More

    ಗಡಿ ತಡೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ

    ಬೈಂದೂರು: ಕರೊನಾ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್ ನಿಯಮದಿಂದಾಗಿ ಶಿರೂರಿನ ಆಸುಪಾಸಿನ ಉತ್ತರ ಕನ್ನಡ ಜಿಲ್ಲೆಗೆ ಸೇರಿದ ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಹಾಗೂ ಇತರ ಅಗತ್ಯ ಕಾರ್ಯಗಳಿಗೆ ತೆರಳಲಾಗದೆ ತೊಂದರೆಗೆ ಒಳಗಾಗಿದ್ದಾರೆ.

    ಗೋರ್ಟೆ, ಬೆಳಕೆ, ಸರ್ಪನಕಟ್ಟೆ ಮುಂದಾದ ಕಡೆಯ ವಿದ್ಯಾರ್ಥಿಗಳು ಪ್ರೌಢಶಾಲೆ, ಪಿ.ಯು.ಸಿ. ಹಾಗೂ ಪದವಿ ತರಗತಿಗಾಗಿ ಶಿರೂರು ಹಾಗೂ ಬೈಂದೂರಿಗೆ ತೆರಳುತ್ತಾರೆ. ಈಗಾಗಲೆ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನ ಅಥವಾ ಅನುತ್ತೀರ್ಣರಾದವರು ಜುಲೈ 31ರೊಳಗೆ ಆಯಾ ಕಾಲೇಜಿಗೆ ಬಂದು ಹಣ ಪಾವತಿಸಬೇಕು. ಆದರೆ ಗಡಿಯಲ್ಲಿ ವಾಹನ ಪ್ರವೇಶ ನಿರ್ಬಂಧಿಸಿದ ಕಾರಣ ಪಿ.ಯು.ಸಿ. ವಿದ್ಯಾರ್ಥಿಗಳು ಕಾಲೇಜಿಗೆ ಬರಲಾಗದೆ ಅತಂತ್ರರಾಗಿದ್ದಾರೆ.

    ಕಳೆದ ಎರಡು ದಿನಗಳಿಂದ ಶಿರೂರು ಟೋಲ್‌ಗೇಟ್‌ನಲ್ಲಿ ದ್ವಿಚಕ್ರ ವಾಹನಕ್ಕೂ ಬರಲು ಅವಕಾಶ ನೀಡುತ್ತಿಲ್ಲ. ಈ ಬಾರಿ ಜಿಲ್ಲಾಡಳಿತ ಟೋಲ್‌ಗೇಟ್ ಬಳಿ ತಪಾಸಣಾ ದ್ವಾರ ನಿರ್ಮಿಸಿದೆ. ಈ ಗೇಟ್‌ನಿಂದ ಆಚೆಗೆ ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹದಿನೈದು ಮನೆಗಳಿವೆ. ಅವರು ಎಲ್ಲ ಅಗತ್ಯ ಕೆಲಸ, ಬ್ಯಾಂಕ್, ಶಾಲೆ, ಸೊಸೈಟಿಗಳಿಗೆ ಶಿರೂರಿಗೆ ಬರಬೇಕು. ಆದರೆ ಗಡಿ ಸೀಲ್‌ಡೌನ್ ಆದ ಬಳಿಕ ಗೇಟ್‌ನಲ್ಲಿ ಶಿರೂರು ಗ್ರಾಮದವರಿಗೂ ಅವಕಾಶ ಕಲ್ಪಿಸದಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ.
    ಕಾನೂನು, ನಿಯಮಗಳ ಗೊಂದಲದಲ್ಲಿ ವಾಸ್ತವತೆ ಅರಿತು ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಶಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts