More

    ಒಂದು ಸ್ಕೀಂನಲ್ಲಿ ಬ್ಲಾಕ್‌ಲಿಸ್ಟ್, ಇನ್ನೊಂದರಲ್ಲಿ ಪಾಸ್!ಸಮಾಜ ಕಲ್ಯಾಣ ಇಲಾಖೆ ಕಾರ್ಯವೈಖರಿ ವ್ಯಕ್ತವಾಗಿದೆ ಅನುಮಾನ

    ವೇಣುವಿನೋದ್ ಕೆ.ಎಸ್.ಮಂಗಳೂರು
    ಇಲಾಖೆ ಒಂದೇ… ಆದರೆ ಒಂದು ಕಾರ್ಯಕ್ರಮದಡಿ ಬ್ಲಾಕ್‌ಲಿಸ್ಟ್‌ಗೆ ಹಾಕಲಾದ ಗುತ್ತಿಗೆದಾರ ಇನ್ನೊಂದು ಸ್ಕೀಂನಡಿಯಲ್ಲಿ ಟೆಂಡರ್ ಪಡೆದುಕೊಳ್ಳಬಹುದು!
    ಇದು ದ.ಕ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಕಾರ್ಯವೈಖರಿ.

    ಕೊರಗ ಹಾಗೂ ಮಲೆಕುಡಿಯ ಜನಾಂಗದವರು ಆದಿವಾಸಿಗಳು, ಅರಣ್ಯದಲ್ಲಿ ಲಭಿಸುವ ಒಂದು ವಿಧದ ಕಾಡುಬಳ್ಳಿ, ಬೆತ್ತ ಬಳಸಿ ಬುಟ್ಟಿ ಹೆಣೆಯುವ ಕಾಯಕದವರು. ಅವರಿಗೆ ವರ್ಷದಲ್ಲಿ 6 ತಿಂಗಳು ಪೌಷ್ಟಿಕ ಆಹಾರ ಯೋಜನೆ ಅನೇಕ ವರ್ಷಗಳಿಂದ ಇದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ಹತ್ತು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಆದರೆ, 2019ರಲ್ಲಿ ಗಿರಿಜನರಿಗೆ ನೀಡಲಾದ ಆಹಾರವಸ್ತುಗಳೇ ಕಳಪೆ ಎಂಬ ದೂರುಗಳು ಕೇಳಿಬಂದಿದ್ದವು. ಕೊರಗ ಮುಖಂಡರೂ ಅದರ ಬಗ್ಗೆ ದೂರು ಸಲ್ಲಿಸಿದ್ದು ಗುತ್ತಿಗೆದಾರರಿಗೆ ಇಲಾಖೆ ನೋಟಿಸ್ ಕಳುಹಿಸಿತ್ತು. ಅದಕ್ಕೆ ಉತ್ತರಿಸಿದ ಗುತ್ತಿಗೆದಾರರು ಆಹಾರ ಬದಲಾಯಿಸಿ ಕೊಡುವುದಾಗಿ ಹೇಳಿದ್ದರು.
    ಬಳಿಕ 2020-21ರ ಸಾಲಿನ ಮಲೆಕುಡಿಯರು, ಕೊರಗರ ಆಹಾರ ಒದಗಿಸುವ ಕಾರ್ಯಕ್ರಮಕ್ಕೆ ಕಳೆದ ವರ್ಷ ಜೂನ್ ವೇಳೆ ಟೆಂಡರ್ ಕರೆಯಲಾಗಿತ್ತು, ನಾಲ್ವರು ಗುತ್ತಿಗೆದಾರರು ಭಾಗವಹಿಸಿದರು. ಅದರಲ್ಲಿ ಕಳಪೆ ಆಹಾರವಸ್ತು ಒದಗಿಸಿದವರ ಹೆಸರೂ ಇತ್ತು. ಅಧಿಕಾರಿಗಳು ಚರ್ಚಿಸಿ, ನಿರ್ಧಾರ ತೆಗೆದುಕೊಂಡರು.

    ಕಪ್ಪು ಪಟ್ಟಿಗೆ ಸೇರ್ಪಡೆ: ಕಳೆದ ಮೇ 18ರಂದು ಅಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರ ನಡವಳಿಯಲ್ಲಿ ನಮೂದಾಗಿದೆ. ಒಕ್ಕಣೆ ಹೀಗಿದೆ: ಸದ್ರಿ ಗುತ್ತಿಗೆದಾರರು 2019-20ನೇ ಸಾಲಿನಲ್ಲಿ ಕಳಪೆ ಆಹಾರ ಸಾಮಗ್ರಿ ಸರಬರಾಜು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯದ ಸಹಾಯಕ ನಿರ್ದೇಶಕರು ವರದಿ ನೀಡಿದ್ದು ಕೊರಗ ಸಂಘಟನೆಗಳೂ ಕಳಪೆ ಆಹಾರವಸ್ತು ನೀಡಿರುವ ಬಗ್ಗೆ ದೂರು ನೀಡಿದ್ದಾರೆ. ಟೆಂಡರ್‌ದಾರರಿಗೆ ಮೂರು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ದೋಷವಿರುವ ಆಹಾರ ವಸ್ತು ವಾಪಸ್ ಪಡೆದು ಬದಲಾಯಿಸಿಕೊಡಲು ಒಪ್ಪಿದ್ದಾರೆ. ಈ ಬೆಳವಣಿಗೆಗಳ ಪರಿಣಾಮ ಸದ್ರಿಯವರನ್ನು ಕಪ್ಪುಪಟ್ಟಿಗೆ ಸೇರಿಸಲು ಬೆಂಗಳೂರಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ. ಹಾಗಾಗಿ ಈ ಹಂತದಲ್ಲಿಯೇ ಅವರನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ.

    ಇಲ್ಲಿ ಸಲ್ಲದವರು ಅಲ್ಲಿ ಸಲ್ಲುವರಯ್ಯ!: ಅಚ್ಚರಿ ಎಂದರೆ ಯಾವ ಟೆಂಡರ್‌ದಾರರನ್ನು ಕಳಪೆ ಕಾರಣ ನೀಡಿ ಬ್ಲಾಕ್‌ಲಿಸ್ಟ್‌ಗೆ ಹಾಕಲಾಗಿದೆಯೋ, ಅವರನ್ನೇ ಇಲಾಖೆ ಇನ್ನೊಂದು ಸ್ಕೀಂನಡಿಯಲ್ಲಿ ಸೇರ್ಪಡೆಗೊಳಿಸಿದೆ. ಇಲಾಖೆ ಕಳೆದ ಜೂನ್ 30ಕ್ಕೆ ಮಾಡಿರುವ ಆದೇಶದ ಅನ್ವಯ ಒಂದು ವರ್ಷ ಕಾಲ ಪರಿಶಿಷ್ಟ ಜಾತಿ/ವರ್ಗಗಳ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಆಶ್ರಮ/ವಸತಿ ಶಾಲೆ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ಆಹಾರ ಸಾಮಗ್ರಿ ವಿತರಿಸಲು ಆದೇಶ ನೀಡಲಾಗಿದೆ.

    ಒಂದು ಕಾರ್ಯಕ್ರಮದಡಿ ಬ್ಲಾಕ್‌ಲಿಸ್ಟ್‌ಗೆ ಹಾಕಿ ಅದೇ ಟೆಂಡರ್‌ದಾರರನ್ನು ಇನ್ನೊಂದು ಸ್ಕೀಂನಲ್ಲಿ ಸೇರಿಸಿದ್ದು ಅಕ್ರಮ. ಈ ಬಗ್ಗೆ ಇಲಾಖಾ ಮಟ್ಟದ ತನಿಖೆಯಾದರೆ ಸಾಲದು, ನ್ಯಾಯಾಂಗ ತನಿಖೆ ಅಥವಾ ಯಾವುದೇ ಉನ್ನತ ತನಿಖೆಯಾದಾಗ ಮಾತ್ರ ನ್ಯಾಯ ಸಿಗಬಹುದು.
    -ಸಂಜೀವ ಎಂ.ಆರ್ ಕೊರಗ ಮುಖಂಡರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts