More

    ತಿಪಟೂರಿನಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ವಾಪಾಸ್

    ತಿಪಟೂರು : ರಾಷ್ಟ್ರೀಯ ಹೆದ್ದಾರಿ 206ರ ತಿಪಟೂರು ಬೈಪಾಸ್ ರಸ್ತೆ ನಿರ್ಮಾಣದಿಂದ ನಗರದ ಜತೆ ಸಂಪರ್ಕ ಕಳೆದುಕೊಳ್ಳುವ ಹಳೇಪಾಳ್ಯ ಸುತ್ತಮುತ್ತಲ ನಾಗರಿಕರು ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಕಳೆದ 11 ದಿನದಿಂದ ನಡೆಸುತ್ತಿರುವ ನಿರಂತರ ಧರಣಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಾಧಿಕಾರದ ಅಧಿಕಾರಿಗಳು ತಡವಾಗಿಯಾದರೂ ಸ್ಪಂದಿಸಿದರು.

    ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನೇತೃತ್ವದಲ್ಲಿ ಇತ್ತೀಚೆಗೆ ತುಮಕೂರು ಕಚೇರಿಯಲ್ಲಿ ಮನವಿ ಕೂಡ ನೀಡಿ ಕೂಡಲೇ ಧರಣಿನಿರತ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಸಿರಿಶ್ ಗಂಗಾಧರ್ ಸೋಮವಾರ ಭೇಟಿ ನೀಡಿ ಸಮಸ್ಯೆ ಆಲಿಸಿದರು.

    ಅಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಧರಣಿನಿರತರ ನೇತೃತ್ವವನ್ನು ಕೆಂಚರಾಯನಗರ, ಬಿಳಿಕಲ್ಲು ಮಕ್ಕಳೇ ವಹಿಸಿ ಅಧಿಕಾರಿಯ ಮನವೊಲಿಸುವ ಪ್ರಯತ್ನ ಮಾಡಿದರು. ಸಿರಿಶ್ ಗಂಗಾಧರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಬದಲಾವಣೆಗೂ ನಮಗೆ ಅಧಿಕಾರವಿಲ್ಲ. ಆದರೆ, ಜನರ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ಕೂಡಲೇ ತಿಳಿಸುತ್ತೇನೆ, ಅವರ ಸೂಚನೆಯ ಮೇರೆಗೆ ಶಾಶ್ವತ ಪರಿಹಾರ ನೀಡಲು ಹೆದ್ದಾರಿ ಪ್ರಾಧಿಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

    ತಿಪಟೂರು ವ್ಯಾಪ್ತಿಯ 10 ಕಿಮೀ ಬೈಪಾಸ್ ರಸ್ತೆಯಲ್ಲಿ ಪ್ರತೀ 2 ಕಿಮೀಗೆ ಒಂದು ಅಂಡರ್ ಪಾಸ್, 250ಮೀ. ಒಂದು ಬಾಕ್ಸ್ ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ಯಾವುದೇ ಖಚಿತ ಭರವಸೆ ನೀಡಲು ಸಾಧ್ಯವಿಲ್ಲ. ಐಆರ್‌ಸಿ ಮಾನದಂಡದಂತೆ ಬೆಂಗಳೂರಿನ ವಲಯಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿ ಕಾಲ್ಕಿತ್ತರು.

    ಮಗ್ಗದ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಊಟ, ತಿಂಡಿಗೆ, ಮನೆಗೆ ಹೋಗಿಬರಲು ಒಂದೂವರೆ ಕಿ.ಮೀ ಸುತ್ತಿ, ಬಳಸಿದಾಗ ವ್ಯರ್ಥವಾಗುವ ಸಮಯದಲ್ಲಿ ಒಂದು ಸೀರೆ ನೇಯ್ದು, ಕನಿಷ್ಠ 150 ರೂಪಾಯಿ ಸಂಪಾದಿಸಬಹುದು. ಈ ನಷ್ಟಕ್ಕೆ ಯಾರು ಹೊಣೆ. ಕನಿಷ್ಠ ಆಂಬುಲೆನ್ಸ್ ಓಡಾಡುವಷ್ಟಾದರೂ ಅಂಡರ್ ಪಾಸ್ ಬೇಕೇಬೇಕು ಎಂದು ಕೆಂಚಾರಯ್ಯನಗರದ ರೇಖಾ ಅಲವತ್ತುಕೊಂಡರು.

    ಧರಣಿ ನಿರತ ಪ್ರದೇಶದ ತಲಾ ಎರಡು ಬದಿಯಲ್ಲಿ 50 ಮೀಟರ್‌ವರೆಗೂ ಯಾವುದೇ ಕಾಮಗಾರಿ ಮಾಡಲ್ಲ, ಧರಣಿ ಕೈಬಿಟ್ಟು ಮನೆಗೆ ತೆರಳಿ ಎನ್ನುತ್ತೀರಿ. ಕನಿಷ್ಠ ವಲಯಾಧಿಕಾರಿಗಳಿಗೆ ಯಾವಾಗ ವರದಿ ಸಲ್ಲಿಸುತ್ತೀರಿ. ಅದನ್ನಾದರೂ ಸ್ಪಷ್ಟಪಡಿಸಿ ಎಂದು ಬಿಜೆಪಿ ಮುಖಂಡ ಲೋಕೇಶ್ವರ್ ಒತ್ತಾಯಿಸಿದರು.

    ಅಂಡರ್ ಪಾಸ್ ನಿರ್ಮಿಸದಿದ್ದರೆ ಒಂದೂವರೆ ಕಿಮೀ ಬಳಸಿಕೊಂಡು ನಮ್ಮ ಶಾಲೆ ತಲುಪಬೇಕು, ಬೈಪಾಸ್ ನಿರ್ಮಾಣದಿಂದ ಸ್ಥಳೀಯರಿಗೆ ನಯಾಪೈಸೆಯ ಅನುಕೂಲವಿಲ್ಲ, ಮುಂದಿನ ಊರಿಗಳಿಗೆ ತೆರಳಲು ನಾವು ದಾರಿ ಬಿಟ್ಟುಕೊಂಡು ತೊಂದರೆ ಅನುಭವಿಸುವುದು ಯಾವ ನ್ಯಾಯ? ನಮಗೆ ಅಗತ್ಯವಾದ ಅಂಡರ್‌ಪಾಸ್ ನಿರ್ಮಿಸಿಕೊಟ್ಟರೇ ಸರ್ಕಾರಕ್ಕೇನು ನಷ್ಟ?
    ಪೂಜಾ, 9ನೇ ತರಗತಿ ವಿದ್ಯಾರ್ಥಿನಿ, ಹಳೇಪಾಳ್ಯ ಸರ್ಕಾರಿ ಶಾಲೆ

    ಭರವಸೆ ಮೇರೆಗೆ ಧರಣಿ ವಾಪಾಸ್ :ಪ್ರತಿಭಟನೆ ಸ್ಥಳಕ್ಕೆ ಬಂದು ವಾಪಸ್ ತೆರಳಿದ್ದ ಯೋಜನಾಧಿಕಾರಿ ಮತ್ತೆ ಬಂದು, ಶೀಘ್ರದಲ್ಲಿ ವಲಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ನಿಯೋಗವನ್ನೂ ಕರೆದೊಯ್ಯಲಾಗುವುದು ಎಂದು ನೀಡಿದ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಧರಣಿ ಕೈಬಿಡಲು ನಿರ್ಧರಿಸಲಾಗಿದೆ ಎಂದು ಆರ್‌ಕೆಎಸ್ ಮುಖಂಡ ಎಸ್.ಎನ್.ಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts