More

    ಕರೆ ಸಂರಕ್ಷಿಸದಿದ್ದರೆ ಚುನಾವಣೆ ಬಹಿಷ್ಕಾರ

    ಪಾಂಡವಪುರ : ಗ್ರಾಮದ ಕೆರೆ ಜಮೀನನ್ನು ಅತಿಕ್ರಮಿಸಿಕೊಂಡು ಏರಿಯನ್ನು ಸಮತಟ್ಟು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆರೆಯನ್ನು ಯಥಾಸ್ಥಿತಿ ಉಳಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ತಾಲೂಕಿನ ಹೊಸಕೋಟೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತವನ್ನು ಎಚ್ಚರಿಸಿದರು.
    ಎತ್ತಿನಗಾಡಿ, ಹಸು ಕರುಗಳೊಂದಿಗೆ ಗ್ರಾಮದ ರಂಗದ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಪ್ರಭಾವಿಗಳು ಕೆರೆ ಜಮೀನನ್ನು ಅತಿಕ್ರಮಿಸಿಕೊಂಡು ಸಮತಟ್ಟು ಮಾಡಿದ್ದರೂ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆಲ್ಲ ಭೂ ಮಾಪನ ಇಲಾಖೆಯ ಸರ್ವೇಯರ್ ಭಾಸ್ಕರ್ ಅವರೇ ಕಾರಣ.
    ನಮ್ಮ ಪೂರ್ವಿಕರು ಮನೆ ಮನೆಯಿಂದ ಒಂದೊಂದು ರೂಪಾಯಿ ಚಂದಾ ವಸೂಲಿ ಮಾಡಿ ನಿರ್ಮಿಸಿರುವ ಕೆರೆಯನ್ನು ಅತಿಕ್ರಮಣ ಮಾಡಲಾಗುತ್ತಿದೆ. ಅಗೆದಿರುವ ಕೆರೆ ಏರಿಗೆ ಮಣ್ಣು ಸುರಿದು ಎತ್ತರಿಸಬೇಕು. ಕೆರೆ ಇಲ್ಲದಿದ್ದರೆ ಗ್ರಾಮದವರು ವ್ಯವಸಾಯ ಮಾಡುವುದನ್ನೇ ಕೈಬಿಡಬೇಕಾಗುತ್ತದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಅಂತರ್ಜಲ ವೃದ್ಧಿಯಾಗಲಿದೆ: ಕೆರೆಯಲ್ಲಿ ನೀರು ಸಂಗ್ರಹವಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಿ ಕೊಳವೆ ಬಾವಿಯಲ್ಲಿ ಯಥೇಚ್ಚವಾಗಿ ನೀರು ಸಿಗುತ್ತದೆ. ಜಾನುವಾರಗಳ ಕುಡಿಯುವ ನೀರಿಗೆ ಕೆರೆ ಆಸರೆಯಾಗಿದೆ. ಕೆರೆ ಸುತ್ತಲಿನ ರೈತರು ಕೆರೆ ನೀರಿನಿಂದಲೇ ವ್ಯವಸಾಯ ಮಾಡಬಹುದಾಗಿದೆ. ಗ್ರಾಮಕ್ಕೆ ಸಾಕಷ್ಟು ಅನುಕೂಲವಾಗಿರುವ ಕೆರೆ ಏರಿಯನ್ನು ಪ್ರಭಾವಿಯೊಬ್ಬರು ಸಮತಟ್ಟುಗೊಳಿಸಿ ಜಮೀನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೆರೆ ಹೂಳು ತೆಗೆಯಲು ಸರ್ಕಾರ ಎರಡು ಬಾರಿ ಅನುದಾನ ನೀಡಿದ್ದು, ಹೂಳು ತೆಗೆಸಲಾಗಿದೆ. ಕೆರೆಗೆ ಹೇಮಾವತಿ ಉಪ ನಾಲೆ ಮೂಲಕ ನೀರು ತುಂಬಿಸಲಾಗುತ್ತಿತ್ತು. ಇದರಿಂದ ನೀರಿನ ಸಂಗ್ರಹ ಕೂಡ ಹೆಚ್ಚಾಗಿತ್ತು. ಇತ್ತೀಚೆಗೆ ಹೇಮಾವತಿ ನಾಲೆ ಮುಚ್ಚಿ ಹೋಗಿರುವ ಪರಿಣಾಮ ಕೆರೆಗೆ ನೀರಿನ ಹರಿವು ಇಲ್ಲದೆ ಬತ್ತಿಹೋಗಿದೆ. ಆದರೆ ತೊಣ್ಣೂರು ಕೆರೆಯಿಂದ ನೀರು ತುಂಬಿಸ ಬಹುದಾಗಿದೆ. ಕೆರೆ ಬತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿಯೊಬ್ಬ ಕೆರೆ ಜಮೀನನ್ನು ಲಪಟಾಯಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
    ಮುಖಂಡರಾದ ರಾಮಲಿಂಗೇಗೌಡ, ಚಂದ್ರಶೇಖರ್, ನವೀನ್, ರಮೇಶ್, ಎಚ್.ಬಿ.ದೇವರಾಜು, ಎಚ್.ಆರ್.ಆನಂದ್, ಪಟೇಲ್ ಜವರೇಗೌಡ, ದೇವನಾಥ್, ನರಸಿಂಹೇಗೌಡ, ಮಧು, ಎಚ್.ಆರ್.ದಿವಾಕರ್, ನಂದೀಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts