More

  ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

  ಕುಂದಗೋಳ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರಗಾಲದ ಛಾಯೆ ಆವರಿಸಿದ್ದರೂ, ಇದುವರೆಗೂ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡದಿರುವುದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

  ಪಟ್ಟಣದ ಗಾಳಿ ಮರಿಯಮ್ಮ ದೇವಸ್ಥಾನದಿಂದ ನೂರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಪ್ರತಿಭಟನೆ ನಡೆಸಿದರು.

  ನೇತೃತ್ವ ವಹಿಸಿದ್ದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಸಾಕಷ್ಟು ರೈತರ ಪರವಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ಎಪಿಎಂಸಿ ಕಾನೂನು ತಿದ್ದುಪಡಿ, ಜಿಲ್ಲೆಗೊಂದು ಗೋಶಾಲೆ ಇನ್ನಿತರ ಯೋಜನೆ ಜಾರಿಗೆ ತಂದಿತ್ತು. ಆದರೆ, ಪ್ರಸಕ್ತ ಸರ್ಕಾರ ಈ ಹಿಂದಿನ ಎಲ್ಲ ಯೋಜನೆ ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದೆ. ಕೃಷಿ ಕ್ಷೇತ್ರ ನಿರ್ಲಕ್ಷಿಸಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು. ಆದರೆ, ಇತ್ತೀಚೆಗೆ ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದ್ದು, ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತ ಪರ ಕಿಂಚಿತ್ತು ಕಾಳಜಿ ಹೊಂದಿರದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ.ಕೂಡಲೇ ರೈತರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಕೂಡಲೇ ಬರಪೀಡಿತ ತಾಲೂಕುಗಳ ಘೋಷಣೆ ಮಾಡಿ, ಬೆಳೆವಿಮೆ, ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

  ನಂತರ ತಹಸೀಲ್ದಾರ್ ಅಶ್ವಿನ್ ಚಡಚಣ ಅವರ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ಮಂಡಲ ಅಧ್ಯಕ್ಷ ರವಿಗೌಡ ಪಾಟೀಲ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಚನ್ನಪ್ಪ ಹರಕುಣಿ, ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts