More

    ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

    ರಾಣೆಬೆನ್ನೂರ: ವ್ಯಾಪಾರ-ವಹಿವಾಟು ನಡೆಸುವ ವಿಚಾರದಲ್ಲಿ ಕಿರುಕುಳ ಕೊಡುತ್ತಿರುವ ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಇಲ್ಲಿಯ ಎಪಿಎಂಸಿ ವರ್ತಕರು ಗುರುವಾರ ಏಕಾಏಕಿ ಖರೀದಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ನಂತರ ಕಾರ್ಯದರ್ಶಿ ರಜೆ ಮೇಲೆ ತೆರಳಲು ಒಪ್ಪಿಗೆ ಸೂಚಿಸಿದ್ದರಿಂದ ಖರೀದಿ ಪ್ರಕ್ರಿಯೆ ಸುಗಮಗೊಂಡಿತು.

    ಆದರೆ, ವರ್ತಕರ ಪ್ರತಿಭಟನೆಯ ಅರಿವಿಲ್ಲದೆ ಎಪಿಎಂಸಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಬಂದ ರೈತರು ರೋಸಿಹೋಗಿ ಎಪಿಎಂಸಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ವರ್ತಕರ ಹಾಗೂ ರೈತರ ಪ್ರತಿಭಟನೆ ಮುಂದುವರಿಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸಿದ ಬಳಿಕ ವರ್ತಕರು ಖರೀದಿ ಆರಂಭಿಸಿದರು.

    ವರ್ತಕರ ಆರೋಪ…: ಕಾರ್ಯದರ್ಶಿ ಪರ್ವಿುಟ್ ಕೊಡುವ ವಿಚಾರದಲ್ಲಿ ಹಣ ವಸೂಲಿಗೆ ನಿಂತಿದ್ದಾರೆ. ಕೆಲ ವರ್ತಕರೊಂದಿಗೆ ಸೇರಿ ಸ್ಕಾಟ್​ಅನ್ನು ನೇಮಿಸದೇ ಎಪಿಎಂಸಿ ಸಮಿತಿಗೆ ಬರಬೇಕಾದ ಆದಾಯ ಕಡಿಮೆ ಮಾಡಿದ್ದಾರೆ. ಅಂಗಡಿ ಪರವಾನಗಿ ನವೀಕರಣ ಸೇರಿ ವಿವಿಧ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಲೇಬೇಕು. ಅಲ್ಲಿಯವರೆಗೆ ವ್ಯಾಪಾರ-ವಹಿವಾಟು ನಡೆಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದ್ದಿದ್ದರು.

    ಸಂಜೆ 4ರ ನಂತರ ಖರೀದಿ…: ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ ಕಳಸದ ಅಧ್ಯಕ್ಷತೆಯಲ್ಲಿ ಸಭೆ ಕರೆದರು. ವರ್ತಕರ ಸಂಘದ ಅಧ್ಯಕ್ಷ ಎಸ್.ಕೆ. ಉಪ್ಪಿನ ಮಾತನಾಡಿ, ಎಪಿಎಂಸಿ ಕಾರ್ಯದರ್ಶಿ ವರ್ಗಾವಣೆಯಾಗಲು ಸರ್ಕಾರಕ್ಕೆ ಪತ್ರ ಬರೆಯಬೇಕು. ಇಲ್ಲವೇ ಸದಸ್ಯರು ಮಾಡಿದ ವರ್ಗಾವಣೆ ಠರಾವು ಪತ್ರಕ್ಕೆ ಸಹಿ ಹಾಕಬೇಕು. ಇಲ್ಲವೇ ಕಾರ್ಯದರ್ಶಿಗೆ 10 ದಿನ ರಜೆ ಹೋಗಲು ಹೇಳಿ. ನಾವು ಬೇರೆ ಕಾರ್ಯದರ್ಶಿಯನ್ನು ತರುತ್ತೇವೆ ಎಂದು ಪಟ್ಟುಹಿಡಿದರು.

    ಅಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿ, ‘ಕಾರ್ಯದರ್ಶಿಯವರೇ ನೀವು ರಜೆ ಹೋಗುವುದು ಒಳ್ಳೆಯದು. ಉಪ ಕಾರ್ಯದರ್ಶಿಗೆ ಅಧಿಕಾರ ಹಸ್ತಾಂತರ ಮಾಡಿ’ ಎಂದು ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಕಾರ್ಯದರ್ಶಿ ಸತೀಶಕುಮಾರ ರಜೆ ಹೋಗುವುದಾಗಿ ಒಪ್ಪಿಕೊಂಡರು. ನಂತರ ವರ್ತಕರು ಖರೀದಿ ಆರಂಭಿಸಿದರು.

    ಕೈ ಮುಗಿದು ಕೇಳಿಕೊಂಡ ರೈತರು: ತಲಾ ಒಬ್ಬ ರೈತ 20ರಿಂದ 50 ಕ್ವಿಂಟಾಲ್​ಷ್ಟು ಮೆಕ್ಕೆಜೋಳ ಹಾಗೂ ಹತ್ತಿ ಮಾರಾಟಕ್ಕೆ ತಂದಿದ್ದೇವೆ. ಈಗ ಖರೀದಿ ಮಾಡದಿದ್ದರೆ ವಾಪಸ್ ತೆಗೆದುಕೊಂಡು ಹೋಗಲು ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮೆಕ್ಕೆಜೋಳವನ್ನು ಸಂಪೂರ್ಣ ರಸ್ತೆಯಲ್ಲಿ ಒಣ ಹಾಕಿದ್ದೇವೆ. ಹತ್ತಿಯನ್ನು ಅಂಗಡಿಗಳ ಎದುರು ಇಟ್ಟು ಬಂದಿದ್ದೇವೆ. ಮಳೆ ಬಂದರೆ ಸಂಪೂರ್ಣ ಉತ್ಪನ್ನ ಹಾಳಾಗುತ್ತದೆ. ನಮ್ಮ ಜೀವನದ ಜತೆ ಆಟವಾಡಬೇಡಿ. ದಯವಿಟ್ಟು ನಿಮ್ಮ ಜಗಳ ಬದಿಗಿಟ್ಟು ನಮ್ಮ ಉತ್ಪನ್ನ ಖರೀದಿಸಿ ಎಂದು ಕದರಮಂಡಲಗಿ ಗ್ರಾಮದ ರೈತ ಶಶಿಧರ ಛತ್ರದಮಠ ಕೈ ಮುಗಿದು ಕೇಳಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts