More

    ನಾಗರಬೆಟ್ಟ ಗುಡ್ಡ ರಕ್ಷಿಸಿ

    ಮುದ್ದೇಬಿಹಾಳ: ನಾಗರಬೆಟ್ಟ ಗುಡ್ಡ ರಕ್ಷಿಸಬೇಕು. ಗುಡ್ಡದಿಂದ ಅಕ್ರಮವಾಗಿ ಮಣ್ಣು ಬಳಸಿದವರಿಂದ ಅದರ ಮೊತ್ತ ವಸೂಲಿ ಮಾಡಬೇಕು ಮತ್ತು ರೈತರ ಹೊಲಗಳಿಗೆ ಹೋಗುವ ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿ ನಾಗರಬೆಟ್ಟ, ಬೂದಿಹಾಳ, ಮಲಗಲದಿನ್ನಿ ಗ್ರಾಮ ವ್ಯಾಪ್ತಿಯ ರೈತರು ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ತಾಲೂಕು ರೈತ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಅಧ್ಯಕ್ಷ ಎಂ.ಎಸ್. ಸಿದರಡ್ಡಿ ಮಾತನಾಡಿ, ನಾಗರಬೆಟ್ಟದ ಸರ್ವೆ ನಂಬರ್ 51ರಲ್ಲಿರುವ 185.25 ಎಕರೆ, 89ರಲ್ಲಿರುವ 24.01 ಎಕರೆಯಲ್ಲಿ ನೈಸರ್ಗಿಕ ಗುಡ್ಡಗಳಿವೆ. ನಿಜಾಮರ ಕಾಲದಲ್ಲಿ ಇವು ಕೊಡೇಕಲ್ ಜಾಗೀರುದಾರರ ಒಡೆತನದಲ್ಲಿದ್ದವು. 1978ರಲ್ಲಿ ಟೆನೆನ್ಸಿ ಕಾಯ್ದೆ ಜಾರಿಯಾದ ಮೇಲೆ ರೈತರಿಂದ ಪಟ್ಟು ತುಂಬಿಸಿಕೊಂಡು ಕೃಷಿ ಜಮೀನುಗಳನ್ನು ಅವರಿಗೆ ಬಿಟ್ಟುಕೊಡಲಾಗಿತ್ತು. ಆದರೆ ಎರಡೂ ಗುಡ್ಡಗಳು ಪೂರ್ತಿ ಖರಾಬ್ ಇದ್ದ ಕಾರಣ ಸರ್ಕಾರವೇ ಕೊಡೇಕಲ್ ಜಾಗೀರುದಾರರಿಗೆ ಪಟ್ಟನ್ನು ನೀಡಿ 1978ನೇ ಇಸ್ವಿಯಲ್ಲಿ ಸರ್ಕಾರ ಎಂದು ದೃಢೀಕರಿಸಿತ್ತು. 2005-06ರಲ್ಲಿ ಆಗಿನ ತಹಸೀಲ್ದಾರ್‌ರ ತಪ್ಪು ಮಾಹಿತಿಯಿಂದಾಗಿ ಕೊಡೇಕಲ್ ಜಾಗೀರುದಾರರ ವಂಶಸ್ಥರಿಗೆ ವಾರಸಾ ಮಾಡಲಾಗಿತ್ತು. ಜಾಗೀರುದಾರರು ಗುಡ್ಡಗಳನ್ನು ಮಾರಲು ಯತ್ನಿಸಿದ್ದರು. ವಿಷಯ ತಿಳಿದ ಗ್ರಾಮಸ್ಥರು ಗುಡ್ಡಗಳನ್ನು ಉಳಿಸಿಕೊಳ್ಳಲು 2012ರಿಂದ ಇಲ್ಲಿಯವರೆಗೆ ಹೋರಾಟ ಮಾಡುತ್ತ ಬಂದಿದ್ದಾರೆ ಎಂದರು.

    ಈಗ ಪಹಣಿಯಲ್ಲಿ ಗೆರೆಯ ಮೇಲಿದ್ದ ಸರ್ಕಾರ ಕಡಿಮೆ ಮಾಡಿ ಜಾಗೀರುದಾರರನ್ನು ಗೆರೆಯ ಮೇಲೆ ತಂದಿದ್ದಾರೆ. ಎರಡೂ ಗುಡ್ಡ ಸಂಪೂರ್ಣ ಸರ್ಕಾರ ಎಂದು ದಾಖಲಾಗಿರುವುದರಿಂದ ಸರ್ಕಾರ ಗೆರೆಯ ಕೆಳಗಿರುವ ಜಾಗೀರುದಾರರ ಹೆಸರು ತೆಗೆದು ಹಾಕಬೇಕು. ರೈತರು ತಮ್ಮ ಹೊಲಗಳಿಗೆ ಹೋಗಿ ಕೃಷಿ ಚಟುವಟಿಕೆ ನಡೆಸಲು ಕೆಲವರು ರಸ್ತೆಗಳನ್ನು ಬಂದ್ ಮಾಡಿ ತೊಂದರೆ ಕೊಡುತ್ತಿದ್ದಾರೆ. ತಹಸೀಲ್ದಾರ್ ಕೂಡಲೇ ಮಧ್ಯಪ್ರವೇಶಿಸಿ ಹೊಲದ ದಾರಿ ಸಮಸ್ಯೆ ಬಗೆಹರಿಸಿ ರೈತರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ಬೇಡಿಕೆ ಈಡೇರುವವರೆಗೂ ಹಗಲು, ರಾತ್ರಿ ಸತ್ಯಾಗ್ರಹ ನಡೆಸಲಾಗುತ್ತದೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನೂ ಸ್ಥಳದಲ್ಲೇ ಮಾಡುತ್ತೇವೆ ಎಂದರು.

    ರೈತರಾದ ಗ್ಯಾನಪ್ಪ ರಕ್ಕಸಗಿ, ಶರಣಪ್ಪ ದಡ್ಡಿ, ಪರಮಪ್ಪ ಗುರಿಕಾರ, ಶಾಂತಗೌಡ ಸಿದರಡ್ಡಿ, ಹಣಮಂತ ಜಾಲಿಬೆಂಚಿ, ನಿಂಗಪ್ಪ ಗುರಿಕಾರ, ಬಸಪ್ಪ ಟಕ್ಕಳಕಿ, ನಿಂಗಪ್ಪ ರಕ್ಕಸಗಿ, ಕೆ.ಬಿ. ಮುರಾಳ, ಮಾಂತಯ್ಯ ಮಠ, ಶಂಕರಗೌಡ ಸಿದರಡ್ಡಿ, ಜುಮ್ಮಣ್ಣ ಟಕ್ಕಳಕಿ, ನಾನಾಗೌಡ ಸಿದರಡ್ಡಿ, ಅಮರಯ್ಯ ಶಿವಯೋಗಿಮಠ, ಸಿದ್ದು ಗುರಿಕಾರ, ಪರಮಣ್ಣ ಗುರಿಕಾರ, ಈಶ್ವರ ದೋರನಳ್ಳಿ, ಸಂಗಪ್ಪ ಕಂಬಳಿ, ನಿಂಗಪ್ಪ ಗುರಿಕಾರ, ಹಣಮಂತ ಗುರಿಕಾರ, ಯಮನಪ್ಪ ನಂದ್ಯಾಳ, ಮಲ್ಲಪ್ಪ ದೋರನಳ್ಳಿ, ಶಿವರಾಜ ಬಿರಾದಾರ, ಸುದೀಪ ಬಿರಾದಾರ, ಬಸವರಾಜ ಅಸ್ಕಿ, ಹಣಮಂತ ಗೂಡ್ಲಮನಿ ಸೇರಿದಂತೆ ನಾಗರಬೆಟ್ಟ, ಬೂದಿಹಾಳ, ಮಾವಿನಭಾವಿ ಗ್ರಾಮಗಳ 40ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts