More

    ಬಿಲ್ಕಿಸ್‌ಬಾನು ಅತ್ಯಾಚಾರಿಗಳ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ : ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ

    ವಿಜಯಪುರ: ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

    ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಧುರೀಣೆ ದು. ಸರಸ್ವತಿ ಮಾತನಾಡಿ, ಗುಜರಾತ ಸರ್ಕಾರ ಅತ್ಯಾಚಾರಿಗಳು, ಕೊಲೆಗಡುಕರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಮೂಲಕ ವ್ಯವಸ್ಥೆ ಬಗ್ಗೆ ಜುಗುಪ್ಸೆ ಬರುವಂತೆ ಮಾಡಿದೆ. ಇದು ನ್ಯಾಯ ವ್ಯವಸ್ಥೆಯ ಅಣಕವಾಗಿದೆ. ಬಿಡುಗಡೆ ಮಾಡಿರುವುದನ್ನು ಕೂಡಲೇ ವಾಪಸ್ಸು ಪಡೆದು ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ಕೊಲೆಗಡುಕರನ್ನು ಸ್ವಾಗತಿಸಿ, ಸಹಿ ಹಂಚಿ ಹಾರ ಹಾಕಿ ಮೆರವಣಿಗೆ ಮಾಡಿರುವುದನ್ನು ನೋಡಿದರೆ ಇದು ಸ್ವಾತಂತ್ರ್ಯ ಭಾರತಕ್ಕೆ ಮಾಡಿರುವ ಅವಮಾನವಾಗಿದೆ ಎಂದರು.
    ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವ ಮತ್ತು ಅಪರಾಧಿಗಳನ್ನು ಶಿಕ್ಷಿಸಬೇಕಿದ್ದ ಸರ್ಕಾರಗಳೇ ಅಪರಾಧಿಗಳಿಗೆ ಆಶ್ರಯ ನೀಡಿರುವುದು ದುರಂತವಾಗಿದೆ. ಇದನ್ನು ದೇಶದ ಜನತೆ ಪ್ರಶ್ನಿಸಬೇಕಿದೆ ಎಂದರು.

    ಸಾಹಿತಿ ಡಾ. ಎಚ್.ಎಸ್. ಅನುಪಮಾ ಮಾತನಾಡಿ, ರಾಜಕೀಯವಾಗಿ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿವೆ. ಆದರೆ ಅಪರಾಧಿಗಳಿಗೆ ಈ ರೀತಿ ಬಿಡುಗಡೆ ಮಾಡುವ ಮೂಲಕ ಸರ್ಕಾರಗಳು ಸ್ವಾತಂತ್ರ್ಯ ಮತ್ತ ಸಂವಿಧಾನಕ್ಕೆ ಅಪಮಾನ ಮಾಡಿವೆ ಎಂದರು.

    ಪ್ರಗತಿಪರ ಸಂಘಟನೆಗಳ ವೇದಿಕೆ ಮುಖಂಡರಾದ ಭೀಮಶಿ ಕಲಾದಗಿ, ಬಿ. ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಮತ್ತು ಗುಜರಾತ ಸರ್ಕಾರಗಳು ಬಿಲ್ಕಿಸ್ ಬಾನು ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿವೆ. ಒಂದೆಡೆ ಬೇಟಿ ಬಚಾವೊ ಬೇಟಿ ಪಢಾವೋ ಎನ್ನುವ ಮೋದಿಯವರು ಈ ಘಟನೆಯಲ್ಲಿ ಮೌನ ವಹಿಸಿರುವುದು ಅವರ ಕಪಟತನಕ್ಕೆ ಸಾಕ್ಷಿಯಾಗಿದೆ. ಜನತೆ ಈ ಕೋಮುವಾದಿ ಮತ್ತು ಫ್ಯಾಸಿವಾದಿ ಸರ್ಕಾರಗಳನ್ನು ಕಿತ್ತೊಗೆಯಬೇಕು. ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುತ್ತಾ ಒಗ್ಗಟ್ಟಾಗಬೇಕಿದೆ ಎಂದರು.

    ನ್ಯಾಯವಾದಿ ಕೆ.ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಪ್ರೊ.ಭೂಮಿಗೌಡ, ಸುರೇಖಾ ರಜಪೂತ, ಶ್ರೀನಾಥ ಪೂಜಾರಿ, ಅನಿಲ ಹೊಸಮನಿ, ಶಿವರಂಜಿನಿ, ಫಾದರ್ ಟಿಯೊಲ್, ಸದನಾಂದ ಮೋದಿ, ಜಿ.ಜಿ.ಗಾಂಧಿ, ಮೋಹನ್ ಮೇಟಿ ಮಾತನಾಡಿದರು. ದಸ್ತಗೀರ ಉಕ್ಕಲಿ, ಎಚ್.ಟಿ.ಭರತಕುಮಾರ, ಬಾಳು ಜೇವೂರ, ರವಿ ಕಿತ್ತೂರ, ಪ್ರಭುಗೌಡ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts