More

    ದ್ವಿತಳಿಯಿಂದ ಗುಣಮಟ್ಟದ ರೇಷ್ಮೆ ಉತ್ಪಾದನೆ ಸಾಧ್ಯ

    ಮೈಸೂರು: ರೈತರು ದ್ವಿತಳಿ ಹುಳು ಬೆಳೆಸುವುದರಿಂದ ಗುಣಮಟ್ಟದ ಅಧಿಕ ರೇಷ್ಮೆ ಇಳುವರಿ ಪಡೆಯಲು ಸಾಧ್ಯ ಎಂದು ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಎಲ್.ಕುಸುಮಾ ಹೇಳಿದರು.

    ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೇಷ್ಮೆ ಕೃಷಿ ನೂತನ ಸಾಕಣೆ ಪದ್ಧತಿಗಳು ಮತ್ತು ಮಾರುಕಟ್ಟೆ ವ್ಯವಸ್ಥೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಎಫ್‌ಸಿ 1, ಎಫ್‌ಸಿ 2(ದ್ವಿತಳಿ) ಬೆಳೆಯುವುದರಿಂದ ಗುಣಮಟ್ಟದ ಗೂಡು ಉತ್ಪಾದನೆ ಮಾಡಿ ರೈತರು ಹೆಚ್ಚು ಲಾಭ ಗಳಿಸಬಹುದು. ರೈತರು ‘ವಿ-1’ ತಳಿ ಹಿಪ್ಪನೇರಳೆ ಗಿಡಗಳನ್ನು ಬೆಳೆಯಬೇಕು. ಹುಳು ಸಾಕಣೆ ಮನೆ, ಸುತ್ತಮುತ್ತಲಿನ ಪರಿಸರ ಮತ್ತು ಸಾಮಗ್ರಿಗಳ ಸೋಂಕು ನಿವಾರಣೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದು ರೋಗಗಳು ಬರದಂತೆ ತಡೆಗಟ್ಟಲು ಬಹಳ ಮುಖ್ಯ ಕ್ರಮಗಳಾಗಿವೆ ಎಂದರು.

    ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್.ಯೋಗೇಶ್ ಮಾತನಾಡಿ, ರೇಷ್ಮೆ ತ್ಯಾಜ್ಯಗಳನ್ನು ಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರವಾಗಿ ಪರಿವರ್ತಿಸಿ ಮರುಬಳಕೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಮುಂದಾಗಬೇಕು ಎಂದರು.
    ರೇಷ್ಮೆ ತಜ್ಞೆ ಡಾ.ಮೇಘಲಾದೇವಿ ಮಾತನಾಡಿ, ರೇಷ್ಮೆ ಬೆಳೆ ಮತ್ತು ಹುಳುಗಳಿಗೆ ಬರುವ ರೋಗ ಮತ್ತು ಕೀಟಗಳ ನಿರ್ವಹಣೆಗೆ ಪರತಂತ್ರ ಜೀವಿಗಳನ್ನು ಬಳಸಬೇಕು. ಜತೆಗೆ ಸಮಗ್ರ ಹತೋಟಿ ಕ್ರಮ ಅಳವಡಿಸಿಕೊಳ್ಳಬೇಕು ಎಂದರು.

    ರೇಷ್ಮೆ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರ ಮಾತನಾಡಿ, ರೇಷ್ಮೆ ಇಲಾಖೆಯಿಂದ ನರೇಗಾ ಯೋಜನೆಯಡಿ ರೇಷ್ಮೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ಟ್ರೆಂಚಿಂಗ್ ಮತ್ತು ಮಲ್ಚಿಂಗ್ ಪದ್ಧತಿಯಲ್ಲಿ ರೇಷ್ಮೆ ಬೆಳೆಯಲು ಮುಂದಾಗಬೇಕು. ರೇಷ್ಮೆ ಮನೆ ನಿರ್ಮಿಸಲು ಮತ್ತು ಇತರ ಪರಿಕರಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಶೆಟ್ಟನಾಯಕನಹಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್.ಬಿ.ಸ್ವಾಮಿ ಮಾತನಾಡಿ, ತಮ್ಮ 4 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆದು ಪ್ರತಿ ಬ್ಯಾಚ್‌ನಲ್ಲಿ 300 ಮೊಟ್ಟೆ ಸಾಕಣೆ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

    ಸಹಾಯಕ ಕೃಷಿ ನಿರ್ದೇಶಕಿ ವಜ್ರೇಶ್ವರಿ ಎಸ್.ಕುಲಕರ್ಣಿ, ಕೃಷಿ ಅಧಿಕಾರಿ ಎಲ್.ಮಾಲತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts