More

    ತಾಕತ್ತಿದ್ದರೆ ಚಿಕ್ಕೋಡಿ ಜಿಲ್ಲೆಗಾಗಿ ಮುಂದೆ ಬನ್ನಿ- ಬಿ.ಆರ್. ಸಂಗಪ್ಪಗೋಳ

    ಚಿಕ್ಕೋಡಿ: ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ತಾಕತ್ತಿದ್ದರೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಲು ಮುಂದೆ ಬರಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಬಿ.ಆರ್. ಸಂಗಪ್ಪಗೋಳ ಸವಾಲು ಹಾಕಿದ್ದಾರೆ.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜಕಾರಣಿಗಳಿಗೆ ಚಿಕ್ಕೋಡಿಯನ್ನು ಜಿಲ್ಲೆ ಮಾಡುವ ಇಚ್ಛಾಶಕ್ತಿ ಇಲ್ಲ. ಜಿಲ್ಲಾ ವಿಭಜನೆ ಕೂಗು ಎದ್ದಾಗಲೆಲ್ಲ ಮುಖ್ಯಮಂತ್ರಿ ಮುಖಂಡರನ್ನು ಕರೆದಾಗ ಕೆಲ ಜನಜನಪ್ರತಿನಿಧಿಗಳು ಜಿಲ್ಲೆ ವಿಭಜನೆ ಬೇಡ ಎಂದರೆ, ಕೆಲವರು ಮಾಡೋಣ ಎನ್ನುತ್ತಾರೆ. ವಿನಃ ಪಕ್ಷಾತೀತವಾಗಿ ಜಿಲ್ಲೆ ಮಾಡಲು ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

    ಚಿಕ್ಕೋಡಿಯನ್ನು ಜಿಲ್ಲೆ ಮಾಡಬೇಕೆಂದು ಹೋರಾಟ ಮಾಡಿದಾಗ ಪ್ರಭಾವಿ ಮುಖಂಡರು ವೇದಿಕೆಗೆ ಬಂದು ನಮ್ಮ ಸರ್ಕಾರ ಬಂದಲ್ಲಿ ಚಿಕ್ಕೋಡಿ ಜಿಲ್ಲೆ ನಿಶ್ಚಿತ ಎಂದು ಹೇಳಿ ಸುಳ್ಳು ಭರವಸೆ ನೀಡುವುದೇ ಆಗಿದೆ. ಹೀಗಾಗಿ ಕೆಲ ಜನ ಅಧಿಕಾರ ಕಳೆದುಕೊಂಡರೆ, ಇನ್ನು ಕೆಲ ಜನ ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿಯೂ ಜಿಲ್ಲೆ ಮಾಡುವ ಘೋಷಣೆ ಮಾಡಿ ಮಾತು ತಪ್ಪಿದ್ದಾರೆ. ಆದ್ದರಿಂದ ಜಿಲ್ಲೆಯ ರಾಜಕಾರಣಿಗಳಲ್ಲಿ ಧಮ್ ಇದ್ದರೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಲಿ ಎಂದು ಹರಿಹಾಯ್ದರು.

    ಜಿಲ್ಲೆಯ ರಾಜಕಾರಣಿಗಳು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿದರು. ಅರವಿಂದ ಕೇಜ್ರಿವಾಲ ಅಧಿಕಾರಕ್ಕಾಗಿ ಮಾಡಿದ ರಾಜಕೀಯ ಕ್ರಾಂತಿಯಂತೆ ಚಿಕ್ಕೋಡಿ ಜಿಲ್ಲೆಗಾಗಿ ಗ್ರಾಮಮಟ್ಟದಲ್ಲಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

    ಕಚೇರಿ ಸ್ಥಳಾಂತರವಾಗಲಿ: ಈಗಾಗಲೇ ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿ ಸರ್ಕಾರ ಬೆಳಗಾವಿಯನ್ನೇ ಮರೆತಿದೆ. ಕೇಂದ್ರ ಸ್ಥಾನದಲ್ಲಿರುವ ಎಲ್ಲ ಕಚೇರಿಗಳನ್ನು ದಕ್ಷಿಣ ಹಾಗೂ ಉತ್ತರ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮಾದರಿಯಲ್ಲಿ ವಿಕೇಂದ್ರಿಕರಣ ಮಾಡಿ ಬೆಳಗಾವಿಯ ಸುವರ್ಣ ಸೌಧದ ಬಳಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಕಚೇರಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

    ಬೆಳಗಾವಿ ಜಿಲ್ಲೆಗೆ ಅನ್ಯಾಯ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಗದೀಶ ಶೆಟ್ಟರ್ ಅವರು ತಮ್ಮ ತವರು ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಸಮಾವೇಶ ನಡೆಸಿದ್ದಾರೆ. ಧಾರವಾಡ ಜಿಲ್ಲೆಗೆ 50 ಸಾವಿರ ಕೋಟಿ ರೂ. ಹೂಡಿಕೆ ಯೋಜನೆ ನೀಡುವ ಮೂಲಕ ಬೆಳಗಾವಿ ಜಿಲ್ಲೆಗೆ ಕೇವಲ ಒಂದು ಸಾವಿರ ಕೋಟಿ ಹೂಡಿಕೆ ಯೋಜನೆ ರೂಪಿಸಿ ಅನ್ಯಾಯ ಮಾಡಿದ್ದಾರೆ ಎಂದು ಬಿ.ಆರ್. ಸಂಗಪ್ಪಗೋಳ ಆರೋಪಿಸಿದರು. ಸುರೇಶ ಬ್ಯಾಕೂಡೆ, ತುಕಾರಾಮ ಕೋಳಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts