More

    ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ

    ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಬೀಟಮ್ಮ ಗ್ಯಾಂಗ್‌ನ ಕಾಡಾನೆಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದೆ. ಅರಣ್ಯ ಪ್ರದೇಶದತ್ತ ತೆರಳಿದ್ದ ಕಾಡಾನೆಗಳು ಮತ್ತೆ ಇದೀಗ ಚಿಕ್ಕಮಗಳೂರು ನಗರ ಸಮೀಪವೇ ಸಂಚರಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಗುರುವಾರ ನಗರದ ಹೊರವಲಯದ ಇಂದಾವರದ ಬಳಿ ಹೆದ್ದಾರಿ ತಡೆ ನಡೆಸಿದರು.

    21 ದಿನಗಳ ಹಿಂದೆ ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಫಿ ನಾಡಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಗುಂಪು ಮರಳಿ ಹಾಸನ ಜಿಲ್ಲೆಯತ್ತ ತೆರಳುತ್ತಲೇ ಇಲ್ಲ. ಬದಲಿಗೆ ಚಿಕ್ಕಮಗಳೂರು ವ್ಯಾಪ್ತಿಯ ಕೆ.ಆರ್.ಪೇಟೆ, ಇಂದಾವರ, ಆಣೂರು ಸುತ್ತಮುತ್ತ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಇದರಿಂದ ಈ ಭಾಗದ ಜನರಿಗೆ ಜೀವ ಭಯ ಕಾಡಲಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    23ಕ್ಕೂ ಹೆಚ್ಚು ಕಾಡಾನೆಗಳು ಜಮೀನುಗಳ ಮೇಲೆ ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿವೆ. ಈಗಾಗಲೇ ನೂರಾರು ಎಕರೆ ಕಾಫಿ, ಅಡಕೆ ತೋಟ ಹಾಗೂ ಬಾಳೆ ಬೆಳೆ ನಾಶವಾಗಿದೆ. ಅಲ್ಲದೆ ಆನೆಗಳ ಹಾವಳಿಯಿಂದಾಗಿ ತೋಟದಲ್ಲಿ ಕೆಲಸ ಮಾಡಲು ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತೋಟಗಳು ಹಾಳು ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಕಾಳುಮೆಣಸಿನ ಕೊಯ್ಲು ಈಗಾಗಲೇ ಆರಂಭಿಸಬೇಕಿತ್ತು. ಆದರೆ ಕಾಡಾನೆಗಳ ಭಯದಿಂದ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಮೆಣಸಿನ ಕಾಳುಗಳು ಉದುರುತ್ತಿವೆ. ಕಣ್ಣಮುಂದೆಯೇ ಬೆಳೆ ಮಣ್ಣುಪಾಲಾಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರಸ್ತೆ ಪಕ್ಕದ ತೋಟಗಳಲ್ಲೇ ಆನೆಗಳಿದ್ದೂ ಗೊತ್ತಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಯಾರೂ ಮನಸು ಮಾಡುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬೀಟಮ್ಮ ನೇತೃತ್ವದ ಆನೆಗಳನ್ನು ಮುತ್ತೋಡಿಗೆ ಓಡಿಸುವುದಾಗಿ ಹೇಳುತ್ತಿದೆ. ಆದರೆ ಮುತ್ತೋಡಿಯಲ್ಲೇ ಸಾಕಷ್ಟು ಆನೆಗಳಿವೆ. ಹೀಗಾಗಿ ಆ ಆನೆಗಳು ಬೀಟಮ್ಮ ಗುಂಪಿನ ಆನೆಗಳನ್ನು ಅರಣ್ಯದೊಳಗೆ ಬಿಟ್ಟುಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಈ ಆನೆಗಳ ತಂಡ ಗ್ರಾಮಗಳ ಸುತ್ತಲೇ ಸುಳಿಯುತ್ತಿವೆ. ಹೀಗಾಗಿ ಬೀಟಮ್ಮ ನೇತೃತ್ವದ ಗುಂಪು ಎಲ್ಲಿಂದ ಬಂದಿದೆಯೋ ಅಲ್ಲಿಗೇ ಓಡಿಸಬೇಕು ಎಂದು ಒತ್ತಾಯಿಸಿದರು.
    ಅಧಿಕಾರಿಗಳಿಂದ ಮನವೊಲಿಕೆ: ಹೆದ್ದಾರಿ ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಂತೆ ರಸ್ತೆಯ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿದ್ಯಾರ್ಥಿಗಳು, ಇತರೆ ಕಾರ್ಯಗಳಿಗೆ ಚಿಕ್ಕಮಗಳೂರಿಗೆ ಬರುತ್ತಿದ್ದವರು ಮಾರ್ಗಮಧ್ಯೆಯೇ ನಿಲ್ಲುವಂತಾಗಿತ್ತು. ಹೋರಾಟ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಚಿಕ್ಕಮಗಳೂರು ಡಿಎಫ್‌ಒ ರಮೇಶ್ ಬಾಬು ಪ್ರತಿಭಟನಾಕಾರರ ಮನವೊಲಿಸಿದರು. ಕಾಡಾನೆಗಳು ಒಂದೆಡೆ ನಿಲ್ಲುತ್ತಿಲ್ಲ. ಚಲನವಲನ ಗಮನಿಸಲಾಗುತ್ತಿವೆ. ಮರಿ ಆನೆಗಳು ಇರುವುದರಿಂದ ಸ್ಥಳಾಂತರ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಆನೆಗಳ ಗುಂಪು ತಮ್ಮ ಮೂಲ ಸ್ಥಳದತ್ತ ಸಂಚಾರ ಆರಂಭಿಸಿವೆ. ಕೆಲವೇ ದಿನಗಳಲ್ಲಿ ಕಾಡಾನೆಗಳು ಬೇಲೂರು ಭಾಗ ತಲುಪಲಿವೆ ಎಂದು ಸಾರ್ವಜನಿಕರನ್ನು ಸಮಾಧಾನಗೊಳಿಸಿದರು.
    ಇಂದಾವರದ ಗ್ರಾಮಸ್ಥರಾದ ಯತೀಶ್, ಸುರೇಶ್, ನವೀನ್, ಸಂದೀಪ್, ಚಂದ್ರಶೇಖರ್, ಮೋಹನ್, ಲೋಕೇಶ್, ಮಹೇಶ್, ದಿನೇಶ್, ತೇಜಸ್, ಕೆಂಚಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts