More

    ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ, ಮಂದಿರ ಬಿಟ್ಟರೆ ಬೇರೇನಿಲ್ಲ; ರಸ್ತೆ, ಸೇತುವೆ ನಿರ್ಮಾಣವೇ ಅಭಿವೃದ್ಧಿಯಲ್ಲ: ಅನಿಲ್ ತಡಕಲ್

    ಶಿವಮೊಗ್ಗ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂದಿರ ಬಿಟ್ಟರೆ ಬೇರೆ ವಿಷಯಗಳೇ ಇಲ್ಲ ಎಂದು ಕೆಪಿಸಿಸಿ ಮುಖ್ಯ ವಕ್ತಾರ, ಶಿವಮೊಗ್ಗ ಲೋಕಸಭಾ ಚುನಾವಣೆ ಉಸ್ತುವಾರಿ ಅನಿಲ್ ತಡಕಲ್ ತಿಳಿಸಿದರು.

    ರಸ್ತೆ, ಸೇತುವೆಗಳ ನಿರ್ಮಾಣ ಮಾಡುವುದೇ ಅಭಿವೃದ್ಧಿಯಲ್ಲ. ರಾಜಕಾರಣಿಗಳು ಇಲ್ಲದಿದ್ದರೂ ರಸ್ತೆ, ಸೇತುವೆಗಳು ನಿರ್ಮಾಣ ಆಗುತ್ತವೆ. ಜನರನ್ನು ಬಡತನ ರೇಖೆಯಿಂದ ಹೊರತರುವ, ಯುವಕರಿಗೆ ಉದ್ಯೋಗ ಸೃಷ್ಟಿಸುವಂತಹ ಯಾವುದೇ ಯೋಜನೆಗಳು ಅವರ ಬಳಿ ಇಲ್ಲ. ಹಾಗಾಗಿ ಕಳೆದ ಎರಡು ಬಾರಿಯಂತೆ ಈ ಸಲವೂ ಮೋದಿ ಮುಂದಿಟ್ಟುಕೊಂಡೇ ಚುನಾವಣೆಗೆ ಹೊರಟಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಪ್ರತಿ ಬಾರಿಯೂ ಬಿಜೆಪಿ ಮೋದಿಯನ್ನೇ ಒಂದು ವಿಷಯ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಬಾರಿ ಅದಕ್ಕೆ ಹೊಸದಾಗಿ ರಾಮಮಂದಿರವನ್ನು ತಮ್ಮ ಸಾಧನೆ ಎಂಬಂತೆ ಜನಸಾಮಾನ್ಯರಿಗೆ ಪ್ರದರ್ಶಿಸುತ್ತಿದ್ದಾರೆ. ಇವೆರಡನ್ನೂ ಹೊರತುಪಡಿಸಿದರೆ ಬಿಜೆಪಿ ಅವರ ಬಳಿ ಯಾವುದೇ ಹೊಸ ಅಸ್ತ್ರಗಳಿಲ್ಲ ಎಂದು ಟೀಕಿಸಿದರು.
    ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮಗಳನ್ನೂ ಕೊಟ್ಟಿಲ್ಲ. ಅವರ ಬಳಿ ಅದರ ಅಜೆಂಡಾವೂ ಇಲ್ಲ. ಇಂತಹವರಿಂದ ಜನ ಸಾಮಾನ್ಯರ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ. ನಮ್ಮ ಪಕ್ಷ ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಶೇ.98 ಫಲಾನುಭವಿಗಳು ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಬಡವರ ಹಾಗೂ ಮಧ್ಯಮವರ್ಗದವರ ಜೀವನಮಟ್ಟ ಸುಧಾರಣೆಯಾಗಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಅಹಿಂದ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಡಿ.ಮಂಜುನಾಥ್, ಆದರ್ಶ ಹುಂಚದಕಟ್ಟೆ, ಜಿತೇಂದ್ರ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

    ಎಲ್ಲ ವರ್ಗದವರ ಪ್ರಣಾಳಿಕೆ
    ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಹೆಣ್ಣು ಮಕ್ಕಳಿಗೆ, ದೇಶದ ಅನ್ನದಾತರಿಗೆ, ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೆ ರಾಷ್ಟ್ರದ ಎಲ್ಲ ಸಮುದಾಯಗಳಿಗೆ ಅನುಕೂಲವಾಗುವಂತಹ ನ್ಯಾಯ ಸಮ್ಮತವಾದ ಕಾರ್ಯ ಯೋಜನೆಯನ್ನು ಪ್ರಣಾಳಿಕೆ ಒಳಗೊಂಡಿದೆ ಎಂದು ಅನಿಲ್ ತಡಕಲ್ ಹೇಳಿದರು. ಪ್ರತಿ ಹೆಣ್ಣು ಮಗುವಿಗೆ ಒಂದು ಲಕ್ಷ ರೂ. ಅನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಅದೇ ರೀತಿ ರೈತ ಸಮುದಾಯಕ್ಕೆ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಹಾಗೂ ನಮ್ಮ ರಾಷ್ಟ್ರೀಯ ನಾಯಕರು ಬಿಡುಗಡೆ ಮಾಡಿರುವ ಪ್ರಣಾಳಿಕೆಗಳನ್ನು ಪ್ರತಿಯೊಬ್ಬ ಮತದಾರನಿಗೆ ತಿಳಿಸಲಾಗುವುದು. ಆ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.
    ಜಾಗ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ
    ಅಯೋಧ್ಯೆ ರಾಮಮಂದಿರಕ್ಕೆ 65 ಎಕರೆ ಜಾಗವನ್ನು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಅನಿಲ್ ತಡಕಲ್ ತಿಳಿಸಿದರು. ರಾಜೀವ್ ಗಾಂಧಿ ಅವರು ಮೊದಲ ಬಾರಿಗೆ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಬಿಜೆಪಿಯವರು ರಾಮ ಮಂದಿರ ಕಟ್ಟಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ರಸ್ತೆ , ಸೇತುವೆ ಮಾಡುವುದೇ ದೊಡ್ಡ ಸಾಧನೆಯಲ್ಲ ಎಂದು ಛೇಡಿಸಿದರು. ಬಿಜೆಪಿ ಈ ಬಾರಿ ರಾಷ್ಟ್ರಮಟ್ಟದಲ್ಲಿ 160 ಸೀಟುಗಳನ್ನು ಮಾತ್ರ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇವೆ. ಈ ಬಾರಿ ಗೆಲುವು ನಿಶ್ಚಿತ. ಸುಮಾರು 1.5 ಲಕ್ಷ ಮತಗಳ ಅಂತರದಲ್ಲಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಬಿಜೆಪಿಗೆ ಎಸ್.ಬಂಗಾರಪ್ಪ ಅವರ ಆಗಮನದಿಂದ ರಾಜ್ಯದಲ್ಲಿ 71 ಶಾಸಕರು ಗೆಲ್ಲುವಂತಾಯಿತು. ಜೆಡಿಎಸ್ ಪಕ್ಷ ಸಹ ಎಸ್.ಬಂಗಾರಪ್ಪ ಅವರ ಸೇರ್ಪಡೆಯಿಂದ ಒಂದಿಷ್ಟು ಬಲವನ್ನು ಪಡೆದುಕೊಂಡಿತು.
    ಅನಿಲ್ ತಡಕಲ್,
    ಶಿವಮೊಗ್ಗ ಲೋಕಸಭಾ ಚುನಾವಣಾ ಕಾಂಗ್ರೆಸ್ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts