More

    ಯಾರ ಪಾಲಾಗುವರು ಪ್ರದೀಪ್ ನರ್ವಾಲ್? ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು..

    ಬೆಂಗಳೂರು: ಟೂರ್ನಿ ಇತಿಹಾಸದಲ್ಲಿ ಗರಿಷ್ಠ ಅಂಕ ಕಲೆಹಾಕಿರುವ ರೈಡರ್ ಪ್ರದೀಪ್ ನರ್ವಾಲ್ ಭಾನುವಾರದಿಂದ ನಡೆಯಲಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಸ್ಟಾರ್ ಆಟಗಾರರಾದ ರೋಹಿತ್ ಕುಮಾರ್, ರಾಹುಲ್ ಚೌಧರಿ, ಅಜಯ್ ಠಾಕೂರ್, ದೀಪಕ್ ನಿವಾಸ ಹೂಡಾ, ನಿತೀಶ್ ಕುಮಾರ್ ಸಹಿತ ಪ್ರಮುಖ ಆಟಗಾರರನ್ನು ಕೊಂಡುಕೊಳ್ಳಲು 12 ಫ್ರಾಂಚೈಸಿಗಳು ಪೈಪೋಟಿ ನಡೆಯಲಿದೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 450ಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಕೇವಲ ಉದಯೋನ್ಮುಖ ಆಟಗಾರರ (ನ್ಯೂ ಯಂಗ್ ಪ್ಲೇಯರ್ಸ್‌) ಹರಾಜು ನಡೆಯಲಿದೆ.

    * ಪ್ರದೀಪ್‌ಗೆ ಜಾಕ್‌ಪಾಟ್ ನಿರೀಕ್ಷೆ: ಲೀಗ್ ಆರಂಭಿಕ ದಿನಗಳಿಂದಲೂ ಪಟನಾ ಪೈರೇಟ್ಸ್ ತಂಡದ ಪ್ರಮುಖ ರೈಡರ್ ಆಗಿದ್ದ ಪ್ರದೀಪ್ ನರ್ವಾಲ್ ದುಬಾರಿ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಗಳಿವೆ. ಕರೊನಾ ಕಾಲದಲ್ಲೂ ಫ್ರಾಂಚೈಸಿಗಳು ಪ್ರತಿಭಾನ್ವೇಷಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈಗಾಗಲೆ ಕೆಲ ಆಟಗಾರರನ್ನು ತಲಾಶ್ ಮಾಡಿವೆ. ಈ ಮೂಲಕ ಕೋವಿಡ್‌ನಿಂದಾಗಿ ಕಳೆದ ವರ್ಷ ರದ್ದುಗೊಂಡಿದ್ದ ಪ್ರೊ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯನ್ನು ಮುಂದಿನ ಡಿಸೆಂಬರ್‌ನಲ್ಲಿ ಆಯೋಜಿಸಲು ಯೋಜನೆ ಸಿದ್ಧಗೊಂಡಿದೆ.

    * ಕಣದಲ್ಲಿ ರಾಜ್ಯದ 38 ಆಟಗಾರರು
    ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದಿಂದ 38 ಮಂದಿ ಪಾಲ್ಗೊಳ್ಳಲಿದ್ದಾರೆ. ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ಪ್ರತಿನಿಧಿಸಿದ್ದ ಸುಖೇಶ್ ಹೆಗ್ಡೆ, ಪ್ರಶಾಂತ್ ಕುಮಾರ್ ರೈ, ಜೀವಕುಮಾರ್, ಶಬ್ಬಿರ್ ಬಾಪು, ರಕ್ಷಿತ್, ದರ್ಶನ್ ಕಣದಲ್ಲಿರುವ ಪ್ರಮುಖ ಆಟಗಾರರು. ಕರ್ನಾಟಕದ ಆಟಗಾರ ರಾಕೇಶ್ ಗೌಡ ಅವರನ್ನು ತೆಲುಗು ಟೈಟಾನ್ಸ್ ರಿಟೇನ್ ಮಾಡಿಕೊಂಡಿದ್ದು, ಪಿಕೆಎಲ್‌ನಲ್ಲಿ ರಿಟೇನ್ ಆಗಿರುವ ಕರ್ನಾಟಕದ ಏಕೈಕ ಆಟಗಾರನಾಗಿದ್ದಾರೆ.

    * 300: 12 ತಂಡಗಳಿಂದ 300 ಆಟಗಾರರಿಗೆ ಅವಕಾಶ ಲಭಿಸುತ್ತದೆ. ಪ್ರತಿ ತಂಡಗಳು ಕನಿಷ್ಠ 18 ಗರಿಷ್ಠ 25 ಆಟಗಾರರನ್ನು ಕೊಂಡುಕೊಳ್ಳಬಹುದು.

    * ಪ್ರತಿ ತಂಡಕ್ಕೆ 4.4 ಕೋಟಿ ರೂ. ಬಜೆಟ್
    ಪ್ರತಿ ತಂಡಕ್ಕೂ ಆಟಗಾರರನ್ನು ಕೊಂಡುಕೊಳ್ಳಲು ಗರಿಷ್ಠ 4.4 ಕೋಟಿ ರೂಪಾಯಿ ಬಜೆಟ್ ನಿಗದಿಪಡಿಸಲಾಗಿದೆ. ದೇಶೀಯ, ವಿದೇಶಿ ಹಾಗೂ ಉದಯೋನ್ಮುಖ ಆಟಗಾರರ ಕೋಟಾ ಮಾದರಿಯಲ್ಲಿ ಆಟಗಾರರನ್ನು ವಿಂಗಡಿಸಲಾಗಿದ್ದು, ಅದರಲ್ಲೂ ದೇಶೀಯ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಎ, ಬಿ, ಸಿ ಡಿ ಕೆಟಗೆರಿಗೆ ಕ್ರಮವಾಗಿ 30, 20, 10, 6 ಲಕ್ಷ ರೂ. ಮೂಲಬೆಲೆ ನಿಗದಿಪಡಿಸಲಾಗಿದೆ. ಪ್ರತಿ ತಂಡಗಳು ಕನಿಷ್ಠ 2, ಗರಿಷ್ಠ 4 ವಿದೇಶಿ ಆಟಗಾರರನ್ನು ಹೊಂದಿರಬೇಕು.

    * ಮೊದಲ ದಿನದ ಹರಾಜು
    ಉದಯೋನ್ಮುಖ ಆಟಗಾರರ ಕೋಟಾ
    ಆರಂಭ: ಸಂಜೆ 6.30

    ಎರಡನೇ ದಿನದ ಹರಾಜು (ಸೋಮವಾರ)
    ವಿದೇಶಿ ಹಾಗೂ ಎ ಕೆಟಗೆರಿ ಆಟಗಾರರು
    ಆರಂಭ: ಮಧ್ಯಾಹ್ನ 3
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಮೂರನೇ ದಿನ (ಮಂಗಳವಾರ)
    ಕೆಟಗೆರಿ ಬಿ,ಸಿ, ಡಿ ವಿಭಾಗದ ಆಟಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts