More

    ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

    ಹಾವೇರಿ: ಪೆಟ್ರೋಲ್, ಡೀಸೆಲ್, ಸಿಲಿಂಡರ್ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಸೈಕಲ್ ಜಾಥಾ ಹಾಗೂ ಎತ್ತಿನ ಬಂಡಿಯಲ್ಲಿ ಸಂಚರಿಸಿ ಪ್ರತಿಭಟನೆ ನಡೆಸಲಾಯಿತು.

    ನಗರದ ಪುರಸಿದ್ಧೇಶ್ವರ ದೇವಸ್ಥಾನದ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೈಕಲ್ ತುಳಿದು ಹಾಗೂ ಎತ್ತಿನಬಂಡಿಯನ್ನು ಚಲಾಯಿಸಿ ಪ್ರತಿಭಟನೆಗೆ ಚಾಲನೆ ನೀಡಿದರು. ಅಲ್ಲಿಂದ ಮಾಜಿ ಸಚಿವ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಗಾಂಧಿ ರಸ್ತೆ, ಜೆಪಿ ರಸ್ತೆ ಮೂಲಕ ಸಿದ್ದಪ್ಪ ವೃತ್ತದವರೆಗೆ ಸೈಕಲ್​ನಲ್ಲಿ ಆಗಮಿಸಿದರು.

    ಸಲೀಂ ಅಹ್ಮದ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಜನರ ಪಾಲಿಗೆ ಜೀವಂತವಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿವೆ. ಜನರ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತಿಲ್ಲ. ಪೆಟ್ರೋಲ್ ಬೆಲೆ 100ರೂ. ಗಿಂತಲೂ ಹೆಚ್ಚಾಗಿದೆ. ಡೀಸೆಲ್ ಹಾಗೂ ಇತರ ವಸ್ತುಗಳ ಬೆಲೆಯೂ ಸಾಕಷ್ಟು ಏರಿಕೆಯಾಗಿದೆ. ಕರೊನಾ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಹೊತ್ತಿನಲ್ಲಿ ತೈಲ ಬೆಲೆ ಏರಿಸಿದ್ದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ದೂರಿದರು.

    ‘ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿ ಈಗ ಜನರಿಗೆ ನರಕ ತೋರಿಸುತ್ತಿದ್ದಾರೆ. ಇಂತಹ ಜನವಿರೋಧಿ ಸರ್ಕಾರಗಳು ಉಳಿಯಬಾರದು. ಹಳ್ಳಿಯಿಂದ ದಿಲ್ಲಿವರೆಗೂ ಜನತೆ ಇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ಒಂದು ತಿಂಗಳ ಕಾಲ ನಿರಂತರ ಹೋರಾಟ ಮಾಡುತ್ತೇವೆ. ಕರೊನಾ ನಿರ್ವಹಣೆಯಲ್ಲೂ ಸರ್ಕಾರಗಳು ವಿಫಲವಾಗಿವೆ. ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.

    ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಆರ್.ವಿ. ವೆಂಕಟೇಶ, ವೀರಕುಮಾರ ಪಾಟೀಲ, ಸದಾನಂದ ಡಂಗನವರ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಡಾ. ಸಂಜಯ ಡಾಂಗೆ, ಮುಖಂಡರಾದ ಎಸ್.ಆರ್. ಪಾಟೀಲ, ಕೊಟ್ರೇಶಪ್ಪ ಬಸೇಗಣ್ಣಿ, ಪ್ರಕಾಶ ಕೋಳಿವಾಡ, ಮಂಜುನಾಥ ತಂಬಾಕದ, ಈರಪ್ಪ ಲಮಾಣಿ, ಪ್ರಸನ್ನ ಹಿರೇಮಠ, ಪ್ರೇಮಾ ಪಾಟೀಲ, ಶ್ರೀಕಾಂತ ದುಂಡಿಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts