More

    ಪ್ರಗತಿಯತ್ತ ಸಾಗಿದೆ ಭಾರತ

    ದೇವದುರ್ಗ: ಭಾರತವು 2014ರವರೆಗೆ ದುರ್ಬಲ ಆರ್ಥಿಕ ದೇಶ ಎನ್ನುವಂಥ ಕುಖ್ಯಾತಿಗೆ ಪಾತ್ರವಾಗಿತ್ತು. ಆನಂತರ ಪ್ರಧಾನಿ ನರೇಂದ್ರ ಮೋದಿ ಪರಿಶ್ರಮದಿಂದ ಈಗ ಜಗತ್ತಿನ ಐದನೇ ಬಲಿಷ್ಠ ರಾಷ್ಟ್ರವಾಗಿದೆ. ಮೋದಿ ಅವರ ಮೂರನೇ ಅವಧಿಗೆ ಭಾರತ ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರು ಪೀಠದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಲ ಸೌಕರ್ಯ, ಅತ್ಯಾಧುನಿಕ ರಸ್ತೆಗಳ ನಿರ್ಮಾಣ, ವೇಗದ ಅಭಿವೃದ್ಧಿ ಕಾರ್ಯ, ರೈಲ್ವೆಜಾಲ ವೃದ್ಧಿ ಸೇರಿ ಹಲವು ದಿಟ್ಟ ಕ್ರಮಗಳಿಂದ ಭಾರತ ಅಭಿವೃದ್ಧಿಯತ್ತ ಮುನ್ನುಗುತ್ತಿದ್ದು, ಇಡೀ ಜಗತ್ತು ಭಾರತದತ್ತ ತಿರುಗಿ ನೀಡುತ್ತಿದೆ. ಮೋದಿ ಬರುವ ಮುನ್ನ ಭಾರತ ಆರ್ಥಿಕ ಅನಿಶ್ಚಿತತೆ ಅನುಭವಿಸುತ್ತಿತ್ತು. ಈಗ ಭಾರತವನ್ನು ನೋಡುವಂತಹ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ. ಮೋದಿ ದೂರ ದೃಷ್ಟಿಯಿಂದ ದೇಶ ಪ್ರಗತಿಯತ್ತ ಸಾಗಿದೆ ಎಂದರು.

    ಹಾಲುಮತ ಸಮುದಾಯಕ್ಕೆ ನಿಸರ್ಗದೊಂದಿಗೆ ಬೆರೆತು, ಮಳೆ, ಬೆಳೆ, ನಕ್ಷತ್ರ, ಬರಗಾಲ ರಾಜಯೋಗದ ಬಗ್ಗೆ ಭವಿಷ್ಯ ನುಡಿವಂತ ಶಕ್ತಿಯಿದೆ. ಎಲ್ಲದರಲ್ಲೂ ದೈವತ್ವ ಕಾಣುವುದು ಹಿಂದು ಧರ್ಮದ ಸಂಸ್ಕೃತಿಯಾಗಿದೆ. ಹಾಲುಮತದವರು ಕುರಿ ಇಕ್ಕೆಯಲ್ಲಿ ದೇವರನ್ನು ಕಂಡವರು. ಕನಕದಾಸರು ಭಕ್ತಿ ಸಾಹಿತ್ಯಕ್ಕೆ ತಮ್ಮದೆ ಕೊಡುಗೆ ನೀಡಿದ್ದರೆ, ಹಕ್ಕುಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡುವ ಮೂಲಕ ಉತ್ತಮ ಆಡಳಿತ ಸಾಮ್ರಾಜ್ಯ ನಿರ್ಮಿಸಿದ್ದರು. ಪ್ರತಿಯೊಂದು ರಂಗದಲ್ಲೂ ಕೂಡ ಹಾಲುಮತ ಸಮುದಾಯ ತನ್ನದೆ ಕೊಡುಗೆ ನೀಡಿದೆ. ಕನಕದಾಸರು ಜನಿಸಿದಂತಹ ಬಾಡಾ ಗ್ರಾಮದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂರು ಜಿಲ್ಲೆಗಳಲ್ಲಿ ಕುರುಬ ಸಮುದಾಯ ಅತ್ಯಂತ ಹಿಂದುಳಿದಿದ್ದು, ಗೊಂಡ ಗೊಲ್ಲ ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎನ್ನುವಂತಹ ಒತ್ತಾಯವಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಸಿದ್ದರಾಮಾನಂದ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದರಾದ ರಾಜಾ ಅಮರೇಶ್ವರ ನಾಯಕ, ಉಮೇಶ್ ಜಾದವ್, ಶಾಸಕರಾದ ದೊಡ್ಡನಗೌಡ ಪಾಟೀಲ್, ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್, ವಿಪಕ್ಷ ಸದಸ್ಯ ರಘುನಾಥ ರಾವ್ ಮಲ್ಕಾಪುರೆ, ಶರಣು ತಳ್ಳಿಕೆರೆ, ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಶಿವನಗೌಡ ನಾಯಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts