More

    ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

    ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಶ್ರೂಷಕರು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ (ಮಿಮ್ಸ್) ಆವರಣದಲ್ಲಿ ಸೋಮವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

    ವೈದ್ಯಕೀಯ ಅಧೀಕ್ಷಕರ ಕಚೇರಿ ಮುಂದೆ ಜಮಾಯಿಸಿದ ಶುಶ್ರೂಷಕರು, 12 ವರ್ಷಗಳಿಂದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಶುಶ್ರೂಷಾಧಿಕಾರಿಗಳು ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ರೋಗಿಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದರಿಂದ ನಾವು ಹಾಗೂ ನಮ್ಮ ಕುಟುಂಬದವರು ಅಪಾಯ ಸ್ಥಿತಿಯಲ್ಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

    ಕರೊನಾದಂತಹ ಕಷ್ಟದ ಪರಿಸ್ಥಿತಿಯಲ್ಲೂ ನಮಗೆ ನ್ಯಾಯಯುತವಾಗಿ ಸಿಗಬೇಕಾದ ಎನ್‌ಪಿಎಸ್, ಕೆಜಿಐಡಿ, ಜ್ಯೋತಿ ಸಂಜೀವಿನಿ, ಡಿಸಿಆರ್‌ಜಿ ಸೌಲಭ್ಯಗಳು ಸಿಗುತ್ತಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳು ವಂಚಿತರಾಗಿದ್ದಾರೆ ಎಂದು ದೂರಿದರು.

    ಕರ್ತವ್ಯಕ್ಕೆ ಹಾಜರಾದಾಗಿನಿಂದ ಇಲ್ಲಿಯವರೆಗೆ ನಮಗೆ ಎನ್‌ಪಿಸಿಎಸ್ ಸೌಲಭ್ಯ ಜಾರಿಗೊಳಿಸಿರುವುದಿಲ್ಲ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಾದ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ನೆಫ್ರೋ ಯೂರಾಲಜಿ ಸಂಸ್ಥೆಗಳಲ್ಲಿ ಎನ್‌ಪಿಎಸ್ ಸೌಲಭ್ಯ ದೊರೆಯುತ್ತಿದ್ದು, ನಮಗೆ ಯಾವುದೇ ಪಿಂಚಣಿ ಯೋಜನೆ ಸಿಗುತ್ತಿಲ್ಲ. ಕೂಡಲೇ ನೂತನ ಪಿಂಚಣಿ ಯೋಜನೆಯನ್ನು ನೀಡಬೇಕು ಒತ್ತಾಯಿಸಿದರು.

    ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ವೈದ್ಯರಿಗೆ ಎಐಸಿಟಿಇ ವೇತನ ಮತ್ತು ಗ್ರೂಪ್ ‘ಡಿ’ ಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಆದರೆ, ನಮಗೆ ಯಾವುದೇ ರೀತಿಯ ಪ್ರೋತ್ಸಾಹಧನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ಮಿಮ್ಸ್ ಶುಶ್ರೂಷಕರ ಸಂಘದ ಅಧ್ಯಕ್ಷ ಜಿ.ಸಿ.ಕೃಷ್ಣ, ಕಾರ್ಯದರ್ಶಿ ಆರ್.ಗಿರೀಶ್, ಮಹಮದ್ ರಫಿ, ಎಂ.ವಿ.ಕುಮಾರ್, ಚನ್ನಮ್ಮ, ಸರೋಜ, ನಿರ್ಮಲ, ಮಹೇಶ್‌ಕುಮಾರ್, ಮೋಹನ್ ಕುಮಾರ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts