಲ್ಲೇ ದಾಖಲಾತಿ ಮಾಡಿಸುವಂತೆ ಪಾಲಕರ ಮನವೊಲಿಕೆ ನಡೆಸುತ್ತಿದ್ದಾರೆ.

    ಇನ್ನೊಂದೆಡೆ ಸವಲತ್ತುಗಳ ಪ್ರಚಾರಕ್ಕೆ ಮಾರು ಹೋಗಿರುವ ವಿದ್ಯಾರ್ಥಿಗಳು ಮತ್ತು ಪಾಲಕರು ಅನುಕೂಲಕರ ಮಾಹಿತಿ ಸಂಗ್ರಹಿಸಿ ದಾಖಲಾತಿಗೆ ನಾ ಮುಂದು ತಾ ಮುಂದು ಎನ್ನುವಂತೆ ಮುಗಿ ಬೀಳುತ್ತಿದ್ದಾರೆ.
    ಜಿಲ್ಲೆಯಲ್ಲಿ 22 ಸರ್ಕಾರಿ, 3 ಮುರಾರ್ಜಿ ದೇಸಾಯಿ, 8 ಅನುದಾನಿತ, ಪದವಿ ಕಾಲೇಜಿನಿಂದ ಬೇರ್ಪಟ್ಟ ಪಿಯು 2 ಮತ್ತು ಖಾಸಗಿ 74 ಸೇರಿ 109 ಪಿಯು ಕಾಲೇಜುಗಳಿವೆ. ಈಗಾಗಲೇ ಅರ್ಜಿ ಸ್ವೀಕಾರ, ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

    ಹೆಚ್ಚಿನ ಫಲಿತಾಂಶವೇ ವರ: ಈ ಬಾರಿ ಗ್ರೇಡ್ ಲೆಕ್ಕಾಚಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಕಟವಾಗಿದೆ. ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಪ್ರತಿ ವರ್ಷದಂತೆ ಸರ್ಕಾರಿ ಕಾಲೇಜುಗಳಿಗಿಂತಲೂ ಖಾಸಗಿ ಕಾಲೇಜುಗಳೇ ಉತ್ತಮ ಫಲಿತಾಂಶ ಪಡೆದಿದ್ದು, ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಅಂಕಗಳು ಮತ್ತು ಕಾಲೇಜಿನ ಮಾಹಿತಿಯನ್ನೊಳಗೊಂಡ ಕರಪತ್ರಗಳು ಎಲ್ಲೆಡೆ ಹರಿದಾಡಿದ್ದು ಫಲಿತಾಂಶದ ಪ್ರಚಾರವೇ ದಾಖಲಾತಿ ಪ್ರಕ್ರಿಯೆ ಹೆಚ್ಚಳಕ್ಕೆ ವರವಾಗಿದೆ.

    ಸರ್ಕಾರಿ ಕಾಲೇಜಿನತ್ತ ಹೆಚ್ಚಿನ ಒಲವು: ಪ್ರತಿ ಬಾರಿಯಂತೆ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಗಳೇ ಮುಂಚೂಣಿಯಲ್ಲಿವೆ. ಇದರ ನಡುವೆಯೂ ಕರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ಕಡಿಮೆ ಶುಲ್ಕದ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ದ್ವಿತೀಯ ಪಿಯುಸಿ ಪ್ರಮುಖ ತಿರುವು ನೀಡುವ ಶೈಕ್ಷಣಿಕ ಘಟ್ಟ. ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ವೃತ್ತಿಗಳ ಮೇಲೆ ಒಲವು ಹೊಂದಿರುವವರು ವಿಜ್ಞಾನ ಕೋರ್ಸ್ ತರಬೇತಿಗೆ, ಬ್ಯಾಂಕಿಂಗ್, ಉದ್ಯಮ ನಿರ್ವಹಣೆ ಕೋರ್ಸ್‌ಗಳಿಗಾಗಿ ಖಾಸಗಿ ಕಾಲೇಜಿನತ್ತ ಸಹಜವಾಗಿ ಒಲವು ವ್ಯಕ್ತವಾಗುತ್ತಿದೆ. ಕಲಾ ವಿಭಾಗದ ಆಸಕ್ತರು ಸರ್ಕಾರಿ ಕಾಲೇಜುಗಳೇ ಬೆಸ್ಟ್ ಎನ್ನುತ್ತಿದ್ದಾರೆ.

    ಶುಲ್ಕ ವಿನಾಯಿತಿಯಲ್ಲಿ ಸೆಳೆತ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಿಂದ ಸೀಟಿಗೆ ಬೇಡಿಕೆ ಹೆಚ್ಚಾಗಿದೆ. ಮಧ್ಯಮಮಟ್ಟದ ಶಿಕ್ಷಣ ಸಂಸ್ಥೆಗಳು ಕಳೆದ ವರ್ಷಕ್ಕಿಂತಲೂ ಕಡಿಮೆ ಶುಲ್ಕ ಸ್ವೀಕರಿಸುವ ಮೂಲಕ ಸೀಟು ಭರ್ತಿಗೆ ಮುಂದಾಗಿದ್ದರೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ವಿದ್ಯಾರ್ಥಿಗಳ ಪ್ರತಿಕ್ರಿಯೆ ಮತ್ತು ಕಡಿಮೆ ಸೀಟಿನ ಲಭ್ಯತೆಯ ಲೆಕ್ಕಾಚಾರದಲ್ಲಿ ಡೊನೇಷನ್‌ನಲ್ಲಿ ರಾಜಿಯಾಗುತ್ತಿಲ್ಲ.

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿದ್ದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಹಲವರು ಸಲಹೆ ನೀಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ದಾಖಲಾತಿಗೆ ಅರ್ಜಿ ಸಲ್ಲಿಸಿದ್ದೇನೆ.
    ಮಂಜುನಾಥ್, ವಿದ್ಯಾರ್ಥಿ

    ಪ್ರತಿ ವರ್ಷ ಪರೀಕ್ಷೆಯಲ್ಲಿ ಕಾಲೇಜು ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಿದೆ. ಇದಕ್ಕೆ ಹಲವರು ದಾಖಲಾತಿ ಬಯಸಿ ಶುಲ್ಕ ಸೇರಿ ಇತರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿಯಮಾನುಸಾರ ಎಲ್ಲ ಸೀಟುಗಳು ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
    ರಾಮ್ ಕುಮಾರ್, ಖಾಸಗಿ ಕಾಲೇಜು ಶಿಕ್ಷಕ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts