More

    ವಲಸೆ ಬಂದವರಿಗೆ ಅಗತ್ಯ ಸೌಲಭ್ಯ ಒದಗಿಸಿ

    ಬೆಳಗಾವಿ: ಜಿಲ್ಲೆಯತ್ತ ನೆರೆಯ ರಾಜ್ಯಗಳು ಮತ್ತು ಬೆಂಗಳೂರಿನಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಮೇರೆಗೆ ಅಂತಹವರನ್ನು ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಲ್ಲ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ ಸೇರಿ ಜಿಲ್ಲೆಯ ಎಲ್ಲ ಗಡಿ ತಾಲೂಕುಗಳಲ್ಲಿ ವಲಸೆ ಕಾರ್ಮಿಕರು ಕಂಡುಬರುತ್ತಿದ್ದಾರೆ. ಆಯಾ ತಾಲೂಕುಗಳಲ್ಲಿ ಲಭ್ಯವಿರುವ ಸರ್ಕಾರಿ ಕಟ್ಟಡ, ಸಮುದಾಯ ಭವನ, ವಸತಿ ನಿಲಯಗಳು, ಕಲ್ಯಾಣ ಮಂಟಪ ಮತ್ತಿತರ ಕಟ್ಟಡಗಳಲ್ಲಿ ಅವರಿಗೆ ಊಟ ಹಾಗೂ ವಸತಿ ಮಾಡಬೇಕು.

    ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಿಗೆ ಒಬ್ಬ ನೋಡಲ್ ಅಧಿಕಾರಿ, ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಕ್ಷಣವೇ ಬಿಡುಗಡೆ ಮಾಡಲಾಗುವುದು. ಎಲ್ಲ ವಲಸೆ ಕಾರ್ಮಿಕರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು. ಅವರ ಮೂಲ ಸ್ಥಳ, ಕೆಲಸ ಮಾಡುವ ಸಂಸ್ಥೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ದಿನಬಳಕೆ ಹಾಗೂ ಅತ್ಯಾವಶ್ಯಕ ಸಾಮಗ್ರಿಗಳ ಸಾಗಣೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಗರ್ಭಿಣಿಯರು, ಬಾಣಂತಿಯರು ಸೇರಿ ಎಲ್ಲ ಬಗೆಯ ತುರ್ತು ವೈದ್ಯಕೀಯ ಸೇವೆಗಳಿಗೆ ಹಾಗೂ ಅಂತಹ ಜನರನ್ನು ಕರೆದುಕೊಂಡು ಹೋಗುವ ವಾಹನಗಳಿಗೆ ಪೊಲೀಸರು ತಡೆಯೊಡ್ಡಬಾರದು ಎಂದರು.

    ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್
    ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸೇರಿ ಇನ್ನಿತರರು ಇದ್ದರು.

    ಎರಡು ಮಾಹೆಗಳ ಪಡಿತರ ವಿತರಣೆಯನ್ನು ಏಪ್ರಿಲ್ ಮೊದಲ ವಾರದಿಂದಲೇ ವಿತರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಪಡಿತರ ನೀಡುತ್ತಿರುವುದರಿಂದ ಅದು ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪಡಿತರ ದುರ್ಬಳಕೆ ಆದರೆ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಕಡ್ಡಾಯವಾಗಿ ನಿತ್ಯ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆ ವರೆಗೆ ಪಡಿತರ ವಿತರಿಸಬೇಕು.
    |ಡಾ.ಎಸ್.ಬಿ.ಬೊಮ್ಮನಹಳ್ಳಿ
    ಜಿಲ್ಲಾಧಿಕಾರಿ

    ಹೆದ್ದಾರಿ ಸೇರಿ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸರಕು ಸಾಮಗ್ರಿ ಸಾಗಿಸುವ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕೋಳಿ, ಹಸು ಸೇರಿ ಜಾನುವಾರುಗಳ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರಗಳ ಸಾಗಣೆ ಮಾಡುವ ವಾಹನಗಳಿಗೆ ಪೊಲೀಸ್ ಸಿಬ್ಬಂದಿ ಸಮಸ್ಯೆ ಮಾಡಬಾರದು.
    |ಲಕ್ಷ್ಮಣ ನಿಂಬರಗಿ ಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts