More

    ಕುಡಿಯುವ ನೀರಿಗೆ ಹಾಹಾಕಾರ: ಉಪವಾಸ ಸತ್ಯಾಗಹ ನಡೆಸಿದ ಮರಿಲಿಂಗನದೊಡ್ಡಿ ಗ್ರಾಮಸ್ಥರು

    ಮಂಡ್ಯ: ಭೀಕರ ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆ, ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ತಾಲೂಕಿನ ಮರಿಲಿಂಗನದೊಡ್ಡಿಯಲ್ಲಿ ಗ್ರಾಮಸ್ಥರು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.
    ಗ್ರಾಮದ ಮುಖ್ಯರಸ್ತೆಯ ಬಸ್‌ನಿಲ್ದಾಣದ ಬಳಿ ಮರಿಲಿಂಗನದೊಡ್ಡಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉಪವಾಸ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಕೊರತೆಯಿಂದ ಒಂದೆಡೆ ನೀರಿನ ಅಭಾವ ಎದುರಾಗಿದ್ದರೆ, ಮತ್ತೊಂದೆಡೆ ಜನ ಜಾನುವಾರಗಳಿಗೆ ಕುಡಿಯಲು ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆ ಇರುವುದರಿಂದ ರೈತರು ಹೊಸ ಬೆಳೆ ಹಾಕಬಾರದು ಎಂದು ಆಳುವ ಸರ್ಕಾರ ನಿರ್ಬಂಧ ಹಾಕಿದ್ದರಿಂದ ಯಾವುದೇ ರೈತರು ಹೊಸ ಬೆಳೆ ಹಾಕಿರುವುದಿಲ್ಲ. ಇರುವ ನೀರನ್ನೆಲ್ಲ ತಮಿಳುನಾಡಿಗೆ ಹರಿಸಿದ ಪರಿಣಾಮ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಬೆಳೆದು ನಿಂತಿರುವ ಬೆಳೆ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ 90 ಅಡಿ ಇದ್ದಾಗ ನಾಲೆಗಳಿಗೆ ಒಂದು ಕಟ್ಟು ನೀರು ಬಿಡಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸದೆ ತೊಂದರೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
    ಇದೀಗ ಜಲಾಶಯದಲ್ಲಿ 84 ಅಡಿ ನೀರಿದ್ದು, ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಗುತ್ತಿಗೆದಾರರ ಓಲೈಕೆಗಾಗಿ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಬೆಳೆ ರಕ್ಷಣೆಗಾಗಿ ನಾವು ನೀರು ಕೇಳುತ್ತಿಲ್ಲ. ಬದಲಿಗೆ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
    ಜಿಲ್ಲೆಯ ಜನತೆ ಸಮಸ್ಯೆಯನ್ನು ಅರಿತಿದ್ದರು ಸಹ ನಮಗ್ಯಾಕೆ ಎಂದು ಮೌನ ಬಯಸಿ ಕುಳಿತುಕೊಳ್ಳಬಾರದು. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ರಾಜ್ಯ ಸರ್ಕಾರವನ್ನು ಎಚ್ಚರಿಸಿ ನೀರು ಪಡೆಯಬೇಕಾಗಿದೆ. ನೀರಿನ ಅಭಾವ ಕಣ್ಣಾರೆ ಕಂಡರೂ ಸಚಿವ, ಶಾಸಕರು ಕಂಡು ಕಾಣದಂತೆ ಇದ್ದಾರೆ. ನಾಲೆಗಳಿಗೆ ನೀರು ಹರಿಸಿ ಎಂದು ಅವರನ್ನು ಒತ್ತಾಯಿಸಬೇಕು. ಅದರಂತೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರದೆ ಕೆರೆ, ಕಟ್ಟೆಗಳಲ್ಲಿ ನೀರು ತುಂಬಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಮುಖಂಡರಾದ ಯೋಗೇಶ್, ರಾಜೇಶ್, ಅನಿಲ್, ಮೋಹನ್,ಬೋರಪ್ಪ, ಶಿವಲಿಂಗೇಗೌಡ, ರಾಮಲಿಂಗೇಗೌಡ, ಅನುಕುಮಾರ್, ಕುಳ್ಳಪ್ಪ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts