More

    ಸಾರ್ವಜನಿಕರ ಬಾಧಿಸಿದ ಮುಷ್ಕರ

    ಬೆಳಗಾವಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ನೌಕರರು ಬುಧವಾರದಿಂದ ಅನಿರ್ದಿಷ್ಟ ಅವಧಿಗೆ ಮುಷ್ಕರ ಆರಂಭಿಸಿದ್ದು, ಜಿಲ್ಲಾದ್ಯಂತ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಬೆಳಗಾವಿಯಿಂದ ವಿವಿಧೆಡೆ ತೆರಳುವ ಪ್ರಯಾಣಿಕರು ಪರದಾಡಿದರು.

    ಬೆಳಗಾವಿ ವಿಭಾಗದಲ್ಲಿ ನಿತ್ಯ 660 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಆದರೆ, ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ಪ್ರಯಾಣಿಕರು ಬಸವಳಿದರು.

    ಸೈನಿಕನ ಪರದಾಟ: ಮಹಾರಾಷ್ಟ್ರದ ನಾಶಿಕ್‌ನಿಂದ ಬುಧವಾರ ನಸುಕಿನ ಜಾವ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಸೈನಿಕ ಅನಂತಕುಮಾರ ಸಗರೆ, ತಮ್ಮೂರು ಕಲಬುರಗಿಗೆ ತೆರಳಲು ಬಸ್ ಸಿಗದೆ ಪರದಾಡಿದರು. ‘ರಜೆಗಾಗಿ ಊರಿಗೆ ಹೊರಟಿದ್ದೇನೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಏಳೆಂಟು ಗಂಟೆಗಳಿಂದ ನಿಲ್ದಾಣದಲ್ಲೇ ಕುಳಿತಿದ್ದೇನೆ. ಖಾಸಗಿ ವಾಹನದಲ್ಲಿ ಊರಿಗೆ ಮರಳುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

    ಹೆಲ್ಮೆಟ್ ಧರಿಸಿ ಬಸ್ ಚಾಲನೆ: ಮಧ್ಯಾಹ್ನದ ವೇಳೆಗೆ ಕೆಲ ಚಾಲಕರ ಮನವೊಲಿಸುವಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಯಶಸ್ವಿಯಾದರು. ಆಯ್ದ ಕೆಲ ಮಾರ್ಗಗಳಲ್ಲಿ ಐದು ಬಸ್‌ಗಳ ಸಂಚಾರ ಆರಂಭಿಸಿದರು. ಈ ವೇಳೆ, ಚಾಲಕರೊಬ್ಬರು ಹೆಲ್ಮೆಟ್ ಧರಿಸಿಯೇ ಬೆಳಗಾವಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬಸ್ ಚಲಾಯಿಸಿ ಗಮನ ಸೆಳೆದರು.

    ಪರ್ಯಾಯ ವ್ಯವಸ್ಥೆ: ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸಮಸ್ಯೆಯಾಗದಿರಲೆಂದು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕೈಗೊಂಡಿತ್ತು. ಮಧ್ಯಾಹ್ನದವರೆಗೂ ನೌಕರರು ಕರ್ತವ್ಯಕ್ಕೆ ಬಾರದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದ ಹಲವು ಮಾರ್ಗಗಳಲ್ಲೇ ಖಾಸಗಿ ಬಸ್‌ಗಳು, ವಾಹನಗಳನ್ನು ಓಡಿಸಲಾಯಿತು. ಇದರಿಂದ ಪ್ರಯಾಣಿಕರು ತುಸು ನಿರಾಳರಾದರು.

    ಮುಷ್ಕರದ ಲಾಭ ಪಡೆದು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋರಿಕ್ಷಾ ಚಾಲಕನಿಗೆ ಮಹಿಳೆಯೊಬ್ಬರು ಬೆಳಗಾವಿ ಬಸ್ ನಿಲ್ದಾಣ ಮುಂಭಾಗದಲ್ಲಿ ಬಿಸಿ ಮುಟ್ಟಿಸಿದರು. ಹೆಚ್ಚುವರಿ ಹಣ ನೀಡಲು ನಿರಾಕರಿಸಿದಾಗ ನಿಂದಿಸಿದ ಚಾಲಕನ ಬೆವರಿಳಿಸಿದರು.

    ಪೊಲೀಸರು ಮಧ್ಯಪ್ರವೇಶಿಸಿ ಪರಸ್ಪರರ ವಾಗ್ವಾದಕ್ಕೆ ತೆರೆ ಎಳೆದರು. ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 4ರವರೆಗೆ ಬಸ್‌ಗಳಿಗೆ ಪೊಲೀಸರು ಭದ್ರತೆ ಒದಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts