More

    ಟಿಕೇಟ್ ಬೇಡಬೇಡಿ, ಸಮಾಜ ಸಂಘಟಿಸಿ

    ಹರಿಹರ: ಚುನಾವಣೆ ಕಣಕ್ಕಿಳಿಯಲು ಯಾವುದೇ ಪಕ್ಷಗಳಲ್ಲಿ ಟಿಕೇಟ್ ಬೇಡುವುದನ್ನು ಬಿಟ್ಟು ಬಿಡಿ, ಮೊದಲು ಸಮಾಜವನ್ನು ಸಂಘಟಿಸಿರಿ ಎಂದು ಹಿರಿಯೂರು ತಾಲೂಕು ಕೋಡಿಹಳ್ಳಿ ಮಠದ ಷಡಾಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು.

    ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಾದಿಗ ಸಮಾಜದಿಂದ ಗುರುವಾರ ಮಾದಾರ ಚನ್ನಯ್ಯ ಜಯಂತಿ ನಿಮಿತ್ತ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಹಾಗೂ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ತಾಪಂ, ಜಿಪಂ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧೆಗೆ ಟಿಕೇಟ್ ಕೊಡಿ ಎಂದು ವಿವಿಧ ಪಕ್ಷಗಳವರಲ್ಲಿ ಅಂಗಾಲಾಚಬೇಡಿ. ಅದರ ಬದಲು ಮೊದಲು ಸಮಾಜ ಸಂಘಟನೆಯಲ್ಲಿ ತೊಡಗಿ. ಸಂಘಟನೆ ಗಟ್ಟಿಯಾಗಿದ್ದರೆ ಪಕ್ಷಗಳ ನಾಯಕರೇ ಮನೆ ಬಾಗಿಲಿಗೆ ಬಂದು ಟಿಕೇಟ್ ನೀಡುತ್ತಾರೆ ಎಂದು ಹೇಳಿದರು.

    ಮಾ.19ಕ್ಕೆ ಕೋಡಿಹಳ್ಳಿ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
    ಮೊಳಕಾಲ್ಮೂರು ತಾಲೂಕು ಸಿದ್ದಯ್ಯನಕೋಟೆಯ ವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜ್ಯದೆಲ್ಲೆಡೆ ದೊಡ್ಡ ಸಂಖ್ಯೆಯಲ್ಲಿ ಮಾದಿಗ ಸಮಾಜವಿದೆ. ನೀವು ಸಂಘಟಿತರಾದರೆ ಸಮಾಜವು ಮುಖ್ಯ ವಾಹಿನಿಗೆ ಬರಲು ಸಾಧ್ಯವೆಂದು ಹೇಳಿದರು.

    ಮಾಜಿ ಸಚಿವ ಎಚ್.ಆಂಜನೇಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಕಂಡ ಕಲ್ಯಾಣ ರಾಜ್ಯದ ಕಲ್ಪನೆ ಜಾರಿಯಾಗಬೇಕಿದೆ. ಸಮಾಜದಲ್ಲಿ ಶೋಷಣೆ ಸಂಪೂರ್ಣ ನಿರ್ಮೂಲನೆಯಾಗಬೇಕಿದೆ. ಎಲ್ಲರನ್ನೂ ಮನುಷ್ಯ ರೂಪದಲ್ಲಿ ಕಾಣಬೇಕಿದೆ. ಸಂಘಟನೆ, ಶಿಕ್ಷಣದ ಮೂಲಕ ದಲಿತರು ಶಕ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.

    ಶಾಸಕ ಎಸ್.ರಾಮಪ್ಪ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಎ.ಗೋವಿಂದರೆಡ್ಡಿ, ಡಾ.ಎಚ್.ಮಹೇಶ್ವರಪ್ಪ, ಎಂ.ನಾಗೇಂದ್ರಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಎಚ್.ಆರ್.ತೇಗನೂರ, ನಿವೃತ್ತ ಇಇ ಬಿ.ಗುರುನಾಥ, ದಲಿತ ಮುಖಂಡರಾದ ಎಚ್.ಮಲ್ಲೇಶ್, ಎಲ್.ಬಿ.ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಬಸವರಾಜ್, ತಾಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ತಾಪಂ ಮಾಜಿ ಸದಸ್ಯ ಹಾಲೇಶ್ ಗೌಡ, ಮಾದಿಗ ಸಮಾಜದ ಪದಾಧಿಕಾರಿಗಳಾದ ಎಂ.ಬಿ.ಅಣ್ಣಪ್ಪ, ಎಂ.ಎಸ್.ಆನಂದಕುಮಾರ್, ಎ.ಕೆ.ಶಿವರಾಮ್, ಎಂ.ಎಸ್.ಶ್ರೀನಿವಾಸ್, ಗಂಗಾಧರ, ಎಚ್.ಕೊಂಡಜ್ಜಿ, ಎಚ್.ಶಿವಪ್ಪ, ಜಿ.ಎಚ್.ಸಿದ್ದಾರೂಢ, ನಾಗೇಂದ್ರಪ್ಪ, ಕೊಕ್ಕನೂರು ಬಿ.ಡಿ.ಬಸವರಾಜಪ್ಪ, ಆರ್.ಮಂಜುನಾಥ್ ಇದ್ದರು.

    ಸಮಾರಂಭದಲ್ಲಿ 12 ಜೋಡಿ ವಧು-ವರರು ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts