More

    ಕರೊನಾ ಚಿಕಿತ್ಸೆಗೆ ಖಾಸಗಿ ಸೇವೆ ಮುಕ್ತ; ಶೇ.50 ಹಾಸಿಗೆ ನೀಡಲು ಸಮ್ಮತಿ

    ಬೆಂಗಳೂರು: ಮೂಲ ಸೌಕರ್ಯಗಳ ಕಡಿತ, ಕಾಯ್ದೆಗಳ ಅಸ್ತ್ರವನ್ನು ಕೈಗೆತ್ತಿಕೊಳ್ಳುವ ಮೊದಲೇ ಸರ್ಕಾರದ ಎಚ್ಚರಿಕೆಗೆ ಮಣಿದ ಖಾಸಗಿ ಆಸ್ಪತ್ರೆಗಳು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶೇ.50 ಹಾಸಿಗೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯ ಸವಲತ್ತಿನೊಂದಿಗೆ ಸರ್ಕಾರಕ್ಕೆ ಹಸ್ತಾಂತರಿಸಲು ಸಮ್ಮತಿ ಸೂಚಿಸಿವೆ. ಹಂತಹಂತವಾಗಿ ವಾರದೊಳಗೆ 2,500 ಹಾಸಿಗೆಗಳನ್ನು ಹಸ್ತಾಂತರಿಸಲಿದ್ದು, ಮೊದಲ ಹಂತವಾಗಿ ಮಂಗಳವಾರವೇ 750 ಹಾಸಿಗೆಗಳನ್ನು ಒಪ್ಪಿಸಲಿವೆ. ಅಲ್ಲದೆ, ಸರ್ಕಾರ ನಿಗದಿಪಡಿಸಿದ 3 ಹಂತದ ಚಿಕಿತ್ಸಾ ದರಕ್ಕೂ ಸಮ್ಮತಿಸಿವೆ. ಇದರಿಂದಾಗಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಸಂಘದ ಮುಖ್ಯಸ್ಥರ ಸುದೀರ್ಘ ಸಭೆಯ ಬಳಿಕ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತುಕತೆ ಫಲಪ್ರದವಾದ ಮಾಹಿತಿ ನೀಡಿದರು.

    5 ಜನರ ಸಮಿತಿ ರಚನೆ: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗೆ ಸಂಬಂಧಿ ಸಿದ ನಿರ್ವಹಣೆಗಾಗಿ 5 ಸದಸ್ಯರ ಸಮಿತಿ ರಚಿಸಲಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳಿಂದ ವೈದ್ಯರಾದ ರವೀಂದ್ರ ಹಾಗೂ ನಾಗೇಂದ್ರ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್ ಈ ಸಮತಿಯಲ್ಲಿದ್ದು, ಕಾಲ ಕಾಲಕ್ಕೆ ಸಮಿತಿ ಸಭೆ ಸೇರಿ ಗೊಂದಲ ಬಗೆಹರಿಸಲಿದೆ ಎಂದು ಹೇಳಿದರು.

    ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಸಭೆ ಇಂದು: ಖಾಸಗಿ ಮೆಡಿಕಲ್ ಕಾಲೇಜುಗಳಲ್ಲೂ ಕರೊನಾ ಚಿಕಿತ್ಸೆಗೆ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ರ್ಚಚಿಸಲೆಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಸಭೆ ಮಂಗಳವಾರ ಕರೆಯಲಾಗಿದೆ. ಬೆಂಗಳೂರಿನ 11 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 10,000 ಹಾಸಿಗೆಗಳಿದ್ದು, ಇದರಲ್ಲಿ 5,000 ಹಾಸಿಗೆಗಳು ಕರೊನಾ ರೋಗಿಗಳಿಗೆ ಸಿಗುವ ಸಾಧ್ಯತೆಯಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

    ಷರತ್ತಿಗೆ ಒಪ್ಪಿಗೆ: ಖಾಸಗಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗೆ ವಿಮೆ ಸೌಲಭ್ಯ ನೀಡಬೇಕೆಂಬ ಕೋರಿಗೆ ಸರ್ಕಾರ ಒಪ್ಪಿದೆ. ದರ ಪಟ್ಟಿ ಸಂಬಂಧ 3 ಸುತ್ತಿನ ಸಭೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಬರುವ ರೋಗಿಗಳಿಗೆ ನಿಯಮದಂತೆ ಕ್ರಮ, ಬಿಪಿಎಲ್ ಕಾರ್ಡ್​ನವರಿಗೆ ಒಂದು ದರ, ಉಳಿದ ರೋಗಿಗಳಿಗೆ ಮತ್ತೊಂದು ದರವಿದೆ. ಇದಕ್ಕೆ ಒಪ್ಪಿದರೂ ಈ ದರದಲ್ಲಿ ಸರಿದೂಗಿಸು ವುದು ಕಷ್ಟವಾದರೆ ಮತ್ತೆ ಸರ್ಕಾರದ ಮೊರೆ ಹೋಗುತ್ತೇವೆ ಎಂದರು.

    ಕರೋನೇತರರಿಗೆ ಹೋಟೆಲ್ ವ್ಯವಸ್ಥೆ: ಕರೊನೇತರ ರೋಗಿಗಳಿಗೆ ಹೋಟೆಲ್​ಗಳಲ್ಲಿ ಚಿಕಿತ್ಸೆಗೆ ಅನುಮತಿ ನೀಡಬೇಕೆಂಬ ಖಾಸಗಿ ಆಸ್ಪತ್ರೆಗಳ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿಸಿದ್ದು, ಹೊಟೆಲ್​ಗಳಲ್ಲಿ ರೋಗಿಗಳಿಗೆ ಬೇಕಾದ ಪೊಲೀಸ್ ಭದ್ರತೆ ನೀಡಲಿದೆ ಎಂದು ಆರ್.ಅಶೋಕ್ ತಿಳಿಸಿದರು.

    ಮುಖ್ಯಮಂತ್ರಿ ನಯ, ಮೊನಚು ಮಾತು: ಸಭೆಯ ಪೂರ್ವಭಾವಿಯಾಗಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಸಿಗೆಗಳ ಕೊರತೆಯಿರುವ ಕಾರಣ ಶೇ.50 ಕೊಡಲೇಬೇಕು, ಸರ್ಕಾರ ನಿಗದಿಪಡಿಸಿದ ದರ ಪಾಲಿಸಬೇಕು ಎಂದು ನಯವಾಗಿ ಅಷ್ಟೇ ಮೊನಚಾಗಿ ಹೇಳಿದ್ದರು. ಚಿಕಿತ್ಸೆಗಾಗಿ ವೈದ್ಯರು, ಅಗತ್ಯ ಸಿಬ್ಬಂದಿ ಹಾಗೂ ಉಪಕರಣಗಳೊಂದಿಗೆ ನಾಳೆಯೇ (ಜೂ.30) ಹಸ್ತಾಂತರಿಸಬೇಕು ಎಂದು ತಾಕೀತು ಮಾಡಿ, ಮುಂದಿನದು ನಿಮ್ಮ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದರು. ಜತೆಗೆ ಸಚಿವರು, ಅಧಿಕಾರಿಗಳೊಂದಿಗೆ ಹೊರಬಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯಸ್ಥರು ಸಭೆ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿದ್ದರು.

    ಸರ್ಕಾರದ ಜತೆ ನಾವಿದ್ದೇವೆ: ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, ಕರೊನಾ ನಿಯಂತ್ರಣದಲ್ಲಿ ಸರ್ಕಾರದ ಜತೆಗೆ ಸದಾ ನಾವಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಹಲವು ಚಿಕಿತ್ಸೆಗಳ ಜತೆಗೆ 16ರಿಂದ ಕರೊನಾ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಕೆಲವೆಡೆ ಚಿಕಿತ್ಸೆ ಕೊಡಲಾಗದೇ ಸಮಸ್ಯೆಯಾಗಿದ್ದೂ ಹೌದು. ಹಾಸಿಗೆಗಳು ಸಿದ್ಧವಿಲ್ಲದಿರುವುದು, ದಿಢೀರ್ ಸೋಂಕು ಏರಿಕೆ, ಸೌಲಭ್ಯಗಳ ಕೊರತೆ ಇದಕ್ಕೆ ಕಾರಣ ಎಂದು ಸಮಜಾಯಿಷಿ ನೀಡಿದರು.

    ಬೇರೆ ರಾಜ್ಯಗಳ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕಿತರು ಹಾಗೂ ಮರಣ ಪ್ರಮಾಣ ಕಡಿಮೆಯಿದ್ದು, ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪ್ರಕರಣ ಹೆಚ್ಚಾಗಿದ್ದರೂ ಜನರು ಗಾಬರಿಗೊಳ್ಳುವುದು ಬೇಡ. ಮುನ್ನೆಚ್ಚರಿಕೆ ಕ್ರಮಗಳು ಪಾಲಿಸಿ ಸರ್ಕಾರಕ್ಕೆ ಸಹಕರಿಸಬೇಕು.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts