More

    ಕಕದಲ್ಲಿದೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ

    ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಅನ್ವೇಷಿಸಲು ಸಿಯುಕೆ ಪ್ರವಾಸೋದ್ಯಮ ವಿಭಾಗ ಕೆಲಸ ಮಾಡಬೇಕು ಎಂದು ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.

    ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗ ರಾಷ್ಟ್ರೀಯ ಪ್ರವಾಸೋದ್ಯಮ ದಿನ ನಿಮಿತ್ತ ಆಯೋಜಿಸಿದ್ದ ಎರಡು ದಿನದ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದ ಅವರು, ಬಸವಕಲ್ಯಾಣ ವಿಶ್ವದ ಮೊದಲ ಸಂಸತ್ತಿನ ಉಗಮ ಸ್ಥಾನ. ಸನ್ನತಿ ಶ್ರೇಷ್ಠ ಬೌದ್ಧ ಕೇಂದ್ರ ಮತ್ತು ಚಂದ್ರಲಾಂಬಾ ದೇವಿ ದೇವಸ್ಥಾನ, ಅಂಜನಾದ್ರಿ ಹನುಮಂತನ ಜನ್ಮಸ್ಥಳ ಹೀಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಪ್ರೇಕ್ಷಣೀಯ ಸ್ಥಳಗಳು ಕಲ್ಯಾಣ ಕರ್ನಾಟಕದಲ್ಲಿವೆ ಎಂದರು.

    ಬಸವಕಲ್ಯಾಣದಲ್ಲಿ ಬೃಹತ್ ಅನುಭವ ಮಂಟಪ ಸಂಕೀರ್ಣ ನಿರ್ಮಿಸುತ್ತಿದ್ದು, ಇಡೀ ನಗರ ಅಭಿವೃದ್ಧಿ ಹೊಂದಲಿದೆ. ಹತ್ತು ವರ್ಷಗಳಲ್ಲಿ ಇದು ಮಾಸಿಕ ಸುಮಾರು ೧೦೦೦೦ ಪ್ರವಾಸಿಗರನ್ನು ಆಕರ್ಷಿಸಲಿದೆ. ೨೦೦೦ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಮಾಸಿಕ ವಹಿವಾಟು ಸುಮಾರು ೨೦೦ ಕೋಟಿ ರೂ. ಆಗಲಿದೆ ಎಂದು ತಿಳಿಸಿದರು.

    ತುಮಕೂರು ವಿಶ್ವವಿದ್ಯಾಲಯದ ಪ್ರೊ.ಎಂ. ಕೊಟ್ರೇಶ್ ಮಾತನಾಡಿ, ಕಕದ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಸೂಕ್ತ ಅಧ್ಯಯನ ಅಗತ್ಯ. ಅಪಾರ ಸಾಮರ್ಥ್ಯವಿದ್ದರೂ ಈವರೆಗೆ ಸಮಗ್ರ ಅಧ್ಯಯನ ಮತ್ತು ಅಭಿವೃದ್ಧಿ ಕೆಲಸ ನಡೆದಿಲ್ಲ. ನಾಗಾವಿ ೯-೧೧ನೇ ಶತಮಾನದಲ್ಲಿ ದೊಡ್ಡ ಘಟಿಕಾಸ್ಥಾನ (ಶಿಕ್ಷಣ ಕೇಂದ್ರ) ಆಗಿತ್ತು. ನಾಗಾವಿ, ಮುದನೂರು, ಬೀದರ್ ಮತ್ತು ಕಾಳಗಿಯಲ್ಲಿನ ನೈಸರ್ಗಿಕ ನೀರಿನ ಕಾರಂಜಿಗಳು ಆಶ್ಚರ್ಯಕರವಾಗಿವೆ. ಏಕೆಂದರೆ ವರ್ಷವಿಡೀ ಹರಿಯುತ್ತವೆ. ಕಕ ಸಮೃದ್ಧ ಮತ್ತು ಶ್ರೀಮಂತ ಪ್ರದೇಶವಾಗಿದ್ದು, ಹಿಂದುಳಿದಿರುವಿಕೆಯ ಗ್ರಹಿಕೆ ಬದಲಾಯಿಸಿ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಪ್ರವಾಸೋದ್ಯಮ ಭಾರತದ ಜಿಡಿಪಿಗೆ ಪ್ರತಿವರ್ಷ ೨ ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆರ್ಥಿಕ ಪ್ರಗತಿ ಮೇಲೆ ಗುಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಒಂದು ಸ್ಥಳಕ್ಕೆ ಪ್ರವಾಸಿಗರು ಭೇಟಿ ನೀಡಿದರೆ ವಸತಿ, ಉಪಾಹಾರ, ಸಾರಿಗೆ, ಸ್ಥಳೀಯ ಕುಶಲಕರ್ಮಿಗಳು ಮತ್ತು ಉಡುಪುಗಳು, ಮಾರ್ಗದರ್ಶಿಗಳು ಮತ್ತು ಅಂಗಡಿ ಮಾಲೀಕರು ಹೀಗೆ ಎಲ್ಲರೂ ಪ್ರಯೋಜನ ಪಡೆಯುತ್ತಾರೆ ಎಂದು ತಿಳಿಸಿದರು.

    ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಡಿ. ಗೌತಮ ಪ್ರಾಸ್ತಾವಿಕ ಮಾತನಾಡಿ, ಈ ವರ್ಷದ ಪ್ರವಾಸೋದ್ಯಮ ದಿನದ ಧ್ಯೇಯವಾಕ್ಯ ಸುಸ್ಥಿರ ಪ್ರಯಾಣ, ಸಮಯರಹಿತ ನೆನಪುಗಳು ಎಂದು ಹೇಳಿದರು.

    ವ್ಯವಹಾರ ಅಧ್ಯಯನ ನಿಕಾಯ ಡೀನ್ ಪ್ರೊ.ಪುಷ್ಪಾ ಸವದತ್ತಿ ಅವರು ಆರ್ಥಿಕ ಅಭಿವೃದ್ಧಿಯಲ್ಲಿ ಗ್ರಾಮೀಣ ಮತ್ತು ಕೃಷಿ ಪ್ರವಾಸೋದ್ಯಮ ಪಾತ್ರ ಕುರಿತು ಮಾತನಾಡಿದರು. ಡಾ.ಮಹಮ್ಮದ್ ಜೋಹೈರ್, ಡಾ.ಸುಮಾ ಸ್ಕಾರಿಯಾ, ಡಾ.ಗಣಪತಿ ಸಿನ್ನೂರ, ಡಾ.ಪಾಂಡುರAಗ ಪತ್ತಿ, ಡಾ.ಶಿವಕುಮಾರ ಬೆಳ್ಳಿ, ಡಾ.ಶಿವ ಎಂ., ಡಾ.ನವೀನಕುಮಾರ ಟಿ.ಜಿ. ಇತರರಿದ್ದರು.

    ಡಾ.ನಟರಾಜ ಪಟ್ಟೇದ ಸ್ವಾಗತಿಸಿದರು. ಡಾ.ಜಗದೀಶ ಬಿರೇದಾರ್ ವಂದಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟçಗೀತೆ ಮತ್ತು ನಾಡಗೀತೆ ಹಾಡಿದರು.

    ಎರಡು ವರ್ಷಗಳಲ್ಲಿ ನಮ್ಮ ಪ್ರಯತ್ನದಿಂದಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯ ಹೆಚ್ಚಾಗಿದೆ. ಮೊದಲು ಪ್ರತಿ ತಿಂಗಳು ನೂರಾರು ಜನ ಮಾತ್ರ ಭೇಟಿ ನೀಡುತ್ತಿದ್ದರು. ಆದರೀಗ ೧.೫ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಸಿಯುಕೆ ಪ್ರವಾಸೋದ್ಯಮ ವಿಭಾಗ ಕಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಮ್ಮ ಜತೆಗೂಡಿ ಕೆಲಸ ಮಾಡಲು ಮುಂದೆ ಬರಬೇಕು.
    ಡಾ.ಬಸವರಾಜ ಪಾಟೀಲ್ ಸೇಡಂ ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts