More

    ಕಾಯಿದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

    ಧಾರವಾಡ: ಕೇಂದ್ರ ಸರ್ಕಾರ ಕಾರ್ವಿುಕರ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಕಾರ್ವಿುಕರ ವೇತನ, ಭದ್ರತೆ ಕಸಿಯಲು ಮುಂದಾಗಿದೆ. ಕೂಡಲೇ ಈ ತಿದ್ದುಪಡಿ ಕೈ ಬಿಟ್ಟು ಹಿಂದಿನಂತೆ ಕಾಯ್ದೆ ಮುಂದುವರಿಸಬೇಕು ಎಂದು ಆಗ್ರಹಿಸಿ ಟಾಟಾ ಮಾರ್ಕೆಪೋಲೊ ಕ್ರಾಂತಿಕಾರಿ ಕಾರ್ವಿುಕ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಕಾಯಿದೆ ತಿದ್ದುಪಡಿಯಿಂದ ದಿನದ 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲಾಗಿದೆ. ಕಾರ್ವಿುಕರ ಸಂಘ ಕಟ್ಟಿಕೊಳ್ಳುವ ಹಕ್ಕನ್ನು ಕಿತ್ತುಕೊಂಡು ಕಾರ್ವಿುಕರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ವೇತನ ಸಂಹಿತೆ 2019ನ್ನು ರಚಿಸಿರುವುದು ಕಾರ್ವಿುಕ ವಿರೋಧಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕಾರ್ವಿುಕ ಕಾಯಿದೆ ಮಾತ್ರವಲ್ಲದೆ ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ಕಾಯಿದೆ, ಎಪಿಎಂಸಿ ಮತ್ತು ವಿದ್ಯುತ್ ಕಾಯಿದೆ ತಿದ್ದುಪಡಿಗಳು ಸಹ ಜನವಿರೋಧಿಯಾಗಿದೆ. ಸದ್ಯ ಜಾರಿಯಲ್ಲಿರುವ ಕಾನೂನುಗಳನ್ನು ಬಲಹೀನಗೊಳಿಸಿದರೆ ಮತ್ತಷ್ಟು ಶೋಷಣೆಗೆ ತಳ್ಳಿದಂತಾಗುತ್ತದೆ ಎಂದು ದೂರಿದರು. ಕಾನೂನು ತಿದ್ದುಪಡಿ ಹಿಂಪಡೆಯಬೇಕಲ್ಲದೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ಯಾವುದೇ ಕಾರಣಕ್ಕೂ ಕಾರ್ವಿುಕ ಮತ್ತು ಜನವಿರೋಧಿ ಕಾನೂನು ಜಾರಿ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮರತಮ್ಮನವರ, ಕೆ.ಬಿ. ಗೋನಾಳ, ರಾಜಶೇಖರ ಜಿ., ಗುಂಡಪ್ಪ ಪಿ., ಬಸವರಾಜ ವಿ.ಎಸ್., ಮಹ್ಮದ್​ರಫೀಕ್ ಎಂ.ಟಿ., ಇತರರು ಇದ್ದರು.

    ಕಾರ್ವಿುಕ ವಿರೋಧಿ ಕಾನೂನು ಹಿಂಪಡೆಯಿರಿ: ಕಾರ್ವಿುಕರ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಹಾಗೂ ಕಾರ್ವಿುಕ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿಯ ಪದಾಧಿಕಾರಿಗಳು ಹುಬ್ಬಳ್ಳಿ ನಗರದಲ್ಲಿ ಮುಷ್ಕರ ನಡೆಸಿದರು. ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಬಂಡವಾಳಗಾರರಿಗೆ ಕೋವಿಡ್ ರಿಯಾಯಿತಿ ಪ್ರಕಟಿಸಿದ ಸರ್ಕಾರಗಳು ಲಾಕ್​ಡೌನ್​ನಿಂದ ಸಂತ್ರಸ್ತರಾದ ವಲಸೆ ಕಾರ್ವಿುಕರು, ಅಸಂಘಟಿತ ಕಾರ್ವಿುಕರು ಸೇರಿ ಇತರರ ಬದುಕಿನ ರಕ್ಷಣೆಗೆ ನಿಲ್ಲಲಿಲ್ಲ. ಇದರಿಂದ ದೇಶದಲ್ಲಿ ಲಾಕ್​ಡೌನ್ ನಂತರ ಸಂಘಟಿತ-ಅಸಂಘಟಿತ ವಲಯದ 14 ಕೋಟಿ ಕಾರ್ವಿುಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಕಾರ್ವಿುಕ ಕಾನೂನು ತಿದ್ದುಪಡಿ ಮಾಡುವ ಮೂಲಕ ಕಾರ್ವಿುಕರ ಹಕ್ಕುಗಳನ್ನು ಮೊಟಕುಗೊಳಿಸಿದೆ. ಕಾರ್ವಿುಕರು ಗುಲಾಮಗಿರಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಆರೋಪಿಸಿದರು.

    ಬೇಡಿಕೆ ಈಡೇರಿಕೆಗೆ ಆಗ್ರಹ: ಕಾರ್ವಿುಕರ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೆಸಿಟಿಯು ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಕಲಾಭವನದಿಂದ ರ‍್ಯಾಲಿ ಮೂಲಕ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಕಾರ್ವಿುಕರನ್ನು ಗುಲಾಮಗಿರಿಗೆ ತಳ್ಳಲಿರುವ ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ವಿುಕ ಸಂಹಿತೆಗಳು, ರೈತ ವಿರೋಧಿ, ಎಪಿಎಂಸಿ, ಭೂಸುಧಾರಣೆ ಮುಂತಾದ ಕೃಷಿ ಸಂಬಂಧಿತ ಕಾಯಿದೆಗಳ ತಿದ್ದುಪಡಿ ಕೈಬಿಡಬೇಕು. ರಾಜ್ಯ ಸರ್ಕಾರ ಮತ್ತೆ ಹೊರಡಿಸಿರುವ ಸುಗ್ರೀವಾಜ್ಞೆ ಹಿಂಪಡೆಯಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ 6 ತಿಂಗಳ ಮಾಸಿಕ 7,500 ರೂ. ನೆರವು ನೀಡಬೇಕು. ಎಲ್ಲ ಕುಟುಂಬಗಳ ಪ್ರತಿ ಸದಸ್ಯರಿಗೆ ಮಾಸಿಕ ತಲಾ 10 ಕೆಜಿ ಆಹಾರ ಪದಾರ್ಥಗಳನ್ನು ನೀಡಬೇಕು. ಹಳ್ಳಿಗಳಲ್ಲಿ ಉದ್ಯೋಗ ಕೇಳುವ ಎಲ್ಲರಿಗೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಿ ಕೂಲಿಯನ್ನು ಕನಿಷ್ಠ 600 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts