More

    ಜನರ ಬದುಕಿನ ರಕ್ಷಣೆ ಮುಖ್ಯ: ಸಚಿವ ಸತೀಶ್ ಜಾರಕಿಹೊಳಿ ಅಭಿಮತ

    ಮೈಸೂರು: ಧರ್ಮದ ರಕ್ಷಣೆ ಹೆಸರಿನಲ್ಲಿ ಅಧಿಕಾರ ಮಾಡುವವರಿಗಿಂತ ಬದುಕಿನ ರಕ್ಷಣೆ ಮಾಡುವುದು ಮುಖ್ಯ. ಗ್ಯಾರಂಟಿ ಯೋಜನೆಗಳಿಂದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಜನರ ಬದುಕು ಹಸನಾಗಿರುವ ಕಾರಣ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿ, ಧರ್ಮ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದೆಹಲಿಯಲ್ಲಿ ಕುಳಿತುಕೊಳ್ಳುವ ಕೆಲಸ ಬಿಟ್ಟರೆ ಈತನಕ ಬೇರೇನೂ ಇಲ್ಲ. ಅವರ ಧರ್ಮದ ಕೆಲಸಕ್ಕಿಂತ ನಮ್ಮ ರಕ್ಷಣೆ ಮಾಡುವುದು ಮುಖ್ಯ. ನಾವು ಬದುಕಿದರೆ ದೇಶ ಉಳಿಯಲಿದೆ ಎನ್ನುವುದನ್ನು ಅರಿಯಬೇಕು ಎಂದರು.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲಾಗಿದ್ದು, ಎಸ್‌ಟಿ ವರ್ಗದವರಿಗೆ 7500 ಕೋಟಿ ರೂ. ನೀಡಲಾಗಿದೆ. ಕೆಐಎಡಿಬಿಯಲ್ಲಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಭೂಮಿ ನೀಡಲಾಗುತ್ತಿದೆ. ಕೆಎಸ್‌ಎಫ್‌ಸಿಯಲ್ಲಿ 10 ಕೋಟಿ ರೂ. ಸಾಲ ನೀಡುತ್ತಿರುವುದರಿಂದ ಈ ಸಮಾಜ ಕೈಗಾರಿಕೋದ್ಯಮಿಗಳಾಗುತ್ತಿದ್ದಾರೆ ಎಂದರು.

    ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾಯಕ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಮುಗಿದ ಬಳಿಕ ಮತ್ತೊಂದು ಸಭೆ ಕರೆಯಲಾಗುವುದು. ಚಿಕ್ಕಮಾದು ಅವರ ಕಾಲದಿಂದಲೂ ಎರಡು ಜಿಲ್ಲೆಗಳೂ ಸಮಾಜದ ಪರವಾಗಿ ನಿಂತಿರುವುದನ್ನು ಮುಂದುವರಿಸಿಕೊಂಡು ಬರಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮೂವರಿಗೆ ಸಚಿವ ಸ್ಥಾನ, ಆರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಬೆಳಗಾವಿಯಲ್ಲಿ ಬೆನ್ನಿಗೆ ನಿಂತಿರುವ ರೀತಿಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ಜನರ ಜತೆಗೆ ನಿಲ್ಲಬೇಕು. ನಾಯಕ ಸಮಾಜಕ್ಕೆ ಹಲವಾರು ಯೋಜನೆಗಳನ್ನು ನೀಡಲಾಗಿದೆ. ನಾಯಕ ಸವಾಜದಿಂದ ಮುಖ್ಯಮಂತ್ರಿ ಆಗುವ ಅವಕಾಶ ಇರುವುದರಿಂದ ಬೆಂಬಲಿಸುವ ಕೆಲಸ ಮಾಡುತ್ತೇವೆ ಎಂದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಮುಖಂಡರಾದ ಕೆಲ್ಲಂಬಳ್ಳಿ ಶ್ರೀನಿವಾಸ ನಾಯಕ, ರಮ್ಮನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts